ಗುನ್ನಾಳ ಗ್ರಾಮದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ 

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಶಿಶುವಿನ ರಕ್ಷಣೆ, ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.  ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ನಂದಿ ನಗರದ ಹತ್ತಿರ ಯಾರೋ ಅಪರಿಚಿತರು ನವಜಾತ ಹೆಣ್ಣು ಶಿಶುವನ್ನು ತೊರೆದು ಹೋಗಿದ್ದು, ನವಜಾತ ಶಿಶುವನ್ನು ಗಮನಿಸಿದ ಗ್ರಾಮದ ನಿವಾಸಿ ಶರಣಮ್ಮ ಜೋಳ್ಳಿನ ಎಂಬುವವರು, ಮಗುವನ್ನು ರಕ್ಷಿಸಿ ಮನೆಗೆ ತಗೆದುಕೊಂಡು ಹೋಗಿ ಶುಚಿಗೊಳಿಸಿ ತಾತ್ಕಾಲಿಕ ಆಶ್ರಯವನ್ನು ನೀಡಿದ್ದಾರೆ.

ಮಾಹಿತಿ ತಿಳಿದ ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ ರೆಡ್ಡಿ,  ಸಮಾಜಕಾರ್ಯಕರ್ತ ರವಿಕುಮಾರ ಪವಾರ, ಬೇವೂರು ಪೊಲೀಸ್ ಠಾಣೆಯ ಪಿ.ಎಸ್.ಐ ಶಿವರಾಜ್, ಸಿಬಂಧಿಗಳಾದ ರಾಮಣ್ಣ ಅವರು ಸ್ಥಳಕ್ಕೆ ತೆರಳಿ ಮಗುವನ್ನು ವಶಕ್ಕೆ ಪಡೆದು, ೧೦೮ರ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.  ಬೇವೂರು ಪೊಲೀಸ್ ಠಾಣೆಯ ಪಿ.ಎಸ್.ಐ ಶಿವರಾಜ್ ಅವರು ಮಾತನಾಡಿ, ಈ ರೀತಿಯಲ್ಲಿ ತೊರೆದು ಹೋದ ಮಕ್ಕಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು.  ಯಾರಾದರು ಅನಧಿಕೃತವಾಗಿ ಸಾಕುವ ಉದ್ದೇಶದಿಂದ ಮಾಹಿತಿಯನ್ನು ಮುಚ್ಚಿಟಲ್ಲಿ  ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫ರ ಕಲಂ ೩೪ರಡಿಯಲ್ಲಿ ೬ ತಿಂಗಳ ಸೆರೆವಾಸ ಮತ್ತು ರೂ. ೧೦.೦೦೦/- ದಂಡ ತಪ್ಪಿದಲ್ಲ.  ಅನಧಿಕೃತವಾಗಿ ಹಾಗೂ  ಈ ಕಾಯ್ದೆಯ ನಿಯಮಾವಳಿಗಳನ್ನು ಪಾಲಿಸದೇ ಅಕ್ರಮವಾಗಿ ಮಗುವನ್ನು ಸಾಕುತ್ತಿದ್ದಲ್ಲಿ, ಕಲಂ ೮೦ರನ್ವಯ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.  ಆದ್ದರಿಂದ ಈ ರೀತಿ ಪರಿತ್ಯಜಿಸಲ್ಪಟ್ಟ ಮಕ್ಕಳು ಕಂಡುಬಂದಲ್ಲಿ ಹತ್ತಿರ ಪೊಲೀಸ್ ಠಾಣೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಮಕ್ಕಳ ಸಹಾಯವಾಣಿ-೧೦೯೮ಕ್ಕೆ ಮಾಹಿತಿಯನ್ನು ನೀಡಿ ಎಂದು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸೂಚನೆ ನೀಡಿದರು.   ನವಜಾತ ಶಿಶು ರಕ್ಷಣಾ ಕಾರ್ಯದಲ್ಲಿ ರೆಹಮಾನ, ಅಂಗನವಾಡಿ ಕಾರ್ಯಕರ್ತೆಯಾದ ಬಸವಣೆಮ್ಮ ಹಟ್ಟಿ ಹಾಗೂ ೧೦೮ ಸಿಬ್ಬಂದಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Please follow and like us:
error