ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಳ : ಪಿ.ಸುನೀಲ್ ಕುಮಾರ್

ಕೊಪ್ಪಳ ಜ. ): ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಹೇಳಿದರು.  

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯದ ಒತ್ತಡದ ನಡುವೆಯೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಜನರಿಗೆ ಸಮರ್ಪಕವಾಗಿ ಸ್ಪಂದಿಸಿ, ಉತ್ತಮ ಸೇವೆ ನೀಡುವುದು ಅಗತ್ಯವಾಗಿದೆ.  ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ.  ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಎಲ್ಲಾ ನೌಕರರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಎರಡು ದಿನಗಳ ಕಾಲ ಜರುಗುವ ಈ ಕ್ರೀಡಾಕೂಟದಲ್ಲಿ ಎಲ್ಲ ನೌಕರರೂ ಪಾಲ್ಗೊಂಡು, ಒತ್ತಡದಿಂದ ಮುಕ್ತರಾಗಿ ಎಂದು ಕರೆ ನೀಡಿದರು. 
       ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆರ್. ಜುಮ್ಮನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ನೌಕರರು ಕೂಡ ವೃತ್ತಿ ಬದುಕಿನ ಜೊತೆಗೆ ವೈಯಕ್ತಿಕ ಬದುಕಿಗೂ ಕೂಡ ಗಮನ ನೀಡುವ ಅಗತ್ಯವಿದೆ.  ನೌಕರರ ದೈಹಿಕ ಸಾಮರ್ಥ್ಯ ಚೆನ್ನಾಗಿದ್ದರೆ ಮಾತ್ರ, ಸರ್ಕಾರಿ ಕೆಲಸಗಳೂ ಕೂಡ ಉತ್ತಮವಾಗಿ ನಡೆಯಲು ಸಾಧ್ಯ.  ಇಂದು ಮತ್ತು ನಾಳೆ ನಮ್ಮ ಎಲ್ಲಾ ನೌಕರರಿಗೆ ಹಬ್ಬದ ದಿನ ಇದ್ದಂತೆ.  ಈ ದಿಸೆಯಲ್ಲಿ ಹಮ್ಮಿಕೊಳ್ಳಲಾದ 2019-20ನೇ ಸಾಲಿನ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವು ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಮೀರಿಸುವಂತಿದೆ. ಇದಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಎಲ್ಲಾ ಇಲಾಖೆಗಳ ಸಹಕಾರ ಮುಖ್ಯವಾಗಿದೆ.  ವಿಶೇಷವಾಗಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ರವರು ಈ ಕ್ರೀಡಾಕೂಟಕ್ಕೆ ಅಗತ್ಯ ಸಹಕಾರ ನೀಡಿ, ವಿಕಲಚೇತನ ನೌಕರರಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಪ್ರತ್ಯೇಕವಾಗಿ ಕ್ರೀಡೆಗಳನ್ನು ಆಯೋಜಿಸಲು ಅನುಕೂಲ ಮಾಡಿಕೊಟ್ಟಿರುವುದು ರಾಜ್ಯದಲ್ಲಿಯೇ ಇದು ಪ್ರಥಮ ಪ್ರಯತ್ನವಾಗಿದೆ.  ಈ ಕ್ರೀಡಾಟಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
       ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಪ್ರಕಟಿಸಿದ ಪ್ರಸಕ್ತ ಸಾಲಿನ ಕ್ಯಾಲೆಂಡರ್ ಅನ್ನು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಂಡೂರ ಹನುಮಂತಗೌಡ ಪಾಟೀಲರವರು ಬಿಡುಗಡೆಗೊಳಿಸಿದರು.  ಜಿಲ್ಲೆಯ ಸರ್ಕಾರಿ ನೌಕರರ ಸಂಘದ ವಿವಿಧ ತಾಲೂಕು ಘಟಕಗಳಾದ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕನಕಗಿರಿ, ಕಾರಟಗಿ ಹಾಗೂ ಮುನಿರಾಬಾದ ವಲಯದ ಘಟಕಗಳಿಂದ ಪಥಸಂಚಲನ ಕಾರ್ಯಕ್ರಮ ನಡೆಯಿತು.  
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೀರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಸಂಘದ ಗೌರವ ಅಧ್ಯಕ್ಷ ಮುಸ್ತಫಾ ಕುದರಿಮೋತಿ, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಪ್ರಧಾನ ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ, ಖಜಾಂಚಿ ಸುಶಿಲೇಂದ್ರರಾವ್ ದೇಶಪಾಂಡೆ, ಕ್ರೀಡಾಕಾರ್ಯದರ್ಶಿ ಬಸವರಾಜ ಹೆಚ್, ರಾಜ್ಯ ಪರಿಷತ್ ಸದಸ್ಯ ನಜೀರ್ ಅಹ್ಮದ್, ಸಾಂಸ್ಕೃತಿ ಕಾರ್ಯದರ್ಶಿ ರಾಮಣ್ಣ ಶ್ಯಾವಿ, ಕ್ರೀಡಾ ಕಾರ್ಯದರ್ಶಿ ಎಂ. ಅವಿನಾಶ, ಸಾಂಸ್ಕೃತಿ ಕಾರ್ಯದರ್ಶಿ ರಾಮಣ್ಣ ಕಳ್ಳಿಮನಿ, ಕ್ರೀಡಾ ಕಾರ್ಯದರ್ಶಿ ಶರಣಬಸಪ್ಪ ಮಣ್ಣೂರು ಸೇರಿದಂತೆ ಸಂಘದ ತಾಲ್ಲೂಕಾ ಅಧ್ಯಕ್ಷರು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.  ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಜ. 28 ರಂದು ಸಂಜೆ 6-30 ಗಂಟೆಗೆ ಸರ್ಕಾರಿ ನೌಕರರ ಸಂಘದ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ. ಮತ್ತು ವಿಶೇಷ ಕ್ರೀಡೆ: ದೈಹಿಕ ಶಿಕ್ಷಕರು ಹಾಗೂ ವಿಶೇಷ ಚೇತನ ನೌಕರರ ಕ್ರೀಡಾಕೂಟ ಜ. 29 ರಂದು ಬೆಳಿಗ್ಗೆ 10-30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ. 

Please follow and like us:
error