ಗವಿಮಠ ಜಾತ್ರೆ : ಯಶಸ್ವಿಯಾಗಿ ಜರುಗಿದ ಬಸವ ಪಟ ಆರೋಹಣ ಕಾರ್ಯಕ್ರಮ

ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ‘ಬಸವ ಪಟ ಆರೋಹಣ’ ಎಂಬ ಧಾರ್ಮಿಕ ಕಾರ್ಯಕ್ರಮವೂ ಇಂದು ಶುಕ್ರವಾರ ಸಂಜೆ 5 ಕ್ಕೆ ಜರುಗಿತು. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಯಿತು. ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ವಿಧಿವಿಧಾನವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ 5 ಸಲ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಶಿಲಾಸ್ತಂಭಕ್ಕೆ ಬಸವ ಪಟ ಕಟ್ಟಿದರು. ಇದರಲ್ಲಿ ಆಧ್ಯಾತ್ಮದ ಅನುಸಂಧಾನವು ಸಮ್ಮಿಳಿತಗೊಂಡಿತ್ತು.

ಯಶಸ್ವಿಯಾಗಿ ಜರುಗಿದ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ

ಸಂಸ್ಥಾನ ಶ್ರೀ ಗವಿಮಠದ ಜಾತ್ರಾಮಹೋತ್ಸವದ ಅಂಗವಾಗಿ ಇಂದು ಶುಕ್ರವಾರ ಸಂಜೆ 5 ಕ್ಕೆ ದಿನ ಶ್ರೀೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಜರುಗಿತು. ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರೀಯವಾಗಿ ಹಲವಾರು ಮಹಿಳೆಯರು ಭಾಗವಹಿಸಿದ್ದರು. ಅಲ್ಲದೇ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿಭಕ್ತಿಯ ಪರಾಕಾಷ್ಟೆಯಲ್ಲಿದ್ದರು. ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರ ದ್ರವ್ಯಗಳನ್ನು ಕೊಡುವ ಮೂಲಕ ಉಡಿತುಂಬುವ ಕಾಯಕವನ್ನು ಕೊಪ್ಪಳ ಹಾಗೂ ಸುತ್ತಲಿನ ಸಹಸ್ರಾರು ಮಹಿಳೆಯರು ನಡೆಸಿಕೊಟ್ಟರು. ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು ಹಾಗೂ ಊರಿನ ಎಲ್ಲ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯಶಸ್ವಿಯಾಗಿ ಜರುಗಿದ ಪಂಚ ಕಳಸೋತ್ಸವ

ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಶುಕ್ರವಾರ ಸಂಜೆ 5 ಕ್ಕೆ ಪಂಚ ಕಳಸೋತ್ಸವ ಕಾರ್ಯಕ್ರಮ ಗವಿಮಠದಲ್ಲಿ ಜರುಗಿತು. ಒಂದನೆಯದು ಕೊಪ್ಪಳದ ಬನ್ನಿಕಟ್ಟಿ ಭಾಗದ್ದು ಶ್ರೀ ಗೌರಿಶಂಕರ ದೇವಸ್ಥಾನದಿಂದ, ಎರಡನೆಯದು ವಿ.ಕೆ. ಸಜ್ಜನರು ಮಾಡಿಸಿದ ಕಳಸ ಅವರ ಮನೆಯಿಂದ, ಮೂರನೆಯದು ಪಲ್ಲೇದವರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ದೈವದವರಿಂದ, ನಾಲ್ಕನೆಯದು ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದ ದೈವದವರಿಂದ ಹಾಗೂ ಐದನೆಯದು ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ದೈವದವರಿಂದ ಗವಿಮಠಕ್ಕೆ ಪಂಚಕಳಸಗಳು ಬಂದು ಗವಿಮಠಕ್ಕೆ ಬಂದವು. ಭಕ್ತರು ಇವುಗಳನ್ನು ಗೋಪುರಕ್ಕೇರಿಸುವದರ ಮೂಲಕ ತಮ್ಮ ಪ್ರತಿವರ್ಷದ ಸೇವೆಯನ್ನು ಭಕ್ತರು ಮಾಡಿದರು. ಆಯಾ ಓಣಿಯ ದೈವದವರು ಭಾಜಾ-ಭಜಂತ್ರಿ, ಭಜನೆ, ಡೊಳ್ಳು ಕುಣಿತದೊಂದಿಗೆ ಗವಿಮಠಕ್ಕೆ ಪಂಚಕಳಸಗಳೊಂದಿಗೆ ಆಗಮಿಸಿದ್ದು ವಿಶೇಷವಾಗಿತ್ತು.

Please follow and like us: