fbpx

ಕೊಪ್ಪಳ ಜಿಲ್ಲೆ ಹೈ-ಕ ಪ್ರದೇಶದಲ್ಲಿಯೇ ಬಯಲು ಬಹಿರ್ದೆಸೆ ಮುಕ್ತ ಮೊದಲ ಜಿಲ್ಲೆ

ಕೊಪ್ಪಳ ಜಿಲ್ಲೆ ಹೈ-ಕ ಪ್ರದೇಶದಲ್ಲಿಯೇ ಬಯಲು ಬಹಿರ್ದೆಸೆ ಮುಕ್ತ ಮೊದಲ ಜಿಲ್ಲೆಯಾಗಿದೆ- ರಾಜಶೇಖರ ಹಿಟ್ನಾಳ

: ಕೊಪ್ಪಳ ಜಿಲ್ಲೆಯಲ್ಲಿ ಒಟ್ಟಾರೆ 159545 ವಯಕ್ತಿಕ ಶೌಚಾಲಯ ನಿರ್ಮಿಸುವ ಮೂಲಕ ಬೇಸ್ ಲೈನ್ ಸರ್ವೆ ಪ್ರಕಾರ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಿದ್ದೇವೆ. ಕೊಪ್ಪಳ ಜಿಲ್ಲೆ ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳ ಪೈಕಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿರುವ ಮೊದಲ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಕೊಪ್ಪಳ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಕುಖ್ಯಾತಿಗೆ ಒಳಗಾಗಿದ್ದ ಕೊಪ್ಪಳ ಜಿಲ್ಲೆ ಹಲವಾರು ಅಡ್ಡಿ, ಆತಂಕಗಳ ನಡುವೆಯೂ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ 159545 ವಯಕ್ತಿಕ ಶೌಚಾಲಯ ನಿರ್ಮಿಸುವ ಬೇಸ್ ಲೈನ್ ಸರ್ವೆ ಪ್ರಕಾರ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿದೆ. ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿಯೇ ಬಯಲು ಬಹಿರ್ದೆಸೆ ಮುಕ್ತಗೊಂಡ ಮೊದಲ ಜಿಲ್ಲೆಯಾಗಿ ಕೊಪ್ಪಳ ಜಿಲ್ಲೆ ಘೋಷಣೆಯಾಗಿದೆ. ಬೇಸ್ ಲೈನ್ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 159544 ಕುಟುಂಬಗಳ ಪೈಕಿ 15346 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಹೀಗಾಗಿ ಜಿಲ್ಲೆಯಲ್ಲಿ 144198 ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿತ್ತು. 2013-14 ರಲ್ಲಿ ಕೇವಲ 11334 ಶೌಚಾಲಯ ನಿರ್ಮಿಸಲು ಸಾಧ್ಯವಾಯಿತು. 14-15 ರಲ್ಲಿ 45867, 15-16 ರಲ್ಲಿ 20387, 16-17 ರಲ್ಲಿ 19928 ಹಾಗೂ 2017-18 ರಲ್ಲಿ ಅತಿ ಹೆಚ್ಚು 46682 ಶೌಚಾಲಯಗಳನ್ನು ನಿರ್ಮಿಸಲಾಯಿತು. ಈ ಸಾಧನೆ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಬಯಲು ಬಹಿರ್ದೆಸೆ ಕುರಿತು ಜಿಲ್ಲೆಯಲ್ಲಿ ಜನರ ಮನಸ್ಥಿತಿಯನ್ನು ಬದಲಾಯಿಸುವ ಗುರುತರ ಸವಾಲು ಎದುರಾಯಿತು. ಇದಕ್ಕಾಗಿ ಹಲವಾರು ಆಂದೋಲನ, ಅಭಿಯಾನಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಮಕ್ಕಳಿಂದ ಪಾಲಕರಿಗೆ ಪತ್ರ ಬರೆಸುವ ಚಳುವಳಿ, ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು, ಸುಮಾರು 12 ಸಾವಿರ ವಿದ್ಯಾರ್ಥಿಗಳಿಂದ ಮಾನವ ಸರಪಳಿ, ಜನಪ್ರತಿನಿಧಿಗಳಿಂದ ಸಾರ್ವಜನಿಕರ ಮನವೊಲಿಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಹಿಂದಿನ ಜಿಲ್ಲಾ ಪಂಚಾಯತಿಯ ಅಧ್ಯಕ್ಷರು, ಸಿಇಒ ಆಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ಶ್ರಮ ಹಾಗೂ ಪ್ರಾಮಾಣಿಕ ಯತ್ನದಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಶೌಚಾಲಯ ನಿರ್ಮಾಣಕ್ಕಾಗಿ ಈವರೆಗೆ ಅಭಿಯಾನ, ಆಂದೋಲನಗಳನ್ನು ಕೈಗೊಂಡಿದ್ದು, ಇನ್ನು ಮುಂದೆ, ಶೌಚಾಲಯಗಳ ಬಳಕೆಗಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಒಂದು ಸರ್ಕಾರಿ ಯೋಜನೆ ಅನುಷ್ಠಾನಗೊಳ್ಳಲು ಅಡ್ಡಿ ಆತಂಕಗಳು ಬರುವುದು ಸಹಜ. ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ದೊರಕುವುದಿಲ್ಲ ಎಂಬ ಜನರ ಆತಂಕವನ್ನು ದೂರ ಮಾಡುವುದೇ ಒಂದು ಸವಾಲಿನ ಸಂಗತಿಯಾಗಿತ್ತು. ಆದಾಗ್ಯೂ ಇವೆಲ್ಲ ಸವಾಲುಗಳನ್ನು ಮೆಟ್ಟಿ, ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಿದ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು ಜೊತೆಗೆ ಸಹಕರಿಸಿದ ಎಲ್ಲ ಸಾರ್ವಜನಿಕರು ನಿಜಕ್ಕೂ ಅಭಿನಂದನೆಗೆ ಅರ್ಹರು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಿಸಲು ಹಿಂದೇಟು ಹಾಕುತ್ತಿದ್ದ ಕೆಲವರು ಸ್ಥಳದ ಕೊರತೆ, ಮೇಸ್ತ್ರಿ ಸಿಗುತ್ತಿಲ್ಲ, ಮರಳು, ಸಿಮೆಂಟ್ ದೊರೆಯುತ್ತಿಲ್ಲ ಹೀಗೆ ಹಲವಾರು ಕುಂಟು ನೆಪಗಳನ್ನು ಮುಂದೊಡ್ಡಿದ ಪ್ರಕರಣಗಳು ಜರುಗಿವೆ. ಆದರೆ, ಇವೆಲ್ಲವುಗಳ ನಡುವೆಯೂ, ಅಡ್ಡಿಗಳನ್ನು ನಿವಾರಿಸಿ, ಜನರ ಮನವೊಲಿಸಿ, ಶೌಚಾಲಯ ನಿರ್ಮಾಣ ಪೂರ್ಣಗೊಳಿಸಿದ್ದೇವೆ. ಶೌಚಾಲಯಗಳ ಬಳಕೆಗೆ ಜಾಗೃತಿ ಕಾರ್ಯವನ್ನು ಮುಂದುವರೆಸಲಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ, ಗ್ರಾಮೀಣ ಪ್ರದೇಶಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಕನಸನ್ನು ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ನನಸಾಗಿಸಿದ್ದಾರೆ. ಶೌಚಾಲಯ ನಿರ್ಮಾಣದಲ್ಲಿ ಪ್ರಗತಿಯನ್ನು ಸಾಧಿಸಿರುವ ಕೊಪ್ಪಳ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲೂ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕೆಂಬುದು ತಮ್ಮ ಆಶಯವಾಗಿದೆ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ ಅವರು, ಕೊಪ್ಪಳ ಜಿಲ್ಲೆಯಲ್ಲಿ ಶೌಚಾಲಯ ಜಾಗೃತಿಯ ಕ್ರಾಂತಿ ಹಬ್ಬಿಸಿದ ನೆನಪುಗಳನ್ನು ಮೆಲುಕು ಹಾಕಿದರಲ್ಲದೆ, ಹಿಂದಿನ ಅವಧಿಯಲ್ಲಿ ಸಿಇಒ ಆಗಿ ಕಾರ್ಯ ನಿರ್ವಹಿಸಿದ ಡಿ.ಕೆ. ರವಿ, ಕೃಷ್ಣ ಉದಪುಡಿ, ರಾಮಚಂದ್ರನ್ ಅಧಿಕಾರಿಗಳು ಜೊತೆಗೆ ಕೊಪ್ಪಳ ಜಿಲ್ಲೆಯ ಮಾಧ್ಯಮದವರ ಸಹಕಾರ ಹಾಗೂ ಸೇವೆಯನ್ನು ಸ್ಮರಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್‍ ಶೆಟ್ಟಿ, ಕೊಪ್ಪಳ ತಾಲೂಕಾ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ಜಿ.ಪಂ. ಸದಸ್ಯರುಗಳಾದ ಹನುಮಂತಗೌಡ ಚಂಡೂರ, ಭೀಮಣ್ಣ ಅಗಸಿ ಮುಂದಿನ, ಮಹಾಂತಪ್ಪ ಪೂಜಾರ್, ಉಪಕಾರ್ಯದರ್ಶಿ ಎನ್.ಕೆ. ತೊರವಿ, ರವಿ ಬಸರಿಹಳ್ಳಿ ಉಪಸ್ಥಿತರಿದ್ದರು. ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದಾಸರ್ ನಿರೂಪಿಸಿ ವಂದಿಸಿದರು. ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಿದವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Please follow and like us:
error
error: Content is protected !!