ಕೊಪ್ಪಳ : ಪಿಓಪಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳ ನಿಷೇಧ

ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಪ್ ಪ್ಯಾರಿಸ್ (ಪಿಓಪಿ) ಮತ್ತು ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೇ ಪಿ.ಓ.ಪಿ ಯಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದೆ. ಅಲ್ಲದೆ ರಾಜ್ಯದ ಉಚ್ಚ ನ್ಯಾಯಾಲಯವು ಕೇಸ್ ನಂ. ೯೨೭ ರಿಂದ ೯೩೧-೨೦೧೭ ಮತ್ತು ೧೩೨೨-೨೦೧೭ ರಲ್ಲಿ ಮಂಡಳಿಯು ಹೊರಡಿಸಿರುವ ಅಧಿಸೂಚನೆಯನ್ನು ಕ್ರಮ ಬದ್ಧಗೊಳಿಸಿರುತ್ತದೆ. ಆದುದರಿಂದ ಕೊಪ್ಪಳ ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮತ್ತು ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ/ ಸಂಸ್ಥೆಗಳಿಗೆ ಉದ್ದಿಮೆ ಪರವಾನಿಗೆಯನ್ನು ನೀಡದಿರಲು ಸೂಚಿಸಲಾಗಿದೆ. ಅಲ್ಲದೆ, ಅನಧಿಕೃತವಾಗಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ಕೊಪ್ಪಳ ನಗರದಲ್ಲಿ ಪ್ಲಾಸ್ಟರ್ ಆಪ್ ಪ್ಯಾರಿಸ್ (ಪಿಓಪಿ) ಮತ್ತು ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ರೀತ್ಯಾ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ೧೯೭೪ರ ಕಲಂ ೪೫-ಎ ಅನ್ವಯ ದಂಡವನ್ನು (ರೂ. ೧೦,೦೦೦/- ವರೆಗೆ) ಮತ್ತು ಜೈಲು ವಾಸವನ್ನು ವಿಧಿಸುವ ಅವಕಾಶವಿದ್ದು, ತಯಾರಕರು, ಮಾರಾಟಗಾರರು ಹಾಗೂ ಸಾರ್ವಜನಿಕರು ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ಉಪಯೋಗಿಸದಂತೆ ಪೌರಾಯುಕ್ತರು   ತಿಳಿಸಿದ್ದಾರೆ.

Please follow and like us:
error

Related posts