ಕೋವಿಡ್-19 ಆ್ಯಪ್‌ಗಳನ್ನು ಬಳಸಿ ಮಾಹಿತಿ ಸಂಗ್ರಹಿಸಿ: ಪಿ. ಸುನೀಲ್ ಕುಮಾರ್


ಕೊಪ್ಪಳ ಮೇ.  : ಕೋವಿಡ್-19  ಸೋಂಕು ಹರಡುವಿಕೆ ನಿಯಂತ್ರಣ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಲು ಹಾಗೂ ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ಕಾರ್ಮಿಕರು, ನಾಗರಿಕರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲು ನೆರವಾಗುವ ಕೋವಿಡ್-19 ಆ್ಯಪ್‌ಗಳನ್ನು ಸಂಬAಧಿಸಿದ ಎಲ್ಲ ಅಧಿಕಾರಿಗಳು ಬಳಸಬೇಕು ಮತ್ತು ಅದರಲ್ಲಿ ಸೂಕ್ತ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯತನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಕೋವಿಡ್-19 ಆ್ಯಪ್ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಇನ್ನೂ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಸೋಂಕು ಇತರರಿಗೆ ಹರಡುವುದನ್ನು ತಡೆಯುವುದಷ್ಟೇ ಅಲ್ಲ, ಬೇರೆ ರಾಜ್ಯ ಜಿಲ್ಲೆಗಳಿಂದ ಬಂದ ಜಿಲ್ಲೆಯ ನಾಗರಿಕರನ್ನು ಗುರುತಿಸಿ ಅವರನ್ನು ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಬೇಕು. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸುವುದು ಸುಲಭ ಆದರೆ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವುದು ತುಸು ಕಷ್ಟದ ಕೆಲಸ. ಬಹುತೇಕರು ಜಿಲ್ಲೆಗೆ ಆಗಮಿಸುವಾಗ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಬಂದವರಿದ್ದಾರೆ. ಅವರ ಮಾಹಿತಿ ನಮಗೆ ದೊರೆಯುತ್ತದೆ. ಆದರೆ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸದೆ, ಚೆಕ್‌ಪೋಸ್ಟ್ಗಳನ್ನು ತಪ್ಪಿಸಿ ಬೇರೆ ದಾರಿಯಿಂದ ಬಂದಿರುವವರನ್ನು ಗುರುತಿಸುವುದು ಮುಖ್ಯವಾಗಿದೆ. ಅಂತಹವರ ಕುರಿತು ಹೆಚ್ಚಿನ ಜವಾಬ್ದಾರಿಯಿಂದ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ಎಂದು ಹೇಳಿದರು.
ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್, ಕ್ವಾರಂಟೈನ್ ವಾಚ್ ಆ್ಯಪ್, ಹೆಲ್ತ್ ವಾಚ್ ಆ್ಯಪ್ ಸೇರಿದಂತೆ ಕೋವಿಡ್-19 ಪತ್ತೆ ಮತ್ತು ನಿಯಂತ್ರಣಕ್ಕಾಗಿ ಅಭಿವೃದ್ಧಿ ಪಡಿಸಿರುವ ಆ್ಯಪ್‌ಗಳಲ್ಲಿ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನೀಡಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿರುವವರ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ ಮತ್ತು ಅವರೊಂದಿಗೆ ಪ್ರಯಾಣ ಮಾಡಿದವರ ವಿವರಗಳನ್ನು ಸಂಗ್ರಹಿಸಿ. ಕೆಲವರು ಯಾವುದೋ ಮೊಬೈಲ್ ಸಂಖ್ಯೆಯನ್ನು ನೀಡಿ ತಪ್ಪು ಮಾಹಿತಿ ನೀಡುತ್ತಾರೆ. ಆದ್ದರಿಂದ ಅವರ ಮೊಬೈಲ್ ಸಂಖ್ಯೆಯನ್ನು ಪಡೆದ ನಂತರ ಸ್ಥಳದಲ್ಲಿಯೇ ಡಯಲ್ ಮಾಡಿ ಖಾತ್ರಿ ಪಡಿಸಿಕೊಳ್ಳಿ. ಮುಖ್ಯವಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ(ಕೆ.ಎಸ್.ಆರ್.ಟಿ.ಸಿ) ಪ್ರಯಾಣಿಸುವಾಗ ಪ್ರಯಾಣಿಕರು ನೀಡುವ ಮೊಬೈಲ್ ಸಂಖ್ಯೆಯ ನೈಜತೆಯನ್ನು ಸ್ಥಳದಲ್ಲಿಯೇ ಪರಿಶೀಲಿಸಿ. ಗ್ರಾಮೀಣ ಭಾಗದಲ್ಲಿ ಸಮೀಕ್ಷೆಗೆ ಹೋದಾಗಲೂ ಇದೇ ಸಂದರ್ಭ ಎದುರಾಗುತ್ತದೆ. ಆದ್ದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಲ್ಲ ಖಾಸಗಿ ಔಷಧಿ ಅಂಗಡಿಗಳನ್ನು ತೆರೆಯುವಂತೆ ಆದೇಶಿಸಲಾಗಿದೆ. ಆದರೂ ಕೆಲವರು ಇದನ್ನು ಉಲ್ಲಂಘಿಸಿ ಔಷಧಿ ಅಂಗಡಿಗಳನ್ನು ಮುಚ್ಚಿರುತ್ತಾರೆ. ಅವರಿಗೆ ನೋಟಿಸ್ ನೀಡಿ, ಅಂಗಡಿ ತೆರೆಯಲು ಎರಡು ದಿನಗಳ ಕಾಲವಕಾಶ ನೀಡಿ. ನಂತರವೂ ತೆರೆಯದಿದ್ದರೆ ಅಂತವ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ. ಆರೋಗ್ಯ ಸೇತು ಆ್ಯಪ್‌ಗಳನ್ನು ಎಲ್ಲರೂ ಕಡ್ಡಾಯವಾಗಿ ಬಳಸಬೇಕು. ಇದಕ್ಕೆ ಸಂಬAಧಿಸಿದAತೆ ಆರೋಗ್ಯ ಸೇತು ಆ್ಯಪ್ ನಲ್ಲಿನ ಜಿಲ್ಲೆಯ ಮಾಹಿತಿಯನ್ನು ಕ್ರೋಢೀಕರಿಸಿ ಸೋಂಕಿನ ಲಕ್ಷಣಗಳನ್ನು ಉಳ್ಳ ವ್ಯಕ್ತಿಗಳನ್ನು ಗುರುತಿಸಬೇಕು. ಸಾರ್ವಜನಿಕರು ಸೋಂಕಿನ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ಹೋಗಲು ಭಯವಿದ್ದರೆ ಆಪ್ತಮಿತ್ರ ಸಹಾಯವಾಣಿ ಸಂಖ್ಯೆ: 14410 ಗೆ ಕರೆಮಾಡಿ ತಮ್ಮ ಸಂದೇಹ ನಿವಾರಿಸಿಕೊಳ್ಳಬಹುದು ಎಂದು ಹೇಳಿದರು.
ಜಿಲ್ಲೆಯಿಂದ ಈಗಾಗಲೇ ಹೊರರಾಜ್ಯದ ಬಹುತೇಕ ಕಾರ್ಮಿಕರನ್ನು ಅವರ ರಾಜ್ಯ, ಊರುಗಳಿಗೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯ ಕೆಲವು ಕಂಪನಿಗಳಲ್ಲಿ ಇನ್ನೂ ಅನೇಕ ಹೊರರಾಜ್ಯದ ಕಾರ್ಮಿಕರು ಉಳಿದುಕೊಂಡಿದ್ದಾರೆ. ಆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಇಚ್ಛಿಸಿದರೆ ಅಂತಹವರ ಮಾಹಿತಿಯನ್ನು ನೀಡಿದಲ್ಲಿ ಅವರನ್ನು ಅವರ ಊರುಗಳಿಗೆ ಕಳುಹಿಸಿಕೊಡಲು ಜಿಲ್ಲಾಡಳಿತ ಸಿದ್ಧವಾಗಿದೆ. ಹಾಗೆಯೇ ಬೇರೆ ರಾಜ್ಯ, ಜಿಲ್ಲೆಗಳಿಂದ ಕೊಪ್ಪಳ ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಕಾರ್ಮಿಕರ ಆಧಾರ್ ಸಂಖ್ಯೆ ಸಹಿತ ಮಾಹಿತಿಯನ್ನು ನೀಡಿದಲ್ಲಿ ಅವರಿಗೆ ಪಡಿತರ ನಿಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಮಾತನಾಡಿ ಕೋವಿಡ್-19 ಆ್ಯಪ್‌ಗಳ ಕಾರ್ಯನಿರ್ವಹಣೆ, ಬಳಕೆ ಮತ್ತು ಮಾಹಿತಿ ಸಂಗ್ರಹದ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಸಹಾಯಕ ಆಯುಕ್ತೆ ಸಿ.ಡಿ. ಗೀತಾ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error

Related posts