ಗೋಶಾಲೆ ಜನೇವರಿ ಮೊದಲ ವಾರ ಪ್ರಾರಂಭ- ಸಚಿವ ಎಚ್.ಕೆ. ಪಾಟೀಲ್


​ ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆಯ ಕಾರಣದಿಂದ ಜಾನುವಾರುಗಳಿಗೆ ಮೇವು ಲಭ್ಯತೆ ಸಾಧ್ಯತೆ ಕಡಿಮೆ ಇರುವುದರಿಂದ, ಜನವರಿ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ 06 ಗೋಶಾಲೆ ಗಳನ್ನು ಪ್ರಾರಂಭಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದರು ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಪರಿಶೀಲನೆಗೆ ಕೊಪ್ಪಳಕ್ಕೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಬರ ಪರಿಶೀಲನೆ ಸಂಪುಟ ಉಪ ಸಮಿತಿಯು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ಬರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಶೇ. 16 ರಷ್ಟು ಕೊರತೆಯಾಗಿದ್ದರೆ, ಹಿಂಗಾರು ಮಳೆ ಶೇ. 87 ರಷ್ಟು ಭಾರಿ ಕೊರತೆಯಾಗಿದೆ.  ಇದರಿಂದಾಗಿ ಜಾನುವಾರುಗಳಿಗೆ ಬರುವ ದಿನಗಳಲ್ಲಿ ಮೇವು ಲಭ್ಯವಾಗುವ ಸಾಧ್ಯತೆಗಳು ಬಹಳಷ್ಟು ಕಡಿಮೆ ಇದೆ.  ಜಿಲ್ಲೆಯಲ್ಲಿ 14 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ.  ಪ್ರತಿ ವಾರಕ್ಕೆ ಜಿಲ್ಲೆಯಲ್ಲಿನ ಜಾನುವಾರು ಸಂಖ್ಯೆಗಳಿಗೆ ಅನುಗುಣ ವಾಗಿ 19037 ಮೆ.ಟನ್ ಮೇವಿನ ಬೇಡಿಕೆ ಇದೆ.  ಜಿಲ್ಲೆಯಲ್ಲಿ ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಮೇವಿನ ಕೊರತೆ ಯಾಗುವ ಸಂಭವ ಹೆಚ್ಚಾಗಿದೆ.ಮೇವು ಸಂಗ್ರಹಕ್ಕೆ ಮೇವು ಬ್ಯಾಂಕ್‍ಗಳನ್ನು ಪಂಚಾಯತಿ ಕೇಂದ್ರಗಳಲ್ಲಿ ಪ್ರಾರಂಭಿಸಬೇಕು. ಇದಕ್ಕೆ ಕೂಡಲೆ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಸಚಿವ ಎಚ್.ಕೆ. ಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.  ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಜಿ.ಪಂ. ಉಪಾಧ್ಯಕ್ಷೆ ಲಕ್ಮಮ್ಮ ನೀರಲೂಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error