ಕೊಪ್ಪಳ : ಮೊನ್ನೆ 5 ರಂದು ಕೊಪ್ಪಳ ನಗರ ಠಾಣೆಯ ಪೇದೆಯೊಬ್ಬರಿಗೆ ಕರೋನಾ ಪಾಜಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಡೀ ನಗರ ಠಾಣೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಒಟ್ಟು 55 ಸಿಬ್ಬಂದಿಗಳನ್ನು ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗಳೆಂದು ಗುರುತಿಸಿಲಾಗಿತ್ತು. ಇವರಲ್ಲಿ ಪಿಐ ಪ್ರಕಾಶ ಮಾಳಿ, ಇನ್ಸಪೆಕ್ಟರ್ ಚಂದ್ರಶೇಖರ್ ಸೇರಿದಂತೆ ಇತರ ಸಿಬ್ಬಂದಿಗಳು ಇದ್ದಾರೆ. ಇವರೆಲ್ಲರನ್ನೂ ಈಗ ಟಣಕನಕಲ್ ನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಗಾಗಿ ಇಡಲಾಗಿದೆ. ಆದರೆ ಇಲ್ಲಿ ಯಾರೂ ಹೇಳುವವರೂ ಇಲ್ಲ ಕೇಳುವವರೂ ಇಲ್ಲದೇ ಇಡೀ ಸಿಬ್ಬಂದಿ ವರ್ಗ ಮತ್ತು ಅಧಿಕಾರಿಗಳು ಕಂಗಾಲಾಗಿದ್ದಾರೆ. ಊಟದ ಸಮಯದಲ್ಲಿ ಊಟ ನೀಡುವುದರ ಹೊರತಾಗಿ ಕನಿಷ್ಠ ಪಕ್ಷ ಚಹಾವೂ ಸಿಗುತ್ತಿಲ್ಲ. ಯಾವುದೇ ರೀತಿಯಲ್ಲಿ ಗುಳಿಗೆಗಳನ್ನು ನೀಡುತ್ತಿಲ್ಲ. ಮೂಲಭೂತ ಸೌಲಭ್ಯಗಳೂ ಸರಿಯಾಗಿಲ್ಲ. ಬೇಕಾಬಿಟ್ಟಿಯಾಗಿ ನಡೆಸಿಕೊಳ್ಳಲಾಗುತ್ತಿದೆ. ಬಿಕ್ಷುಕರಿಗಿಂತ ಕಡೆಯಾಗಿದೆ ನಮ್ಮ ಸ್ಥಿತಿ ಎನ್ನುವುದು ಅಲ್ಲಿರುವ ಪೋಲಿಸರ ಅಳಲಾಗಿದೆ. ನಮ್ಮನ್ನೆಲ್ಲಾ ಕರೋನಾ ವಾರಿಯರ್ಸ್ ಗಳು ಅಂತಾ ಹೇಳ್ತಾರೆ. ಆದರೆ ಇಲ್ಲಿ ನಮ್ಮ ಸ್ಥಿತಿ ಯಾರಿಗೂ ಬೇಡ. ಕನಿಷ್ಠ ಕಾಳಜಿಯೂ ಇಲ್ಲದಂತೆ ನಮ್ಮನ್ನು ಇಲ್ಲಿ ನಿರ್ಲಕ್ಷದಿಂದ ನೋಡಿಕೊಳ್ಳಲಾಗುತ್ತಿದೆ. ನಮ್ಮ ಗತಿಯೇ ಹೀಗಾದರೆ ಜನಸಾಮಾನ್ಯರ ಗತಿಏನು ? ಎನ್ನುವುದು ಅವರ ಪ್ರಶ್ನೆಯಾಗಿದೆ. ಇಲಾಖೆಯಿಂದಾಗಲಿ,. ಜಿಲ್ಲಾಡಳಿತದಿಂದಾಗಲಿ ಇದುವರೆಗೂ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ನಿನ್ನೆಯ ದಿನ ಸ್ವಾಬ್ ಟೆಸ್ಟ್ ಮಾಡಲಾಗಿದೆ. ನಗರಸಭೆಯವರು ಬಂದು ನಮ್ಮ ಮಾಹಿತಿ ಪಡೆದುಕೊಂಡು ಹೋಗಿದ್ಧಾರೆ ಇದನ್ನು ಹೊರತು ಪಡಿಸಿದರೆ ನಮ್ಮ ಗೋಳನ್ನು ಕೇಳುವವರೂ ಯಾರೂ ಇಲ್ಲ. ಹೀಗಾದರೆ ನಮ್ಮ ಗತಿ ಏನು ? ನಮ್ಮ ಬಗ್ಗೆ ದಯವಿಟ್ಟು ಕಾಳಜಿ ತೋರಿ ಎಂದು ಗೋಗರೆದಿದ್ದಾರೆ. ಜಿಲ್ಲಾಧಿಕಾರಿಗಳು , ಸಂಬಂದಪಟ್ಟವರು ಇತ್ತ ಗಮನಹರಿಸುವರೇ?