ಗವಿಸಿದ್ದೇಶ್ವರ ಜಾತ್ರೆ : ಜ. ೧೮ ರಂದು ಕೃಪಾದೃಷ್ಠಿ ಜಾಗೃತಿ ಅಭಿಯಾನ

ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಬಲ : ನಾಗರಾಜ್ ಜುಮ್ಮಣ್ಣವರ್
ಕೊಪ್ಪಳ ಜ. : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜ. ೧೮ ರಂದು ಕೊಪ್ಪಳ ನಗರದಲ್ಲಿ ನಡೆಯಲಿರುವ “ಕೃಪಾದೃಷ್ಠಿ ಜಾಗೃತಿ ಅಭಿಯಾನ” ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕವು ಬೆಂಬಲ ನೀಡಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣವರ್ ಹೇಳಿದರು.
ಗವಿಸಿದ್ದೇಶ್ರ ಜಾತ್ರಾ ಮಹೋತ್ಸವದ ನಿಮಿತ್ಯ “ಕೃಪಾದೃಷ್ಠಿ ಜಾಗೃತಿ ಅಭಿಯಾನ” ಕಾರ್ಯಕ್ರಮ ಆಯೋಜಿಸುವ ಕುರಿತು ವಿವಿಧ ಇಲಾಖೆ ಹಾಗೂ ಸಂಘಟನೆಗಳೊಂದಿಗೆ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಶನಿವಾರದಂದು ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಭಾಗಿತ್ವ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಜಾಗೃತಿ ಕೃಪಾದೃಷ್ಠಿ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಪ್ಪಳ ಜಿಲ್ಲಾ ಘಟಕವು ಸಂರ್ಪೂಣ ಬೆಂಬಲ ನೀಡಿ, ಈ ಅಭಿಯಾನಕ್ಕೆ ಗವಿಮಠದೊಂದಿಗೆ ಕೈಜೋಡಿಸಲಿದೆ. ಸಾರ್ವಜನಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗಳು ಸಹ ಈ ಅಭಿಯಾನಕ್ಕೆ ಸಹಕರಿಸಲ್ಲಿದ್ದು, ಬೃಹತ್ ಜಾಗೃತಿ ಜಾಥದಲ್ಲಿ ನಗರದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣವರ್ ಹೇಳಿದರು.
ಪತ್ರಕರ್ತ ಸೋಮರೆಡ್ಡಿ ಅಳವಂಡಿ ಅವರು ಮಾತನಾಡಿ, ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ ಒಂದೊಂದು ವಿಭಿನ್ನವಾದ ಕಾರ್ಯಕ್ರಮಗಳು ನಡೆಯುತ್ತಿವೆ. ಜಾತ್ರಾ ಮಹೋತ್ಸವದಲ್ಲಿ ಪ್ರಪ್ರಥಮವಾಗಿ “ರಕ್ತದಾನ” ಎಂಬ ಜಾಗೃತಿ ಅಭಿಯಾನ ನಡೆದಿತ್ತು, ಇದರ ಪರಿಣಾಮವಾಗಿ ಇಂದು ರಾಜ್ಯದಲ್ಲಿಯೇ ನಂ.೧ ಸ್ಥಾನವನ್ನು ನಮ್ಮ ಜಿಲ್ಲೆಯ ಬ್ಲಡ್‌ಬ್ಯಾಂಕ್ ಪಡೆದಿದೆ. ಮತ್ತೊಂದು ವರ್ಷದ ಜಾತ್ರೆಯಲ್ಲಿ “ಬಾಲ್ಯವಿವಾಹ ತಡೆ” ಅಭಿಯಾನ ಆಯೋಜಿಸಿದ್ದು, ಇದರಿಂದ ಹೆಚ್ಚು ಬಾಲ್ಯ ವಿವಾಹಗಳಾಗುವ ಜಿಲ್ಲೆಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆಯು ಸದ್ಯ ೧೪ನೇ ಸ್ಥಾನದಲ್ಲಿದೆ. ಅಲ್ಲದೇ ಜಲದೀಕ್ಷೆ, “ಸಶಕ್ತವೇ ಜೀವನ, ನಿಶಕ್ತವೇ ಮರಣ” ಎಂಬ ವಿವಿಧ ಕಾರ್ಯಕ್ರಮಗಳು ನಡೆದಿವೆ. ಈ ವರ್ಷದ ಜಾತ್ರೆ ನಿಮಿತ್ಯ “ಕೃಪಾದೃಷ್ಠಿ ಜಾಗೃತಿ ಅಭಿಯಾನ”ವನ್ನು ಜ. ೧೮ ರಂದು ಹಮ್ಮಿಕೊಂಡಿದೆ. ರ್‍ಯಾಲಿಯು ಅಂದು ಬೆಳಿಗ್ಗೆ ೮-೩೦ ಗಂಟೆಗೆ ನಗರದ ಸಾರ್ವಜನಿಕ ಮೈದಾನದಿಂದ ಪ್ರಾರಂಭಗೊಳ್ಳಲಿದ್ದು, ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಈ ಅಭಿಯಾನಕ್ಕೆ ಚಾಲನೆ ನೀಡುವರು. ರ್‍ಯಾಲಿಯು ಸಾರ್ವಜನಿಕ ಮೈದಾನದಿಂದ ಪ್ರಾರಂಭಗೊಂಡು ಅಶೋಕ ವೃತ್ತ, ಜವಾಹರ ರಸ್ತೆ ಮೂಲವಾಗಿ ಗಡಿಯಾರ ಕಂಬದ ಮಾರ್ಗವಾಗಿ ಶಾರದ ಚಿತ್ರಮಂದಿರ ಮುಂದಿರುವ ರಸ್ತೆ ಮೂಲಕ ಗವಿಸಿದ್ದೇಶ್ವರ ಮಠದ ಆವರಣದವರೆಗೆ ಸಾಗಿ ಬರಲಿದೆ. ಈ ಜಾಗೃತಿ ಅಭಿಯಾನದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಘೋಷ ವಾಕ್ಯಗಳನ್ನು ಈಗಾಗಲೇ ಎಲ್ಲಾ ಶಾಲಾ ಕಾಲೇಜುಗಳಿಗೆ ನೀಡಲಾಗಿದ್ದು, ಈ ಅಭಿಯಾನದಿಂದ ನೇತ್ರದಾನ ಮಹತ್ವ, ಕಣ್ಣುಗಳ ಸಂರಕ್ಷಣೆ ಮತ್ತು ಮಹತ್ವದ ಕುರಿತು ವಿದ್ಯಾರ್ಥಿಗಳಿಂದ ಸಾರ್ವಜನಿಕರೆಲ್ಲರಿಗೂ ಅರಿವು ಮೂಡಲಿದೆ ಎಂದರು.
ಕೊಪ್ಪಳ ನಗರ ಪೊಲೀಸ್ ಠಾಣೆಯ ಪಿ.ಐ. ಶಿವಾನಂದ, ಸಾರ್ವಜನಿಕ ಶಿಕ್ಷಣ ಇಲಾಖೆ ಅರವಿಂದ ಕುಮಾರ, ಪ.ಪೂ. ಶಿಕ್ಷಣ ಇಲಾಖೆಯ ಪ್ರೊ. ಶಂಶುದ್ದೀನ, ಯುನೆಸ್ಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಹರೀಶ್ ಜೋಗಿ, ವಾರ್ತಾ ಇಲಾಖೆಯ ಎಂ. ಅವಿನಾಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಡಿ. ಎಲಿಗಾರ, ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರು ಸೇರಿದಂತೆ ವಿವಿಧ ಸಂಘಟನೆಯವರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error