You are here
Home > Koppal News > ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ; ಶಾಂತಿ ಮಾರ್ಗ ಸ್ತಬ್ದಚಿತ್ರಕ್ಕೆ ಸ್ವಾಗತ

ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ; ಶಾಂತಿ ಮಾರ್ಗ ಸ್ತಬ್ದಚಿತ್ರಕ್ಕೆ ಸ್ವಾಗತ

ಕೊಪ್ಪಳ.13- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ಸತ್ಯ ಮಾರ್ಗ ಹಾಗೂ ಶಾಂತಿ ಮಾರ್ಗ ಎಂಬ ಎರಡು ಸ್ತಬ್ದಚಿತ್ರವನ್ನು ಆಯೋಜಿಸಲಾಗಿದ್ದು ಶಾಂತಿ ಮಾರ್ಗ ಸ್ತಬ್ದಚಿತ್ರವು ಅಕ್ಟೋಬರ್ 13 ರಂದು ಕೊಪ್ಪಳ ಜಿಲ್ಲೆ ಗಂಗಾವತಿಗೆ ಆಗಮಿಸಿತು.
ಸ್ತಬ್ದಚಿತ್ರದಲ್ಲಿ ಬಾಲಕ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಭಾರತೀಯ ಸೈನ್ಯ ಶುಶ್ರೂಷಾ ಪಥದಲ್ಲಿ ಗಾಂಧಿ, ದೇಶಿ ಉಡುಪಿನಲ್ಲಿ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಗಾಂಧಿ, ಬರವಣಿಗೆಯಲ್ಲಿ ನಿರತ ಗಾಂಧಿ ಹಾಗೂ ಅನಂತದೆಡೆಗೆ ಗಾಂಧಿ ಕುರಿತ ಭಾವಚಿತ್ರಗಳು ಇದರಲ್ಲಿವೆ. ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಚಿತ್ರಣವನ್ನು ನಿರ್ಮಿಸಲಾಗಿದ್ದು ಗಾಂಧಿಯೊಂದಿಗೆ ಹೋರಾಟದಲ್ಲಿ ಭಾಗವಹಿಸಿದ ಜನರ ಗುಂಪಿನ ಚಿತ್ರಣವು ಇದರಲ್ಲಿ ನಿಜರೂಪದಂತಿರುವುದು ವಿಶೇಷವಾಗಿದೆ.
ಮತ್ತು ಗಾಂಧಿ ಹೇಳಿದಂತಹ ಅನೇಕ ಘೋಷ ವಾಕ್ಯಗಳ ಎಲ್‍ಇಡಿ ಪ್ರದರ್ಶನವು ಇದರಲ್ಲಿ ಲಭ್ಯವಿದೆ. ಗಾಂಧಿ ಹೇಳಿದ ಘೋಷಣ ವಾಕ್ಯಗಳು ಇಂದಿಗೂ ಸತ್ಯವೆನಿಸಿದ್ದು ಸಾವಿರಾರು ಮಾತುಗಳಿಗಿಂತ ಒಂದು ಚಿಕ್ಕ ಕೆಲಸವೇ ಮೇಲು, ಅಹಿಂಸೆ ಪರಮಶ್ರೇಷ್ಠವಾದದು, ನನ್ನ ಜೀವನವೇ ನನ್ನ ಸಂದೇಶ, ಅಹಿಂಸೆ ಧೈರ್ಯದ ಶಿಖರ, ಮನುಕುಲದ ದೊಡ್ಡ ಆಯುಧ ಶಾಂತಿ, ಸರಳತೆ ಎಂಬುದು ಜಾಗತಿಕ ಚಿಂತನೆಯ ಧಾತು ಎಂಬ ಘೋಷ ವಾಕ್ಯಗಳನ್ನು ಬಿತ್ತರಿಸಲಾಗುತ್ತದೆ. ಮತ್ತು ವಾಹರರ ಮೂಲಕ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾತನಾಡಬಾರದು ಎಂಬ ಘೋಷಣೆಗಳು ಗಾಂಧೀಜಿಯವರು ಅನುಸರಿಸಿಕೊಂಡು ಬಂದಂತಹ ಮಾರ್ಗವಾಗಿದ್ದು ಇದರ ಉಲ್ಲೇಖವನ್ನು ಇಲ್ಲಿ ಕಾಣಬಹುದಾಗಿದೆ.
ಸ್ತಬ್ದಚಿತ್ರವು ಬಳ್ಳಾರಿ ಜಿಲ್ಲೆಯ ಕಂಪ್ಲಿ ಮೂಲಕ ಗಂಗಾವತಿಗೆ ಆಗಮಿಸಿತು. ಸಂಜೆ 5 ಗಂಟೆಗೆ ಗಂಗಾವತಿ ಪಟ್ಟಣದ ಇಂದಿರಾಗಾಂಧಿ ವೃತ್ತದಲ್ಲಿ ಶಾಸಕರಾದ ಪರಣ್ಣ ಮುನವಳ್ಳಿಯವರು ಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಈ ವೇಳೆ ತಹಶೀಲ್ದಾರ್ ವೀರೇಶ್ ಬಿರಾದಾರ್, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲೇಶಪ್ಪ, ವೃತ್ತ ನಿರೀಕ್ಷಕರಾದ ಉದಯರವಿ, ವಾರ್ತಾ ಇಲಾಖೆ ಎಂ.ಅವಿನಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅ.14 ರಂದು ಮಧ್ಯಾಹ್ನ 12 ಕೊಪ್ಪಳ ನಗರ ತಲುಪಲಿದ್ದು ಇಲ್ಲಿ ಸ್ವಾಗತ ಹಾಗೂ ಮೆರವಣಿಗೆ ನಡೆಯಲಿದೆ. ನಂತರ ಮಧ್ಯಾಹ್ನ 2 ಗಂಟೆಗೆ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಲಿದೆ. ಇಲ್ಲಿ ಸ್ವಾಗತ ಹಾಗೂ ಮೆರವಣಿಗೆ ನಡೆಯಲಿದೆ. ಗಾಂಧೀಜಿಯವರ ಕುರಿತ ಅಪರೂಪದ ರಥ ಇದಾಗಿದ್ದು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಲು ವಾರ್ತಾಧಿಕಾರಿ ಧನಂಜಯ ಕೋರಿದ್ದಾರೆ.

Top