ಗ್ಯಾಸ್ ಸ್ಟೌವ್ ಹಾಗೂ ಸಿಲೆಂಡರ್ ಸಂಪರ್ಕ ಶೀಘ್ರ ಒದಗಿಸಿ : ಪಿ. ಸುನೀಲ್ ಕುಮಾರ್

ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ : ಪ್ರಗತಿ ಪರಿಶೀಲನಾ ಸಭೆ


ಕೊಪ್ಪಳ ಅ.  : ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದಂಹ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್ ಹಾಗೂ ಸಿಲೆಂಡರ್ ಸಂಪರ್ಕವನ್ನು ಶೀಘ್ರವಾಗಿ ಒದಗಿಸಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಗ್ಯಾಸ್ ಏಜೆನ್ಸಿಯವರಿಗೆ ಸೂಚನೆ ನೀಡಿದರು.
ಬಿಪಿಎಲ್/ ಅಂತ್ಯೋದಯ ಪಡಿತರ ಚೀಟಿ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಕಲ್ಪಿಸುವ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಿಲಭಾಗ್ಯ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ೫೨೦೫೯ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಪಂಚಾಯತ್ ಮುಖಾಂತರ ೨೪೯೬೬ ಫಲಾನುಭವಿಗಳಿಂದ ಅರ್ಜಿ ಸಲ್ಲಿಕೆಯಾಗಿವೆ. ೧೭೭೦೮ ಅರ್ಜಿಗಳು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಯಿಂದ ಅಪ್‌ರೊಲ್ ಆಗಿದ್ದು, ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಇಲಾಖೆ ವತಿಯಿಂದ ಡಿ.ಡಿ ಮುಖಾಂತರ ೧೬೬೧ ಫಲಾನುಭವಿಗಳಿಗೆ ಗ್ಯಾಸ್ & ಸಿಲಿಂಡರ್ ವೆಚ್ಚವನ್ನು ಏಜೆನ್ಸಿಗಳಿಗೆ ನೀಡಿದ್ದಾಗ್ಯೂ ಸಹ ಕೇವಲ ನಾಲ್ಕು ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಕಲ್ಪಿಸಲಾಗಿದೆ. ಇದ್ದಕೆ ಮುಖ್ಯ ಕಾರಣ ಏನು ಎಂದು ಪ್ರಶ್ನಿಸಿದರು. ಕೆ.ವೈ.ಸಿ ಕ್ಲೇರ್ ಆದ ನಂತರ ಸಿಲೆಂಡರ್ ನೀಡಬೇಕು. ಯೋಜನೆಯಡಿ ಈಗಾಗಲೇ ಕ್ರಾಫ್ ಸರ್ವೇ ನಡೆಯುತ್ತಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಇಲಾಖೆ ಯಿಂದ ಗ್ಯಾಸ್ ಸ್ಟೌವ್ ಹಾಗೂ ಏಜೆನ್ಸಿಯವರಿಂದ ಸಿಲೆಂಡರ್ ಅನ್ನು ಕೂಡಲೇ ನೀಡಬೇಕು. ೧೬೬೧ ಫಲಾನುಭವಿಗಳಿಗೆ ಒಂದು ವಾರದೊಳಗೆ ಸೌಲಭ್ಯ ಒದಗಿಸಿ ಹಾಗೂ ಒಟ್ಟು ಸಲ್ಲಿಕೆಯಾದ ಅರ್ಜಿಗಳನ್ನು ಶೀಘ್ರವಾಗಿ ಪರಿಶೀಲಿಸಿ ಎಲ್ಲರಿಗೂ ಸ್ಟೌವ್ ಹಾಗೂ ಸಿಲೆಂಡರ್ ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳಿ ಮತ್ತು ಈ ಕುರಿತಾದ ಕಾರ್ಯದ ಸಂಪೂರ್ಣ ಮಾಹಿತಿಯನ್ನು ನಮ್ಮ ಕಛೇರಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಗ್ಯಾಸ್ ಏಜೆನ್ಸಿಯವರಿಗೆ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಭಾರ ಉಪನಿರ್ದೇಶಕರು ಆಗಿರುವ ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ ಅವರು ಮಾತನಾಡಿ, ಯಾವುದೇ ಅನಿಲ ಸಂಪರ್ಕವನ್ನು ಹೊಂದದೇ ಇರುವ ನಗರ ಮತ್ತು ಗ್ರಾಮಾಂತರ ಪ್ರದೇಶದ ಬಿಪಿಎಲ್ ಆದ್ಯತಾ ಕುಟುಂಬಗಳು ಅಥವಾ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರು, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಕಟ್ಟಡ ಕಾರ್ಮಿಕರು ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಗೆ ಅರ್ಹರಾಗಿದ್ದು, ಈಗಾಗಲೇ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ೧೬೬೧ ಜನ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತೆ ವೆಚ್ಚವನ್ನು ಗ್ಯಾಸ್ ಏಜೆನ್ಸಿಸ್‌ಗಳಿಗೆ ಡಿಡಿ ಮುಖಾಂತರ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಸುಮಾರು ೫೨೦೦ ಫಲಾನೂಬವಿಗಳಿಗೆ ಸೌಲಭ್ಯ ನೀಡಲು ಗುರಿಯನ್ನು ನಿಗಧಿಪಡಿಸಲಾಗಿದ್ದು, ಅರ್ಜಿ ಸಲ್ಲಿಸಿದವರ ಪೈಕಿ ಆಯ್ಕೆಯಾದ ಮತ್ತು ಉಳಿದ ಅರ್ಹ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.  ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಗ್ಯಾಸ್ ಏಜೆನ್ಸಿಗಳ ವ್ಯವಸ್ಥಾಪಕರು ಹಾಗೂ ಗೋದಾಮು ಮಾಲಿಕರು ಉಪಸ್ಥಿತರಿದ್ದರು.