You are here
Home > Koppal News > ಕೊಪ್ಪಳ ಜಿಲ್ಲೆಯಲ್ಲಿ ಭೀಕರ ಬರದ ದರ್ಶನ

ಕೊಪ್ಪಳ ಜಿಲ್ಲೆಯಲ್ಲಿ ಭೀಕರ ಬರದ ದರ್ಶನ


ಕೊಪ್ಪಳ ಜಿಲ್ಲೆಯಲ್ಲಿ ಹಿಂಗಾರು ಮಳೆಯ ವೈಫಲ್ಯದಿಂದ ಹಾನಿಯಾಗಿರುವ ಕುರಿತು ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಭಾನುವಾರದಂದು ಜಿಲ್ಲೆಯಲ್ಲಿನ ಭೀಕರ ಬರದ ದರ್ಶನವಾಯಿತು. ಕೇಂದ್ರ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯ, ಹೈದರಾಬಾದಿನ ಜಂಟಿನಿರ್ದೇಶಕ ಡಾ. ಕೆ. ಪೊನ್ನುಸ್ವಾಮಿ ಹಾಗೂ ಕೇಂದ್ರ ಪಶುಸಂಗೋಪನೆ ಇಲಾಖೆ ಮೇವು ಬೇಸಾಯ ವಿಭಾಗದ ದೆಹಲಿ ಅಧಿಕಾರಿ ವಿಜಯ ಥಾಕರೆ ಮತ್ತು ಭಾರತೀಯ ಆಹಾರ ನಿಗಮ ಬೆಂಗಳೂರು ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಎಲ್. ಚತ್ರು ನಾಯಕ್ ಅವರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ, ಭಾನುವಾರದಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಹಿಂಗಾರು ಬೆಳೆ ಹಾನಿ, ಬರಿದಾದ ಕೃಷಿ ಹೊಂಡಗಳು, ಉದ್ಯೋಗಖಾತ್ರಿ ಯೋಜನೆಯ ಪ್ರಗತಿ, ಜಾನುವಾರುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ತೆರೆದಿರುವ ಗೋಶಾಲೆ ಸ್ಥಳಗಳಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ಭೀಕರ ಬರದ ದರ್ಶನ ಪಡೆಯಿತು. ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಬಳಿ ಶಿವಪ್ಪ ಆದಾಪುರ ರೈತನ ಹೊಲಕ್ಕೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ, 12 ಎಕರೆ ಜಮೀನಿನಲ್ಲಿ ಕಡಲೆ ಬೆಳೆ ಸಂಪೂರ್ಣ ಹಾನಿಯಾಗಿರುವುದು, ಜೊತೆಗೆ, ಸರ್ಕಾರದ ಸಹಾಯಧನದಲ್ಲಿ ನಿರ್ಮಿಸಲಾಗಿರುವ ಕೃಷಿ ಹೊಂಡ ಒಂದು ಹನಿಯೂ ನೀರಿಲ್ಲದೆ ಸಂಪೂರ್ಣ ಒಣಗಿಹೋಗಿರುವುದನ್ನು ಗಮನಿಸಿತು.  ಸಾಕಷ್ಟು ಹಣ ಖರ್ಚು ಮಾಡಿ, 12 ಎಕರೆಯಲ್ಲಿ ಕಡಲೆ ಬೆಳೆ ಬಿತ್ತಲಾಗಿತ್ತು.  ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬೆಳೆ ಸಂಪೂರ್ಣ ಒಣಗಿಹೋಗಿದೆ, ಇದರಿಂದಾಗಿ ತೀವ್ರ ನಷ್ಟ ಎದುರಿಸುತ್ತಿದ್ದೇವೆ.  ಮುಂಗಾರು ಮಳೆಯೂ ಕೂಡ ವಿಫಲವಾಗಿದ್ದರಿಂದ ಮುಂಗಾರಿನಲ್ಲಿಯೂ ಯಾವುದೇ ಬೆಳೆ ಬಂದಿಲ್ಲ ಎಂದು ರೈತರು ತಂಡದ ಎದುರು ತಮ್ಮ ಅಳಲು ತೋಡಿಕೊಂಡರು.  ನಂತರ ಬನ್ನಿಕೊಪ್ಪ ಬಳಿಯ ಚೆನ್ನಪ್ಪ ಗೊಂಡಬಾಳ ಎಂಬ ರೈತರ ಜಮೀನಿಗೆ ಭೇಟಿ ನೀಡಿದ ತಂಡ, ಇಲ್ಲಿ ಜೋಳ ಬೆಳೆ ಸಂಪೂರ್ಣ ನೆಲಕಚ್ಚಿರುವುದನ್ನು ಕಂಡು, ಬರದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಂಡರು.  ಚನ್ನಪ್ಪ ಗೊಂಡಬಾಳ ರೈತ ತನ್ನ 13 ಎಕರೆ ಜಮೀನಿನಲ್ಲಿ ಜೋಳ ಬೆಳೆದಿದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ.  ಕೇಂದ್ರ ತಂಡವು ಮನ್ನಾಪುರ ಗ್ರಾಮಕ್ಕೆ ಭೇಟಿ ನೀಡಿ, ಶಿವನಗೌಡ ದೇವರೆಡ್ಡಿ ರೈತನ 12 ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ಸಂಪೂರ್ಣ ಹಾಳಾಗಿರುವುದನ್ನು ಪರಿಶೀಲಸಿದರು.  ರಾಜೂರು ಗ್ರಾಮದ ಬಳಿ ಬಾಲಪ್ಪ ನಿಂಗೋಜಿ ತನ್ನ 3 ಎಕರೆಯಲ್ಲಿ ಬಿತ್ತಿದ ಸೂರ್ಯಕಾಂತಿ ಬೆಳೆ ಸಂಪೂರ್ಣ ನಷ್ಟಕ್ಕೆ ಒಳಗಾಗಿರುವುದು ಅಲ್ಲದೆ ಸಂಗನಾಳ ಗ್ರಾಮದ ಬಳಿ ಹಿಂಗಾರು ಮಳೆ ಇಲ್ಲದ ಕಾರಣ ಬಿತ್ತನೆಯಾಗದೆ, ನೂರಾರು ಎಕರೆ ಖಾಲಿ ಉಳಿದಿರುವ ಜಮೀನಿನ ದರ್ಶನ ಪಡೆಯಿತು.  ಯಲಬುರ್ಗಾ ತಾಲೂಕು ಬನ್ನಿಕೊಪ್ಪ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯ, ಹೈದರಾಬಾದಿನ ಜಂಟಿನಿರ್ದೇಶಕ ಡಾ. ಕೆ. ಪೊನ್ನುಸ್ವಾಮಿ ಅವರು, ಹಿಂಗಾರು ಮಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಬರ ತಲೆದೋರಿದ್ದು, ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.  ಈ ಹಿನ್ನೆಲೆಯಲ್ಲಿ ಇಲ್ಲಿನ ಬರದ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಗೆ ಬಂದಿದ್ದೇವೆ.  ಇಲ್ಲಿನ ಭೀಕರ ಬರವನ್ನು ಕಣ್ಣಾರೆ ಕಂಡಿದ್ದೇವೆ.  ಕಳೆದ ಸುಮಾರು ಹತ್ತು ವರ್ಷಗಳಿಂದಲೂ ನಿರಂತರ ಬರ ಪರಿಸ್ಥಿತಿಯನ್ನು ಜಿಲ್ಲೆ ಎದುರಿಸುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿದ್ದಾರೆ.  ಫೆ. 13 ರ ಸೋಮವಾರದಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸುತ್ತೇವೆ.  ನಂತರ ಕ್ರೋಢೀಕೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶೀಘ್ರ ಸಲ್ಲಿಸುತ್ತೇವೆ.  ಕೇಂದ್ರ ಬರ ಅಧ್ಯಯನ ತಂಡ ನೀಡುವ ವರದಿಯ ಆಧಾರದಲ್ಲಿ ಕೇಂದ್ರ ಸರ್ಕಾರ ಪರಿಹಾರ ಅನುದಾನ ಬಿಡುಗಡೆ ಮಾಡಲಿದೆ ಎಂದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ , ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ, ಯಲಬುರ್ಗಾ ತಹಸಿಲ್ದಾರ್ ರಮೇಶ್ ಅಳವಂಡಿಕರ್ ಮುಂತಾದವರಿದ್ದರು.

Leave a Reply

Top