ಕೊಪ್ಪಳ ಜಿಲ್ಲೆಯಲ್ಲಿ‌ ಬರ ಸ್ಥಿತಿ ಬಗ್ಗೆ ಅಧ್ಯಯನ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

Koppal ನಿನ್ನೆಯಿಂದ ರಾಜ್ಯಾದ್ಯಂತ ಪ್ರವಾಸ ಆರಂಭಿಸಿರೋ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ‌ನಾಯಕ ಬಿ.ಎಸ್.ಯಡಿಯೂರಪ್ಪ ಇಂದು ಕೊಪ್ಪಳ ಜಿಲ್ಲೆಯಲ್ಲಿ‌ ಬರ ಸ್ಥಿತಿ ಬಗ್ಗೆ ಅಧ್ಯಯನ ನಡೆಸಿದ್ರು.‌ ನಿನ್ನೆ ಸಂಜೆಯೇ ಕೊಪ್ಪಳಕ್ಕೆ ಆಗಮಿಸಿದ ಬಿಎಸ್ ವೈ ದಾರಿ ಮಧ್ಯೆಯೇ ಇರಕಲ್ಲಗಡಾ ಗೋ‌ಶಾಲೆಗೆ ಭೇಟಿ ನೀಡಿ,‌ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿದರು.‌ ಇಂದು ಬೆಳಗ್ಗೆ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಸ್ವಚ್ಚತೆ ಮಾಡ್ತಿರೋ ಹಿರೇಹಳ್ಳಕ್ಕೆ ಭೇಟಿ ನೀಡಿ, ಕಾಮಗಾರಿ‌ ವೀಕ್ಷಿಸಿದ್ರು. ನಂತರ ಕೊಪ್ಪಳ ತಾಲೂಕಿನ ಕಲ್ ತಾವರಗೇರ, ಕೂಕನಪಳ್ಳಿ ಮತ್ತು ಹಿರೇವಂಕಲಕುಂಟಾ ಗ್ರಾಮದಲ್ಲಿ ಬೆಳೆ ಹಾನಿ ಮತ್ತು ನೀರಿಲ್ಲದ ಬತ್ತಿದ ಕೆರೆಯ ಸ್ಥಿತಿ- ಗತಿಯನ್ನು ಗಮನಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರವಾಸದ ವೇಳೆ ಉದ್ಯೋಗ ಖಾತ್ರಿಯಡಿ ಕೆಲಸ ಮಾಡ್ತಿರೋ ಮಹಿಳೆಯರೊಂದಿಗೆ ಚರ್ಚಿಸಿ ಅವರ ಸಮಸ್ಯೆ ಆಲಿಸಿ, ಅಗತ್ಯ ನೆರವು ನೀಡಲು ರಾಜ್ಯ ಸರ್ಕಾರದ ಮೇಲೆ‌ ಒತ್ತಡ ಹಾಕುವ ಭರವಸೆ ನೀಡಿದ್ರು.

ಇನ್ನು ಹಿರೇವಂಕಲಕುಂಟಾ ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ಸಿಡಿಲಲಾಘಾತಕ್ಕೆ ಸಿಲುಕಿ ಮೃತಪಟ್ಟಿದ್ದ ಹನುಮಂತಪ್ಪ ಗದ್ದಿ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವ ಜೊತೆಗೆ ಶಾಸಕ ಹಾಲಪ್ಪ ಆಚಾರ ನೀಡಿದ 50 ಸಾವಿರ ರೂಪಾಯಿ ವೈಯಕ್ತಿಕ ಧನ ಸಹಾಯವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸಿರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ‌ಕೊಪ್ಪಳ ಜಿಲ್ಲೆಯಲ್ಲಿ ಭೀಕರ ಬರ ತಾಂಡವಾಡ್ತಿದೆ. ಬರ ಸಮರ್ಪಕ ನಿರ್ವಹಣೆ ಮಾಡುವಲ್ಲಿ ಸರ್ಕಾರ ‌ವಿಫಲವಾಗಿದೆ. ಜನರಿಗೆ ಕುಡಿವ ನೀರು, ಜಾನುವಾರುಗಳಿಗೆ ಮೇವು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿ ಕಾರಿದ್ರು. ಜೊತೆಗೆ ಬರ ಪೀಡಿತ ಪ್ರದೇಶಕ್ಕೆ ಆಗಮಿಸಿ ಸಿಎಂ ಅಥವಾ ಜಿಲ್ಲೆ ಉಸ್ತು ಸಚಿವರು ಜಿಲ್ಲೆಗೆ ಆಗಮಿಸಿ ಸಭೆ ಮಾಡ್ತಿಲ್ಲ. ಸಿಎಂ ಕುಮಾರಸ್ವಾಮಿ ಕೇವಲ ಸ್ಟಾರ್ ಹೋಟೆಲ್ ಗೆ ಸೀಮಿತವಾಗಿದ್ದಾರೆ ಅಂತಾ ಹರಿಹಾಯ್ದರು. ಇನ್ನು ಸಂಸದೆ ಸುಮಲತಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರು ಬಿಜೆಪಿ ಕಚೇರಿಗೆ ಬಂದಿದ್ದು ನನಗೆ ಗೊತ್ತಿಲ್ಲ ಎಂದರು. ಬರ ಅದ್ಯಯನ ಕ್ಕೆ ಬಂದಿದ್ದ ತಂಡದಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ್ ದಡೆಸೂಗೂರು, ಪರಣ್ಣ ಮುನವಳ್ಳಿ ಸಿ.ವಿ.ಚಂದ್ರಶೇಖರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Please follow and like us:
error