ಕೊಪ್ಪಳ ರೈತರ ಯಶೋಗಾಥೆ – ಅಲ್ಪ ನೀರಿನ ಸದ್ಬಳಕೆ : ಬರದಲ್ಲೂ ಬೃಹತ್ ಗೊನೆಯ ಭರ್ಜರಿ ಬಾಳೆ

ಲಭ್ಯವಿರುವ ಅಲ್ಪ ನೀರಿನಲ್ಲಿ ತೋಟಗಾರಿಕೆ ಇಲಾಖೆಯ ನೆರವಿನಲ್ಲಿ ಹೊಸ ತಂತ್ರಜ್ಞಾನ ಬಳಸಿ, ಬರದಲ್ಲೂ ಬೃಹತ್ ಗೊನೆಯ ಭರ್ಜರಿ ಬಾಳೆ ಬೆಳೆಯುವ ಮೂಲಕ ಕೊಪ್ಪಳ ತಾಲೂಕು ಕಾತರಕಿ-ಗುಡ್ಲಾನೂರ ಗ್ರಾಮದ ರೈತರು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆ ತೋಟಗಾರಿಕೆಯಲ್ಲಿ ಹೆಸರು ಮಾಡಿದೆ. ಇಲ್ಲಿನ ಮಣ್ಣು ಮತ್ತು ವಾತಾವರಣ ತೋಟಗಾರಿಕೆ ಬೆಳೆಗಳಿಗೆ ಅತ್ಯಂತ ಸೂಕ್ತವಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ಹೇಳಿ ಮಾಡಿಸಿದಂತಿದೆ. ಇಲಾಖೆಯ ಅನೇಕ ಯೋಜನೆಗಳು ಈ  ಭಾಗದ ರೈತರಿಗೆ  ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿವೆ. ಅಧಿಕಾರಿಗಳ ಸತತ ಪರಿಶ್ರಮದಿಂದಾಗಿ ಹೆಚ್ಚು ಹೆಚ್ಚು ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು  ಆರ್ಥಿಕ  ಸುಸ್ಥಿರತೆ ಹಾಗೂ ಸ್ವಾವಲಂಬನೆಯ ಬದುಕು ಸಾಗಿಸುವಂತಾಗಿದೆ.
ಕೊಪ್ಪಳ ತಾಲೂಕು ಕಾತರಕಿ-ಗುಡ್ಲಾನೂರ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಮೆಕ್ಕೆ ಜೋಳ, ಮೆಣಸಿನಕಾಯಿ, ಈರುಳ್ಳಿ ಮುಂತಾದ ಬೆಳೆಯುತ್ತಾ ಬಂದಿದ್ದರೂ ಕೃಷಿ ಅಷ್ಟೊಂದು ಲಾಭದಾಯಕ ಅನಿಸಿರಲಿಲ್ಲ.   ಇದರೆ ಜೊತೆಗೆ ಮಳೆಯ ಕೊರತೆಯಿಂದ  ಕಾಡುತ್ತಿದ್ದ ಬರ ರೈತರನ್ನು ಕಂಗಾಲಾಗಿಸಿದೆ.  ಕೊಳವೆಬಾವಿ ಕೊರೆಯಿಸಿದ್ದರೂ, ಬರ ಪರಿಸ್ಥಿತಿಯಿಂದ ಅಂತರ್ಜಲ ಕುಸಿತ ಕಂಡಿದ್ದು, ಕೇವಲ ಒಂದರಿಂದ ಒಂದೂವರೆ ಇಂಚು ನೀರು ಮಾತ್ರ ಬರುತ್ತಿದೆ.  ಇಂತಹ ದುಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ರೈತರ ನೆರವಿಗೆ ಬಂದಿದೆ.  ಈ ಯೋಜನೆಯ ಸವಲತ್ತು ಪಡೆದು, ಲಭ್ಯವಿರುವ ಅಲ್ಪ ನೀರಿನಲ್ಲಿ ಬಂಪರ್ ಬಾಳೆ ಬೆಳೆದು, ಇಲ್ಲಿನ ರೈತರು ಲಕ್ಷಗಟ್ಟಲೆ ಆದಾಯ ಎಣಿಸುತ್ತಿದ್ದಾರೆ.  ಮಳೆ ಹಿನ್ನಡೆಯ ನಡುವೆಯೂ ಅಂಗಾಂಶ ಬಾಳೆ ಕೃಷಿ ಮಾಡಿ ಕಾತರಕಿ-ಗುಡ್ಲಾನೂರ, ಬೇಳೂರು, ಮತ್ತೂರು ಗ್ರಾಮಗಳ ಸುಮಾರು  20 ಕ್ಕೂ ಹೆಚ್ಚು ರೈತರು ಯಶಸ್ವಿಯಾಗಿದ್ದಾರೆ.   ಒಬ್ಬೊಬ್ಬರದು ಎರಡರಿಂದ ಮೂರು ಎಕರೆ ಎಂದು ಲೆಕ್ಕಹಾಕಿದರೂ ಬಾಳೆ ಕೃಷಿ ಸುಮಾರು 50 ಎಕರೆ ಮೀರುತ್ತದೆ.  ಬಾಳೆ ತೋಟಗಳಲ್ಲಿ ಸುಮಾರು ನಾಲ್ಕು ಅಡಿಯಷ್ಟು ಉದ್ದದ 45ರಿಂದ 50 ಕೆಜಿ ತೂಕದ ಗೊನೆಗಳು ನೇತಾಡುತ್ತಿವೆ.  ಸೋಮವಾರದಂದು  ಬಾಳೆ ತೋಟದ ಸಮೀಪವೇ ಕಾಯಿಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ ಟ್ರಕ್‍ಗೆ ತುಂಬಲಾಗುತ್ತಿತ್ತು.  ರೈತರಿಗೆ ಬೆಳೆಗೆ ಸರಿಯಾದ ಬೆಲೆಯಲ್ಲಿ ಸಕಾಲದಲ್ಲಿ ಮಾರುಕಟ್ಟೆಗೆ ಹೋಗುತ್ತಿರುವುದು ಒಂದು ಖುಷಿಯಾದರೆ, ಗೊನೆ ಕೊಯ್ಯುವವರಿಗೆ ಬಿಡುವಿಲ್ಲದ ಕೆಲಸ. ಬೃಹತ್ ಗಾತ್ರದ ಬಾಳೆ ಗೊನೆಗಳಿಂದ ತುಂಬಿದ ತೋಟ ನೋಡಲು ಬರುವವರು ಹತ್ತಾರು ಮಂದಿ.ಯಶಸ್ಸಿನ ಹಾದಿ : ಇಲ್ಲಿನ ರೈತರು ಪ್ರತಿ ಹೆಕ್ಟೇರ್‍ಗೆ 3 ಸಾವಿರ ಸಸಿಗಳಂತೆ ನೆಟ್ಟಿದ್ದು, ಕಡಿಮೆ ಅಂತರದಲ್ಲಿ ಹೆಚ್ಚಿನ ಸಾಂದ್ರತೆ ವ್ಯವಸ್ಥೆ ಬಳಸಲಾಗಿದೆ.   ಅಂಗಾಂಶ ಕೃಷಿ ಬಾಳೆ ‘ಜಿ-ನೇನ್’ ತಳಿಯನ್ನು ಬಳಸಲಾಗಿದೆ.   ಗಿಡಗಳಿಗೆ ಉತ್ತಮ ಕೊಟ್ಟಿಗೆ ಗೊಬ್ಬರ, ಕಾಲಕಾಲಕ್ಕೆ ಕಾಂಪೋಸ್ಟ್, ಪೊಟ್ಯಾಷ್, ಕಾಂಪ್ಲೆಕ್ಸ್, ಗೊಬ್ಬರವನ್ನೂ ನೀಡಿದ್ದು, ಹನಿ-ನೀರಾವರಿ ಅಳವಡಿಸಿಕೊಂಡಿದ್ದಾರೆ.   ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಬನಾನಾ ಸ್ಪೆಷಲ್’ ಲಘು ಪೋಷಕಾಂಶಗಳ ಪುಡಿಯನ್ನು ತಿಂಗಳಿಗೆ ಒಂದರಂತೆ ಆರು ಬಾರಿ ಕಾಂಡ ಮತ್ತು ಗೊನೆಗೆ ಸಿಂಪಡಿಸಿದ್ದು, ಉತ್ತಮ ಇಳುವರಿಗೆ ಸಹಕಾರಿಯಾಗಿದೆ.   ಇದರಿಂದಾಗಿ ಲಘು ಪೋಷಕಾಂಶಗಳ ಕೊರತೆ ನೀಗಿ, ಉತ್ತಮ ಇಳುವರಿ ಬಂದಿದ್ದು, ಗಿಡಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ.  ಹನಿ ನೀರಾವರಿ ಮೂಲಕ ರಸಾವರಿ ಪದ್ಧತಿಯನ್ನು ಅನುಸರಿಸಿ, ನೀರಿನಲ್ಲಿ ಕರಗುವ ಗೊಬ್ಬರವನ್ನು ಗಿಡಗಳಿಗೆ ಸಮೃದ್ಧಿಯಾಗಿ ನೀಡಲಾಗಿದೆ.   ಪ್ರತಿ ಹೆಕ್ಟೇರ್‍ಗೆ ರೈತರು ಸುಮಾರು 1.5 ಲಕ್ಷ ರೂ. ವೆಚ್ಚ ಮಾಡಿದ್ದರೆ, ತೋಟಗಾರಿಕೆ ಇಲಾಖೆಯು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರತಿ ಹೆಕ್ಟೇರ್‍ಗೆ 1. 10 ಲಕ್ಷ ರೂ. ಸಬ್ಸಿಡಿ ನೀಡಿದೆ.  ಅಲ್ಲದೆ  ಹನಿ ನೀರಾವರಿಗಾಗಿ ಶೇ. 90 ರಷ್ಟು ಸಬ್ಸಿಡಿಯನ್ನು ಫಲಾನುಭವಿ ರೈತರಿಗೆ ಒದಗಿಸಿದೆ.  ಗಿಡ ನೆಟ್ಟ 06 ತಿಂಗಳಿಗೆ ಗೊನೆಗಳು ಬಂದಿದ್ದು, 9-10 ತಿಂಗಳ ನಂತರ ಬಾಳೆ ಗೊನೆ ಕಟಾವಿಗೆ ಸಿದ್ಧವಾಗಿವೆ.

ಲಕ್ಷಗಟ್ಟಲೆ ಆದಾಯ : ಪ್ರತಿ ಬಾಳೆ ಗೊನೆ 25 ರಿಂದ 30 ಕೆ.ಜಿ.ಯಷ್ಟು ಬರುವುದು ಸಾಮಾನ್ಯ.  ಆದರೆ ತೋಟಗಾರಿಕೆ ಇಲಾಖೆ ನೀಡಿದ ಸಲಹೆಗಳನ್ನು ಆಸಕ್ತಿಯಿಂದ ರೈತರು ಪಾಲಿಸಿದ ಪರಿಣಾಮವಾಗಿ, ಇಲ್ಲಿನ ಬಾಳೆ ತೋಟದಲ್ಲಿ ಪ್ರತಿಯೊಂದು ಗೊನೆ 40 ರಿಂದ 50 ಕೆ.ಜಿ. ತೂಗುತ್ತಿವೆ.  ಸದ್ಯ ಪ್ರತಿ ಕೆ.ಜಿ. ಬಾಳೆಗೆ ಸರಾಸರಿ 12 ರಿಂದ 16 ರೂ. ದೊರೆಯುತ್ತಿದ್ದು, ಪ್ರತಿ ಹೆಕ್ಟೇರ್‍ಗೆ ರೈತರು 9 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.  ಉತ್ತಮ ಗುಣಮಟ್ಟದ ಈ ಬಾಳೆ ಖರೀದಿಸಲು ಹಣ್ಣು ಖರೀದಿ ಗುತ್ತಿಗೆದಾರರು ಪೈಪೋಟಿಗೆ ಇಳಿದಿದ್ದಾರೆ.   ಬಾಳೆ ಬೆಳೆದಿರುವ ರೈತರಿಗೆ ಇದು ಮೊದಲ ವರ್ಷದ ಬೆಳೆಯಾಗಿದ್ದು, ಮುಂದಿನ ಎರಡು ವರ್ಷ ಬಾಳೆ ತೋಟದ ವೆಚ್ಚ ಶೇ. 70 ರಷ್ಟು ಕಡಿಮೆ ಆಗಲಿದೆ.  ಮುಂದಿನ ಎರಡೂ ವರ್ಷ ಇಲ್ಲಿನ ರೈತರಿಗೆ ಭರಪೂರ ಆದಾಯ ಬರುವುದಂತೂ ನಿಶ್ಚಿತ.
ಇಲ್ಲಿನ ರೈತ ಸುಭಾಷ್ ಭೈರಣ್ಣವರ್ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ.  ನಮ್ಮ ಹೊಲದಲ್ಲಿ ಈ ಮೊದಲು ಮೆಕ್ಕೆಜೋಳ, ಮೆಣಸಿನಕಾಯಿ, ಈರುಳ್ಳಿ ಮುಂತಾದ ಬೆಳೆಯನ್ನು ಹಾಕಿದ್ದೇವೆ.  ಆದರೆ ಇದ್ಯಾವುದೂ ಅಷ್ಟೊಂದು ಆದಾಯ ತಂದಿರಲಿಲ್ಲ.  ತೋಟಗಾರಿಕೆ ಇಲಾಖೆಯವರ ಸಲಹೆ ಹಾಗೂ ಮಾರ್ಗದರ್ಶನದಂತೆ ಇದೇ ಮೊದಲ ಬಾರಿಗೆ ಬಾಳೆ ಬೆಳೆಯಲು ಮುಂದಾದೆವು.  ಇಲಾಖೆಯು ಯೋಜನೆಯಡಿ ನೀಡಿದ ಸವಲತ್ತು ಬಳಸಿಕೊಂಡು  ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದೇವೆ.   ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, ವಿಷಯ ತಜ್ಞ ವಾಮನ ಮೂರ್ತಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್, ಸಹಾಯಕ ತೋಟಗಾರಿಕೆ ಅಧಿಕಾರಿ ವಿಜಯ ಮಹಾಂತೇಶ್, ತೋಟಗಾರಿಕೆ ಸಹಾಯಕ ಬಸವರಾಜ ರಾಂಪೂರ ಹೀಗೆ  ಹಲವರು ಮಾರ್ಗದರ್ಶನ ನೀಡಿದ್ದಾರೆ, ಹೀಗಾಗಿ ನಮ್ಮ ಬಾಳೆ ತೋಟದಲ್ಲಿ ಉತ್ತಮ ಇಳುವರಿ ಬಂದಿದೆ ಎಂದರು.  ಪ್ರಗತಿ ಪರ ರೈತರಾದ ವೆಂಕನಗೌಡ್ರ ಹಿರೇಗೌಡರ್, ಶಂಕರಗೌಡರ ಹಿರೇಗೌಡರ್, ಅವರು ಪ್ರತಿಕ್ರಿಯಿಸಿ, ನಮ್ಮ ಭಾಗದ ರೈತರು ಇಲಾಖೆಯ ಮಾರ್ಗದರ್ಶನ ಪಡೆದು, ಯಶಸ್ವಿ ರೈತರಾಗುತ್ತಿದ್ದಾರೆ.  ತೋಟಗಾರಿಕೆ ಇಲಾಖೆ ರೈತರಿಗೆ ಮಾರ್ಗದರ್ಶನ ನೀಡಿ, ಪ್ರೋತ್ಸಾಹ ನೀಡುತ್ತಿರುವುದು ಸಂತಸ ತಂದಿದೆ.  ಇದರಿಂದಾಗಿ ಇತರೆ ರೈತರು ಸಹ ಬಾಳೆ ಬೆಳೆಯಲು ಮುಂದಾಗುತ್ತಿದ್ದಾರೆ ಎಂದರು.
ಯಶಸ್ವಿಯಾದ ರೈತರು :  ಕಾತರಕಿ-ಗುಡ್ಲಾನೂರ, ಬೇಳೂರು, ಮತ್ತೂರು ಸುತ್ತಮುತ್ತಲ ಗ್ರಾಮಗಳ ಅನೇಕ ರೈತರು ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಸವಲತ್ತು ಪಡೆದು, ತಮ್ಮ ಹೊಲಗಳಲ್ಲಿ ಇದೇ ಮಾದರಿಯಲ್ಲಿ ಬಾಳೆ ಬೆಳೆದು ಯಶಸ್ಸು ಕಂಡಿದ್ದಾರೆ.   ಅಲ್ಲದೆ ಪ್ರದೇಶದಲ್ಲಿ ಈ ಮಾದರಿಯಲ್ಲೇ ಬಾಳೆ ಬೆಳೆದು ಶ್ರೀನಿವಾಸ ಹೊಳಿಯಪ್ಪನವರ್, ಕೊಟ್ರಯ್ಯ ಅಬ್ಬಿಗೇರಿಮಠ, ನಿಂಗಪ್ಪ ಹ್ಯಾಟಿ, ಪರಶನಗೌಡ ಹಿರೇಗೌಡರ್, ಈಶ್ವರಗೌಡ ಹಿರೇಗೌಡರ್, ಶಿವಲಿಂಗಮ್ಮ, ವಿರೂಪಣ್ಣ ಅಗಡಿ, ನಾಗರಾಜ್ ಹುರಕಡ್ಲಿ,  ಶಿವಾನಂದಯ್ಯ ಅಬ್ಬಿಗೇರಿಮಠ, ಅಕ್ಷತಾ ಸಿದ್ದಲಿಂಗಪ್ಪ ಉಳ್ಳಾಗಡ್ಡಿ ಯಶಸ್ವಿಯಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೊಟ್ರಯ್ಯ ಅಬ್ಬಿಗೇರಿಮಠ- 9731742939, ಸುಭಾಷ್ ಭೈರಣ್ಣವರ್- 9731048488 ಅಥವಾ ತೋಟಗಾರಿಕೆ ವಿಷಯ ತಜ್ಞರು-9482672039, ಇವರನ್ನು ಸಂಪರ್ಕಿಸಬಹುದು.
Please follow and like us:
error