ಕೊಪ್ಪಳ ನಗರಸಭೆ ನಡೆಸಿರುವ ಕಳಪೆ ಕಾಮಗಾರಿ ವಿರುದ್ದ ದೂರು


ಕೊಪ್ಪಳ ೧೧: ಕೊಪ್ಪಳ ನಗರದ ಹೊರವಲಯದಲ್ಲಿರುವ ನಗರಸಭೆ ನಿರ್ವಹಿಸುವ ಕಸವಿಲೇವಾರಿ ಘಟಕದಲ್ಲಿ ನಗರಸಭೆಯ ೧೪ ನೇ ಹಣಕಾಸು ಯೋಜನೆಯಡಿ ಕಸವಿಲೇವಾರಿ ಘಟಕದಲ್ಲಿ ಸುಮಾರು ೧೭.೫೦ ಲಕ್ಷರೂಗಳಲ್ಲಿ ರಸ್ತೆ ಡಾಂಬರೀಕರಣ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ನಡೆದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಇದರ ವಿರುದ್ದ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ನಾಗರಾಜ ಬೆಲ್ಲದ್ ಮಂಗಳವಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕ ವಿಜಯಕುಮಾರ ಇವರಿಗೆ ದೂರು ನೀಡಿದರು.
ನಗರಸಭೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ರಸ್ತೆ ಡಾಂಬರೀಕರಣವನ್ನು ಎಸ್ಟೀಮೇಟ್ ಪ್ರಕಾರ ನಡೆಸದೆ ಕಳಪೆಯಾಗಿ ನಿರ್ಮಾಣ ಮಾಡಿದ ಪರಿಣಾಮ ಕೆಲವೇ ದಿನಗಳಲ್ಲಿ ರಸ್ತೆ ಸಂಪೂರ್ಣ ಕಿತ್ತುಹೋಗಿದೆ. ಅಲ್ಲದೇ ಕಾಮಗಾರಿಯ ಹೆಸರಿನಲ್ಲಿರುವಂತೆ ಉದ್ಯಾನವನವನ್ನು ಅಭಿವೃದ್ಧಿ ಮಾಡದೇ ಬರೀ ಕಳಪೆ ರಸ್ತೆಯನ್ನು ನಿರ್ಮಿಸಿ ಕೈತೊಳೆದು ಕೊಂಡಿದ್ದಾರೆ. ಆದ್ದರಿಂದ ಈ ಕಳಪೆ ಕಾಮಗಾರಿಯನ್ನು ಮಾಡಿರುವ ನಗರಸಭೆ ಜೆ.ಇ, ಎಇಇ, ಪೌರಾಯುಕ್ತರು ಹಾಗೂ ಗುತ್ತಿಗೆದಾರರವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕ ವಿಜಯಕುಮಾರ ಇವರಿಗೆ ಮನವಿಸಲ್ಲಿಸಲಾಯಿತು.

Please follow and like us:
error