ಗವಿಸಿದ್ಧ ಎನ್. ಬಳ್ಳಾರಿ ಮೇರು ವ್ಯಕ್ತಿತ್ವದ ಕವಿ : ಸತೀಶ ಕುಲಕರ್ಣಿ

ಕೊಪ್ಪಳ, ೦೪ : ಕವಿ ಗವಿಸಿದ್ಧ ಎನ್. ಬಳ್ಳಾರಿ ಮೇರು ವ್ಯಕ್ತಿತ್ವದ ಕವಿ. ಕಾವ್ಯ ಶಕ್ತಿಯು ಅವರಲ್ಲಿ ಬಾಲ್ಯದಿಂದಲೇ ಬಂದ ಬಳುವಳಿಯಾಗಿತ್ತು. ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ೧೯೭೦ ರ ದಶಕದಲ್ಲಿ ಪ್ರಭಾವಿ ಕವಿಯಾಗಿದ್ದರು. ಮಾನವೀಯತೆಗೆ ಮಿಡಿಯುವ ಕವಿ ಹೃದಯದವರಾಗಿದ್ದರು. ಹುದ್ದೆ, ಖುರ್ಚಿ, ಮುಂಚೂಣಿಯ ಸ್ಥಾನದ ಹುದ್ದೆ ಯಾವುದನ್ನೂ ಬಯಸದ ಅಂತಃಕರಣದ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ಈ ನಾಡಿಗೆ ಬಹುದೊಡ್ಡ ನಷ್ಟ. ಕೊಪ್ಪಳವೆಂದರೆ ಗವಿಸಿದ್ಧ ಎನ್. ಬಳ್ಳಾರಿಯವರ ಮೂಲಕ ಗುರುತಿಸುವಷ್ಟು ಕಾವ್ಯ ಪ್ರಖರತೆಯನ್ನು ಹೊಂದಿದ್ದರು ಎಂದು ಕವಿ ಸತೀಶ ಕುಲಕರ್ಣಿಯವರು ನುಡಿದರು.
ಅವರು ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣೆ ಕಾರ್ಯಕ್ರಮದಲ್ಲಿ ಮಹೇಶ ಬಳ್ಳಾರಿಯವರ ೬ ನೆಯ ಕೃತಿ ಕಲ್ಲು ಲಿಂಗವಾದ ದಿನ ವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಂಗಾವತಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವೀರಭದ್ರಪ್ಪ ಗೊಂಡಬಾಳ ಮಾತನಾಡಿ ಮಹೇಶ ಬಳ್ಳಾರಿಯವರ ಕಲ್ಲು ಲಿಂಗವಾದ ದಿನ ಹೊಸ ಪರಿಕಲ್ಪನೆಗಳ ಕೃತಿಯಾಗಿದೆ. ವಚನ ಸಾಹಿತ್ಯವು ಜಾಗತಿಕ ಮಟ್ಟದಲ್ಲಿ ತಲುಪದಿರುವ ಬಗ್ಗೆ ವಿಷಾದವಿದೆ ಮತ್ತು ಮಾರ್ಟಿನ್ ಲೂಥರ್‌ಗಿಂತಲೂ ಸಮಾಜದ ಮೌಢ್ಯಗಳ ವಿರುದ್ಧ ಹೋರಾಡಿದ ಬಸವಣ್ಣನವರ ಹೋರಾಟ ಗೌಣವಾಗಿದೆ. ಹೊಸ ತಲೆಮಾರಿನ ಮುಖ್ಯವಾದ ಕೃತಿ ಇದಾಗಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಕೊಪ್ಪಳ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಬಳ್ಳೊಳ್ಳಿಯವರು ಶರಣ ತತ್ವ ಮತ್ತು ಸಂಸ್ಕಾರದ ಕುರಿತು ಮಾತನಾಡಿದರು.
ಹೊಸದಾಗಿ ಆರಂಭಿಸಲಾದ ತಳಮಳ ಪ್ರಕಾಶನದ ಲಾಂಛನವನ್ನು ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಬಿಡುಗಡೆ ಮಾಡಿದರು. ಕು. ವಚನಶ್ರೀ ಆರಂಭದಲ್ಲಿ ವಚನ ಪ್ರಾರ್ಥನೆಗೈದರೆ, ಮಹೇಶ ಬಳ್ಳಾರಿ ಸ್ವಾಗತಿಸಿದರು. ಅಲ್ಲಮಪ್ರಭು ಬೆಟ್ಟದೂರು ಪ್ರಾಸ್ತಾವಿಕದಲ್ಲಿ ಗವಿಸಿದ್ಧ ಎನ್. ಬಳ್ಳಾರಿಯವರ ಜೊತೆಗಿನ ಒಡನಾಟ, ವ್ಯಕ್ತಿತ್ವ ಮತ್ತು ಕಾವ್ಯ ಕೊಡುಗೆ ಕುರಿತು ಮಾತನಾಡಿದರು. ಬಳ್ಳಾರಿ ಕುಟುಂಬದ ಪರವಾಗಿ ವೇದಿಕೆಯ ಮೇಲೆ ರುದ್ರೇಶ ಬಳ್ಳಾರಿ ಉಪಸ್ಥಿತರಿದ್ದರು. ಕಳಕೇಶ ಗುಡ್ಲಾನೂರ ಮತ್ತು ವೀರೇಶ ಮೇಟಿ ಕಾರ್ಯಕ್ರಮ ನಿರ್ವಹಿಸಿದರೆ, ವೀರೇಶ ಕೊಪ್ಪಳ ಕೊನೆಯಲ್ಲಿ ವಂದಿಸಿದರು.
ಗವಿಸಿದ್ಧಪ್ಪ ಕೊಪ್ಪಳ, ಎಚ್.ಎಸ್. ಪಾಟೀಲ, ಎಂ.ವಿ. ಪಾಟೀಲ, ವಿ.ಬಿ. ರಡ್ಡೇರ್, ಪ್ರಕಾಶ ಬಳ್ಳಾರಿ, ಪ್ರಭಣ್ಣ ಡೊಳ್ಳಿನ, ಸಿ.ವಿ. ಕಲ್ಮಠ, ಎಸ್.ಎಂ. ತಿಮ್ಮನಗೌಡರ, ಆನಂದ ಅಳವಂಡಿ, ವಿಜಯ ಅಮೃತರಾಜ್ ಸೇರಿದಂತೆ ಗವಿಸಿದ್ಧ ಎನ್. ಬಳ್ಳಾರಿಯವರ ಸ್ನೇಹಿತರು, ಅಭಿಮಾನಿಗಳು ಭಾಗವಹಿಸಿದ್ದರು.

Please follow and like us:
error