ಕೊಪ್ಪಳ ನಗರಕ್ಕೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತಾಯ

ಕೊಪ್ಪಳ ನಗರಕ್ಕೆ ಕುಡಿಯುವ ನೀರಿಗಾಗಿ ಕೋಟ್ಯಾಂತರ ರೂಪಾಯಿಗಳ ವ್ಯಯವಾಗುತ್ತಿದ್ದರೂ,  ಬೇಸಿಗೆಯಲ್ಲಿ ಪೂರೈಕೆ ಮಾಡುವಂತೆ ಮಳೆಗಾಲದಲ್ಲಿ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಮಳೆಗಾಲ ಪ್ರಾರಂಭಗೊಂಡು ನಾಲ್ಕು ತಿಂಗಳಾಗುತ್ತಿದ್ದು ತುಂಗಭದ್ರ ನದಿಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದ್ದು ವಾರ, ಹತ್ತು ದಿನಕ್ಕೊಮ್ಮೆ ಪೂರೈಕೆಯಾಗುವ ನೀರು ಸಹ ಶುದ್ದಿಕರಣಗೊಳ್ಳದೇ ಮಳೆ ನೀರನ್ನೆ ನೇರವಾಗಿ ಪೂರೈಕೆಯಾಗುತ್ತಿದೆ, ಪ್ರತಿ ತಿಂಗಳ ಲಕ್ಷಾಂತರ ರೂಪಾಯಿಗಳು ಆಲಂ ಕೇಕ್‌ಗಾಗಿ ಖರ್ಚಾಗುತ್ತಿದ್ದರೂ ನೀರು ಮಾತ್ರ ಶುದ್ದಿಕರಣಗೊಳ್ಳುತ್ತಿಲ್ಲ. ಮೊದಲು ಕೊಪ್ಪಳ ನಗರಕ್ಕೆ ನೀರು ಪೂರೈಕೆ ವಿಳಂಬದ ಬಗ್ಗೆ ಪ್ರಶ್ನಿಸಿದರೆ ಗದಗನಲ್ಲಿ ತಿಂಗಳಿಗೊಮ್ಮೆ ಪೂರೈಕೆಯಾಗುತ್ತದೆ ಎಂದು ಸಿದ್ದ ಉತ್ತರ ಸಿಗುತ್ತಿತ್ತು. ಆದರೆ ಅದೇ ಗದಗನಲ್ಲಿ ಈಗ ಮೂರು ದಿನಕೊಮ್ಮೆ ಶುದ್ದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನಮ್ಮಲ್ಲಿ ಗದಗನ್ನು ಮೀರಿ ವಿಳಂಬದಿಂದ ನೀರು ಪೂರೈಕೆಯಾಗುತ್ತಿದೆ ಎಂದು ಜನಪರ ಸಂಘಟನೆಗಳ ಒಕ್ಕೂಟ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ರುದ್ರೇಶ ಘಾಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಮತ್ತು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿಯಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿರುವ ಬಹುರಾಷ್ಟ್ರೀಯ ಕಂಪನಿ (ಒಓಅ) ಗಳಿಗೆ ನಿತ್ಯ ಒಂದು ಟಿಎಂಸಿ ನೀರು ಪೂರೈಕೆಯಾಗುತ್ತಿದೆ ಎಂದು ಕೇಳಿ ಬರುತ್ತಿದೆ. ಆ ಕಾರ್ಖಾನೆಗಳ ತ್ಯಾಜ್ಯ ನದಿಗೆ ನೀರು ಒದಗಿಸುತ್ತಿದ್ದು, ನೀರು ಮಾಲಿನ್ಯಗೊಳ್ಳುತ್ತಿದೆ ಆದ್ದರಿಂದ ಜಲ ಚರ, ಪ್ರಾಣಿ ಸೇರಿದಂತೆ ಮನುಷ್ಯರಿಗೆ ಆರೋಗ್ಯಕ್ಕೆ ಹಾನಿಕರವಾಗಿದೆ. ಇದನ್ನು ತಾವು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಕೊಪ್ಪಳ ನಗರಕ್ಕೆ ಅಭಿವೃದ್ಧಿ ಪರ್ವ ಎಂದು ಕೋಟ್ಯಾಂತರ ಹಣ ಹೊಳೆ ಹರಿಯುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಶುದ್ದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡದೇ ಪರದಾಡುವಂತೆ ಮಾಡಿದ್ದಾರೆ. ನಗರಕ್ಕೆ ಕಳೆದ ವರ್ಷ ನವೆಂಬರ್‌ದಿಂದ ೨೪ ತಾಸು ನೀರು ಪೂರೈಕೆ ಮಾಡುವುದಾಗಿ ಹೇಳಲಾಗಿತ್ತು., ಆದರೆ ಒಂದು ವರ್ಷ ಸಮೀಪಿಸುತ್ತಿದ್ದರೂ ೨೪ ತಾಸು ನೀರು ಪೂರೈಕೆ ಮಾಡದೇ ವಾರ ಹತ್ತು ದಿನಗಳಿಗೊಮ್ಮೆ ಪೂರೈಕೆಯಾಗುತ್ತಿದೆ. ಕೊಪ್ಪಳದ ಇತಿಹಾಸದಲ್ಲೇ ಮಳೆಗಾಲದಲ್ಲಿ ಇಷ್ಟು ವಿಳಂಬವಾಗಿ ನೀರು ಪೂರೈಕೆಯಾಗಿರಲಿಲ್ಲ. ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲೆ ಈ ಸ್ಥಿತಿ ಮುಂದುವರೆದಿದ್ದು ಸರ್ಕಾರಕ್ಕೆ ನಾಚಿಕೆಯಗುತ್ತಿಲ್ಲವೇ…? ಎಂದು ಮನವಿಯಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ  ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್,  ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಜಿಲ್ಲಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ರಾಜ್ಯ ಸಮಿತಿಯ ಹಿರಿಯ ಸದಸ್ಯ ಡಾ. ಬಿ.ಜ್ಞಾನಸುಂದರ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಮಣ್ಣ ಕಂದಾರಿ, ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು, ಶರಣ್ಣ ದುಂಬರಗುದ್ದಿ ಮತ್ತೀತರರು ಭಾಗವಹಿಸಿದ್ದರು.