ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಲಿ:ಬೀರಪ್ಪ ಅಂಡಗಿ ಚಿಲವಾಡಗಿ

ಕೊಪ್ಪಳ:ವಿಕಲಚೇತನರ ಆಶಾಕಿರಣವಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಂಡಿತ ಪುಟ್ಟರಾಜ ಗವಾಯಿಗಳ 8ನೇ ವರುಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ,ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಕಲಚೇತನರ ಬಗ್ಗೆ ಕೇವಲ ಮಾತನಾಡುವ ಕೆಲಸ ಮಾಡುತ್ತಿವೆ.ವಿಕಲಚೇತನರ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಚಿಂತನೆ ಮಾಡಿ ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ಸಹಾಯ ಹಸ್ತ ನೀಡುವುದರಲ್ಲಿ ವಿಫಲವಾಗಿವೆ ಎಂದರು.
ಪಂಡಿತ ಪುಟ್ಟರಾಜ ಗವಾಯಿಗಳು ಅಂಧರಾಗಿದ್ದುಕೊಂಡು ಸಂಗೀತ ಕ್ಷೇತ್ರದಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆಯನ್ನು ಮಾಡಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.ಸಾಮಾನ್ಯರಿಗೆ ಸರಿಸಾಟಿಯಾಗುವ ರೀತಿಯಲ್ಲಿ ಸಾಧನೆ ಮಾಡಿದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಭಾರತ ಸರಕಾರ ನೀಡುವ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಅಂದಾಗ ಮಾತ್ರ ಸಮಸ್ತ ವಿಕಲಚೇತನರ ಸಮುದಾಯವನ್ನು ಗೌರವಿಸಿದಂತಾಗುತ್ತದೆ ಎಂದು ಹೇಳಿದರು.
ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕು.ಈ ವಿಷಯ ಕುರಿತು ಮುಂದಿನ ದಿನಗಳಲ್ಲಿ ಒಂದು ಸಮಿತಿಯನ್ನು ರಚಿಸಿ ಸರಕಾರದ ಮೇಲೆ ಒತ್ತಡ ಮಾಡಲಾಗುವುದು ಜೊತೆಗೆ ವಿಕಲಚೇತನರು ಇಂದು ಅನೇಕ ಕ್ಷೇತ್ರಗಳಲ್ಲಿ ತಮ್ಮದೆಯಾದ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತಿದ್ದಾರೆ.ಆದರೆ ಅಂತಹ ಮಹಾನ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ  ಕೆಲಸವಾಗಬೇಕು ಎಂದು ತಿಳಿಸಿದರು.
 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಆರ್.ಪಿ.ಶರಣಪ್ಪ ರಡ್ಡೇರ ಮಾತನಾಡಿ,ವಿಕಲಚೇತನರಲ್ಲಿ ವಿಶಿಷ್ಟವಾದ ಶಕ್ತಿ ಅಡಗಿರುತ್ತದೆ.ಅಂತಹ ವಿಶಿಷ್ಟ ಶಕ್ತಿಯು ಹೊರಬರಬೇಕಾದರೇ ಸೂಕ್ತವಾದ ವೇದಿಕೆಗಳ ಅಗತ್ಯವಿದೆ.ವಿಕಲಚೇತನರು ನಾವು ವಿಕಲಚೇತನರು ಎಂಬ ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಅಲ್ಲದೇ ವಿಕಲಚೇತನರು ಅಂಗವಿಕಲತೆಯನ್ನು ಶಾಪವಾಗಿ ಪರಿಗಣಿಸದೇ ಅದನ್ನು ವರವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಬಹದ್ದೂರಬಂಡಿ ಸಿ.ಆರ್.ಪಿ.ಹನುಮಂತಪ್ಪ ಕುರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕ್ರಮ್ಮ ಬಂಗಾರಶೆಟ್ಟರ್,ತಾಲೂಕ ಸಹ ಕಾರ್ಯದರ್ಶಿ ಬೀರಪ್ಪ ಬಿಸರಳ್ಳಿ,ತಾಲೂಕ ಸ್ಕೌಟ್ಸ್ ಮತ್ತು ಗೈಡ್ಸ ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ,ಶಿಕ್ಷಕರಾದ ಎಚ್.ಕೆ.ಹನುಮಂತಪ್ಪ ಕುರಿ,ಗುರುಸ್ವಾಮಿ,ಶ್ರೀನಿವಾಸ ಕುಲಕರ್ಣಿ,ಅಂಬಕ್ಕ,ಸುನಂದಾ,ಗಂಗಮ್ಮ,ಭಾರತಿ,ಮೋಹಿನಪಾಷಾಬೀ,ರತ್ನಾ,ವಿಜಯಾ ಹಿರೇಮಠ,ಬಿ.ಎಡ್.ಪ್ರಶಿಕ್ಷಣಾರ್ಥಿಗಳಾದ ಗಿರೀಜಾ,ಪ್ರತಿಭಾ,ಶ್ರೀಕಲಾ,ವಿಜಯಲಕ್ಷ್ಮೀ,ಪವಿತ್ರಾ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಗುರುರಾಜ ಕಟ್ಟಿ ನಿರೂಪಿಸಿದರು.
ಶಿಕ್ಷಕ ಆಭೀದಹುಸೇನ ಅತ್ತಾರ ಸ್ವಾಗತಿಸಿ,ನಾಗಪ್ಪ ನರಿ ವಂದಿಸಿದರು.
Please follow and like us:
error