ಗೋಶಾಲೆ ನಿರ್ವಹಿಸುವ ಸಂಘ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿ ಪಾಲಿಸಿ- ಎಂ. ಕನಗವಲ್ಲಿ

): ಗೋಶಾಲೆಗಳನ್ನು ನಡೆಸುವ ಸಂಘ ಸಂಸ್ಥೆಗಳಿಗೆ ಸರ್ಕಾರ ಸಹಾಯಧನ ನೀಡುವ ಯೋಜನೆಯಿದ್ದು, ಇಂತಹ ಸಂಘ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪ್ರಾಣಿ ಕಲ್ಯಾಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋಶಾಲೆಗಳಿಗೆ ಭಾರತ ಪ್ರಾಣಿ ಕಲ್ಯಾಣ ಮಂಡಳಿ/ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದ್ದು, ಅಶಕ್ತ, ನಿರುಪಯುಕ್ತ ಹಾಗೂ ಅನುತ್ಪಾದಕ ಜಾನುವಾರುಗಳ ರಕ್ಷಣೆ, ಪೋಷಣೆ ಮತ್ತು ಪಾಲನೆ ಮಾಡುವ ನಿಟ್ಟಿನಲ್ಲಿ ಯೋಜನೆ ಉಪಯುಕ್ತವಾಗಿದೆ. ಕೊಪ್ಪಳದ ಮಹಾವೀರ ಜೈನ ಗೋಶಾಲೆಯಲ್ಲಿ 630 ಜಾನುವಾರು, ಯಲಬುರ್ಗಾದ ಬಸವಲಿಂಗೇಶ್ವರ ಶ್ರೀಧರ ಮುರಡಿ ಹಿರೇಮಠ ಗೋಶಾಲೆ ಸೇವಾ ಸಂಘದಲ್ಲಿ 150 ಜಾನುವಾರು ಹಾಗೂ ಕುಷ್ಟಗಿ ತಾಲೂಕು ಗುಡಿಕಲಕೇರಿಯ ಜಯಮಲ ಜೈನ್ ಗೋಶಾಲೆಯಲ್ಲಿ ಸುಮಾರು 238 ಜಾನುವಾರುಗಳನ್ನು ಪೋಷಿಸಲಾಗುತ್ತಿದ್ದು, ಆರ್ಥಿಕ ಸಹಾಯಧನಕ್ಕಾಗಿ ಪ್ರಸ್ತಾವನೆಯನ್ನು ಸಂಬಂಧಪಟ್ಟ ತಾಲೂಕಿನ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಯೋಜನೆಯಡಿ ನೀಡುವ ಅನುದಾನವು ನಿರ್ವಹಣಾ ವೆಚ್ಚವಾಗಿ ನೀಡಲಾಗುತ್ತಿದೆ. ಉಳಿದ ಆವರ್ತಕ ವೆಚ್ಚಗಳನ್ನು ಆಯಾ ಸಂಘ ಸಂಸ್ಥೆಗಳೆ ಭರಿಸಬೇಕಾಗುತ್ತದೆ. ಸರ್ಕಾರ ನೀಡುವ ಅನುದಾನವನ್ನು ಗೋವುಗಳ ನಿರ್ವಹಣೆ ಅವಶ್ಯವಿರುವ ನೀರಿನ ವ್ಯವಸ್ಥೆ, ಶೆಡ್ ನಿರ್ಮಾಣ, ತಡೆಗೋಡೆ, ವಿದ್ಯುಚ್ಛಕ್ತಿ ಸಂಪರ್ಕ, ಮೇವು ಅಭಿವೃದ್ಧಿ, ಸಾವಯವ ಗೊಬ್ಬರ ಉತ್ಪಾದನೆ, ಜೈವಿಕ ಅನಿಲ ಉತ್ಪಾದನೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಉಪಯೋಗಿಸಬೇಕು. ಅನುದಾನ ಪಡೆಯುವ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಿ : ನಗರ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಕಂಡುಬಂದಿದ್ದು, ಸಾರ್ವಜನಿಕರಿಗೆ, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಮಾಲೀಕರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳುವಂತೆ ಆಯಾ ಸ್ಥಳೀಯ ಸಂಸ್ಥೆಗಳು ಹಲವು ಬಾರಿ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಹಾವಳಿ ಕಂಡುಬರುತ್ತಿದೆ. ಸಂಬಂಧಪಟ್ಟ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳು, ಮತ್ತೊಮ್ಮೆ ಪ್ರಕಟಣೆ ನೀಡಿ ಬೀದಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ಅಂತಿಮವಾಗಿ ಬೀದಿ ದನಗಳನ್ನು ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಖಾಂತರ ಗೋಶಾಲೆಗಳಿಗೆ ರವಾನಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಧಾಗಾರಗಳ ಬಗ್ಗೆ ಮಾಹಿತಿ ಸಲ್ಲಿಸಿ : ದಿನವೊಂದಕ್ಕೆ 10 ಕ್ಕೂ ಹೆಚ್ಚು ಜಾನುವಾರುಗಳನ್ನು ಒಂದೆಡೆ ವಧೆ ಮಾಡುವ ಸ್ಥಳವನ್ನು ವಧಾಗಾರವನ್ನಾಗಿ ಪರಿಗಣಿಸಲಾಗುತ್ತದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವ ಯಾವುದೇ ವಧಾಗಾರಗಳಿಲ್ಲ. ಕೊಪ್ಪಳದ ಹಿರೇಸಿಂದೋಗಿ ರಸ್ತೆಯಲ್ಲಿ ಜಾನುವಾರುಗಳನ್ನು ಒಂದೆಡೆ ವಧೆ ಮಾಡುವ ಸಂಬಂಧ ನಗರಸಭೆ ನಿರ್ಮಿಸಿರುವ ಕಟ್ಟಡದಲ್ಲಿ ವಧೆ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮಾಹಿತಿ ನೀಡಿದರು. ವಧೆ ಮಾಡಿದ ಜಾನುವಾರುಗಳ ತ್ಯಾಜ್ಯವನ್ನು ಎಂಎಸ್‍ಐಎಲ್ ಇವರಿಗೆ ಗೊಬ್ಬರ ತಯಾರಿಕೆ ಉಪಯೋಗಕ್ಕಾಗಿ ನೀಡಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ನಗರಸಭೆ ಪೌರಾಯುಕ್ತರು ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ವಧಾಗಾರಗಳಿಗೆ ಭೇಟಿ ನೀಡಿ ಪರಿಶೀಲಿಸಿ, ವಸ್ತು ಸ್ಥಿತಿಯ ಕುರಿತು ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ವೇಣುಗೋಪಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು

Please follow and like us:
error