ಕೊಪ್ಪಳ ಜಿಲ್ಲೆಯಲ್ಲಿ 200 ಗಂಟೆಗಳಲ್ಲಿ 21129 ಶೌಚಾಲಯ : ರಾಷ್ಟ್ರೀಯ ದಾಖಲೆ ನಿರ್ಮಾಣ

ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ಜಾಗೃತಿ ಹಾಗೂ ವಯಕ್ತಿಕ ಶೌಚಾಲಯ ನಿರ್ಮಾಣ ವಿಷಯದಲ್ಲಿ ರಾಜ್ಯದಲ್ಲಿಯೇ ಸದಾ ಮುಂಚೂಣಿಯಲ್ಲಿದ್ದ ಕೊಪ್ಪಳ ಜಿಲ್ಲೆ ಇದೀಗ ಮಿಷನ್ 200 ಎನ್ನುವ ಅಭಿಯಾನದ ಮೂಲಕ ಸೆ. 08 ರಿಂದ 16 ರವರೆಗಿನ 200 ಗಂಟೆಗಳ ಅವಧಿಯಲ್ಲಿ 21129 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕೇವಲ ರಾಜ್ಯ ಮಾತ್ರವಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದೆ.
ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶನಿವಾರದಂದು, ಮಿಷನ್ 200 ಅಭಿಯಾನದ ಯಶಸ್ಸಿನ ಕುರಿತಂತೆ ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್ ಅವರು, ಕೊಪ್ಪಳ ಜಿಲ್ಲೆ ವಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಕೇವಲ 200 ಗಂಟೆಗಳ ಅವಧಿಯಲ್ಲಿ 21129 ಶೌಚಾಲಯ ನಿರ್ಮಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ. ಇದುವರೆಗೂ ಶೌಚಾಲಯ ನಿರ್ಮಾಣದ ಮಹತ್ವ ಹಾಗೂ ಜಾಗೃತಿಗಾಗಿ ಇಡೀ ದೇಶದ ಗಮನ ಸೆಳೆದಿದ್ದ ಕೊಪ್ಪಳ ಜಿಲ್ಲೆ, ಇದೀಗ ಶೌಚಾಲಯಗಳನ್ನು ನಿರ್ಮಿಸುವ ವಿಷಯದಲ್ಲಿಯೂ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ ಮಿಷನ್ 200 ಎನ್ನುವ ಅಭಿಯಾನವನ್ನು ಸೆ. 08 ರಿಂದ ಪ್ರಾರಂಭಿಸಿ ಸೆ. 16 ರವರೆಗಿನ 200 ಗಂಟೆಗಳ ಅವಧಿಯಲ್ಲಿ 20 ಸಾವಿರ ಶೌಚಾಲಯವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸ್ಪಂದನೆ ಹಾಗೂ ಸಹಕಾರದಿಂದಾಗಿ ಜಿಲ್ಲೆಯಲ್ಲಿ 200 ಗಂಟೆಗಳ ಅವಧಿಯಲ್ಲಿ 21129 ಶೌಚಾಲಯಗಳ ನಿರ್ಮಾಣವಾಗಿದೆ. ಕೊಪ್ಪಳ ಜಿಲ್ಲಾ ಪಂಚಾಯತಿಯ ಶೌಚಾಲಯ ಜಾಗೃತಿ ಸಾಧನೆಗೆ ಮಿಷನ್ 200 ನ ಯಶಸ್ಸು ಜಿಲ್ಲೆಯ ಖ್ಯಾತಿಗೆ ಮತ್ತೊಂದು ಗರಿ ಮೂಡಿದಂತಾಗಿದೆ. ಕೊಪ್ಪಳ ಜಿಲ್ಲೆಯನ್ನು ಅಕ್ಟೋಬರ್ 02 ರ ಒಳಗಾಗಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಇದೇ ಮಾದರಿಯಲ್ಲಿ ಅಭಿಯಾನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್ ವಿವರಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಿಷನ್ 200 ನ ಯಶಸ್ವಿನ ಕುರಿತು ವಿವರಣೆಯನ್ನು ನೀಡಿ, ಮಿಷನ್ 200 ಅಭಿಯಾನ ಪ್ರಾರಂಭಿಸುವುದಕ್ಕೂ ಮುನ್ನ ಜಿಲ್ಲೆಯಾದ್ಯಂತ ಎಲ್ಲ ತಾ.ಪಂ., ಗ್ರಾ.ಪಂ. ಗಳಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಜಿಲ್ಲೆಯ ಎಲ್ಲ 153 ಗ್ರಾಮ ಪಂಚಾಯತಿಗಳಲ್ಲಿ ಮಿಷನ್ 200 ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದ್ದು, 20 ಸಾವಿರ ಶೌಚಾಲಯ ನಿರ್ಮಾಣದ ಗುರಿಯ ಬದಲಿಗೆ 21129 ಶೌಚಾಲಯಗಳ ನಿರ್ಮಾಣವಾಗಿದೆ. ಈ ವರ್ಷ ಒಟ್ಟಾರೆ 30565 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಿ.ಪಂ., ತಾ.ಪಂ., ಗ್ರಾ.ಪಂ. ನ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳ ಸಹಾಯದಿಂದ ಈ ಯಶಸ್ಸು ಸಾಧ್ಯವಾಗಿದೆ. ಮಿಷನ್ 200 ಅಭಿಯಾನದಡಿ ಜಿಲ್ಲೆಯಲ್ಲಿ ಸೆ. 8 ರಿಂದ 16 ರವರೆಗಿನ ಅವಧಿಯಲ್ಲಿ ಕೊಪ್ಪಳ ತಾಲೂಕಿನಲ್ಲಿ 5724 ಶೌಚಾಲಯಗಳು, ಗಂಗಾವತಿ- 3952, ಕುಷ್ಟಗಿ- 5093 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 6360 ಶೌಚಾಲಯಗಳು ನಿರ್ಮಾಣವಾಗಿದೆ. ಕೇವಲ 200 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿರುವುದು ರಾಷ್ಟ್ರೀಯ ದಾಖಲೆ ಇದಾಗಿದೆ. ಈ ಮೊದಲು ಆಂಧ್ರದ ವಿಜಯನಗರ ಜಿಲ್ಲೆಯಲ್ಲಿ 100 ಗಂಟೆಗಳಲ್ಲಿ 10 ಸಾವಿರ ಶೌಚಾಲಯ ನಿರ್ಮಾಣವಾಗಿದ್ದೇ ರಾಷ್ಟ್ರೀಯ ದಾಖಲೆಯಾಗಿತ್ತು. ಇದೀಗ ಕೊಪ್ಪಳ ಜಿಲ್ಲೆಯಲ್ಲಿ 200 ಗಂಟೆಗಳಲ್ಲಿ 21129 ಶೌಚಾಲಯ ನಿರ್ಮಾಣವಾಗಿರುವುದು ಮತ್ತೊಂದು ರಾಷ್ಟ್ರೀಯ ದಾಖಲೆಯಾಗಿದೆ. ಅಲ್ಲದೆ ಲಿಮ್ಕಾ ದಾಖಲೆ ಕೂಡ ಆಗಿದ್ದು, ಈ ಕುರಿತು ಲಿಮ್ಕಾ ದಾಖಲೆಯಲ್ಲಿ ಇದನ್ನು ದಾಖಲಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಜಿಲ್ಲೆಯಲ್ಲಿನ ಶೌಚಾಲಯ ನಿರ್ಮಾಣದ ಸಾಧನೆಯನ್ನು ಸಂತಸದಿಂದ ಹಂಚಿಕೊಂಡರು.

Please follow and like us:
error