ಗಾಂಧಿ ಸೇವಾ ಸಪ್ತಾಹ। ಬಿಜೆಪಿಯಿಂದ ಪಾದಯಾತ್ರೆ


ಕೊಪ್ಪಳ,ಅ.೧೬: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ ನೇ ವರ್ಷಾಚರಣೆ ಅಂಗವಾಗಿ ಪ್ರತಿಯೊಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷವು ಅ.೨ ರಿಂದ ೩೧ ರವರೆಗೆ ಗಾಂಧಿ ಸೇವಾ ಸಪ್ತಾಹ ೧೫೦ ಕೀ.ಮಿ ಪಾದಯಾತ್ರೆ ನಡೆಸಲು ಉದ್ಧೇಶಿಸಿದೆ. ಇದರ ನಿಮಿತ್ತ ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರಾದ ಕರಡಿ ಸಂಗಣ್ಣ ಅವರು ಬುಧವಾರದಂದು ಬೆಳಗ್ಗೆ ೧೧:೦೦ ಗಂಟೆಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಿನ್ನಾಳದ ಹಿರೇಹಳ್ಳ ಜಲಾಶಯದಲ್ಲಿ ಬಾಗಿನ ಅರ್ಪಿಸುವ ಮುಖಾಂತರ ೧೫೦ ಕೀ.ಮಿ ಪಾದಯಾತ್ರೆಗೆ ಚಾಲನೆ ನೀಡಿ ಭಾಗವಹಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ದೇಶವನ್ನು ಸ್ವತಂತ್ರಗೊಳಿಸಲು ಸಾಕಷ್ಟು ಮಹನೀಯರು, ಹೋರಾಟಗಾರರು, ಚಿಂತನಶೀಲರು, ಪ್ರಗತಿಪರರು ಹಗಲಿರುಳು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಫಲವಾಗಿ ಭಾರತವು ಸ್ವತಂತ್ರಗೊಂಡಿದೆ. ಇಂತಹ ಮಹನೀಯರನ್ನು ನೆನೆಯುವ ಸಲುವಾಗಿ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ಸೂಚನೆಯ ಮೇರೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೧೫೦ ಕೀ.ಮಿ ಗಳ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಮಹಾತ್ಮರ ಜೀವನ ಚರಿತ್ರೆ ಅವರ ತತ್ವ ಸಿದ್ಧಾಂತಗಳು ಹಾಗೂ ಅವರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆಗೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತಿಳಿಸುವ ಮಹಾದಾಸೆಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ ಮಹಾತ್ಮ ಗಾಂಧೀಜಿಯವರ ಕನಸಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಮಹತ್ವ ಕೊಟ್ಟಿದ್ದರ ಪರಿಣಾಮವಾಗಿ ಇವತ್ತು ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನ ದಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳನ್ನಾಗಿ ಮಾರ್ಪಡಿಸಲು ಶೌಚಾಲಯಗಳ ನಿರ್ಮಾಣಕ್ಕೆ ಪ್ರಾಮುಖ್ಯತೆಯನ್ನು ನೀಡಿ ಕಸ ವಿಲೇವಾರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ಸ್ವತಃ ತಾವೇ ಕಸ ಎತ್ತುವ ಮುಖಾಂತರ ದೇಶವಾಸಿಗಳನ್ನು ಪ್ರೇರೇಪಿಸಿದ್ದಾರೆ ಎಂದರು.
ಪಾದಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಜಿ.ಪಂ. ಸದಸ್ಯರಾದ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಕರಡಿ, ಪಕ್ಷದ ಮುಖಂಡರಾದ ನರಸಿಂಗರಾವ್ ಕುಲಕರ್ಣಿ, ಮಲ್ಲಿಕಾರ್ಜುನ ಬಿಚ್ಚಾಲಿ, ಉದಯ ಚಿತ್ರಗಾರ, ಮಂಗಳೇಶ ವಕೀಲರು, ನರಸಿಂಗರಾವ್ ಗಂಗಾಕೇರ್, ವೀರೇಶ ಬಲಕುಂದಿ, ಚನ್ನಪ್ಪ ಮಳಿಗೆ, ಬಸವರಾಜ ಅಬ್ಬಿಗೇರಿ, ಮಂಜುನಾಥ ಸಿರಿಗೇರಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಭಾಗವಹಿಸಿದ್ದರು.

Please follow and like us:
error