You are here
Home > Koppal News > ಕೊಪ್ಪಳ ನೂತನ ಡಿಸಿ ಪೊಮ್ಮಲ ಸುನಿಲ್‍ಕುಮಾರ್ ಅಧಿಕಾರ ಸ್ವೀಕಾರ

ಕೊಪ್ಪಳ ನೂತನ ಡಿಸಿ ಪೊಮ್ಮಲ ಸುನಿಲ್‍ಕುಮಾರ್ ಅಧಿಕಾರ ಸ್ವೀಕಾರ

: ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ 2011 ರ ಬ್ಯಾಚ್‍ನ ಐಎಎಸ್ ಅಧಿಕಾರಿ ಪೊಮ್ಮಲ ಸುನೀಲ್‍ಕುಮಾರ ಅವರು ಮಂಗಳವಾರದಂದು ಅಧಿಕಾರ ವಹಿಸಿಕೊಂಡರು.
ಜಿಲ್ಲಾಧಿಕಾರಿಯಾಗಿದ್ದ ಎಂ. ಕನಗವಲ್ಲಿ ಅವರನ್ನು ಪದವಿಪೂರ್ವ ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಪೊಮ್ಮಲ ಸುನಿಲ್ ಕುಮಾರ್ ಅವರನ್ನು ಸರ್ಕಾರ ನೇಮಿಸಿ ಸೋಮವಾರವಷ್ಟೆ ಆದೇಶ ಹೊರಡಿಸಿತ್ತು. ಎಂ. ಕನಗವಲ್ಲಿ ಅವರು ನೂತನ ಜಿಲ್ಲಾಧಿಕಾರಿಗೆ ಹೂಗುಚ್ಛ ನೀಡುವ ಮೂಲಕ ಕೊಪ್ಪಳಕ್ಕೆ ಸ್ವಾಗತಿಸಿಕೊಂಡರು. ಎಂ. ಕನಗವಲ್ಲಿ ಅವರು, ಕಳೆದ 2015 ರ ನವೆಂಬರ್ ತಿಂಗಳಿನಲ್ಲಿ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಸುಮಾರು 02 ವರ್ಷ 09 ತಿಂಗಳುಗಳ ಸುದೀರ್ಘ ಅವಧಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಉತ್ತಮ ಜನಾನುರಾಗಿ ಕಾರ್ಯಗಳ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದರು.
ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರಾದ ಪೊಮ್ಮಲ ಸುನೀಲ್‍ಕುಮಾರ್ ಅವರು, ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪಡೆದಿದ್ದು, ತಮಿಳುನಾಡಿನ ಚೆನ್ನೈನಲ್ಲಿ ಹಾಗೂ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಸಾಫ್ಟ್‍ವೇರ್ ಕಂಪನಿಗಳಲ್ಲಿ ಸುಮಾರು 07 ವರ್ಷಗಳ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಈ ನೌಕರಿಗೆ ರಾಜೀನಾಮೆ ನೀಡಿ, ಶ್ರಮಪಟ್ಟು ವ್ಯಾಸಂಗ ಮಾಡಿ, ಯುಪಿಎಸ್‍ಸಿ ಪರೀಕ್ಷೆ ಬರೆದು, 2011 ರಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಹಾಸನ ಜಿಲ್ಲೆಯಲ್ಲಿ ಐಎಎಸ್ ಟ್ರೈನಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ, ಹೊಸಪೇಟೆ ಉಪವಿಭಾಗಾಧಿಕಾರಿಯಾಗಿ ಒಂದು ವರ್ಷ 04 ತಿಂಗಳು ಸೇವೆ ಸಲ್ಲಿಸಿದರು. ನಂತರ ಯಾದಗಿರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 07 ತಿಂಗಳ ಸೇವೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಆಯುಕ್ತರಾಗಿ 02 ವರ್ಷ ಮೂರು ತಿಂಗಳ ಸೇವೆ. ಬೆಂಗಳೂರಿನಲ್ಲಿ ವಸತಿ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ರೆಗ್ಯುಲಾರಿಟಿ ಅಥಾರಿಟಿಯಲ್ಲಿ ಕಾರ್ಯದರ್ಶಿಗಳ ಹುದ್ದೆ, ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗುವುದಕ್ಕೂ ಮುನ್ನ ನಗರಾಭಿವೃದ್ಧಿ ಇಲಾಖೆಯ ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯಲ್ಲಿ ಜಂಟಿನಿರ್ದೇಶಕರ (ಸುಧಾರಣೆ) ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Top