ಕೊಪ್ಪಳದ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ


ಕೊಪ್ಪಳ, ಡಿ. ೧೨: ಕೊಪ್ಪಳ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನ, ಯುವ ಸಾಧಕರನ್ನ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಮ್ಮಿಕೊಂಡಿದ್ದ ರಾಮಾಯಣ ಕಾಲದಲ್ಲಿ ಒಂದು ಚಿಂತನಾ ವಿಚಾರ ಸಂಕಿರಣದಲ್ಲಿ ಸನ್ಮಾನಿಸಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳದ ಹಿರಿಯ ಸಾಹಿತಿ ಡಾ|| ಮಹಾಂತೇಶ ಮಲ್ಲನಗೌಡರ, ಯುವ ಪತ್ರಕರ್ತ, ಸಂಘಟಕ ಮಂಜುನಾಥ ಜಿ. ಗೊಂಡಬಾಳರಿಗೆ ಕರ್ನಾಟಕ ಭೂಷಣ ರಾಜ್ಯ ಪ್ರಶಸ್ತಿ, ಶಿಕ್ಷಕ, ಸಾಹಿತಿ ಸುರೇಶ ಕಂಬಳಿ ಅವರಿಗೆ ಕರ್ನಾಟಕ ರಾಜ್ಯ ಶಿಕ್ಷಣ ರತ್ನ ಪ್ರಶಸ್ತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಬಾಲ ಗಾಯಕ ಕೊಪ್ಪಳದ ಅರ್ಜುನ್ ಇಟಗಿ ಸಂಗೀತ ಕಾರ್ಯಕ್ರಮ ಜೊತೆಗೆ ಗಂಗಾವತಿಯ ಬಾಬುಸಾಬ್ ಎಂ. ಮತ್ತು ಅಂಜಲಿ ಎಚ್.ರವರು ಕರಾಟೆ ಪ್ರದರ್ಶನ, ಕೊಪ್ಪಳದ ವ್ಯಂಗ್ಯ ಚಿತ್ರಕಲಾವಿದರಾದ ಬದರಿ ನಾರಾಯಣ ಪುರೋಹಿತ್, ಮೊಬೈಲ್ ಫೋಟೋಗ್ರಫಿ ಕಲಾವಿದರಾದ ಛಾಯಾಗ್ರಾಹಕ ಈರಣ್ಣ ಬಡಿಗೇರ್ ಮತ್ತು ಕುಷ್ಟಗಿಯ ರಮೇಶ ಚೆನ್ನದಾಸರ್‌ರವರ ಛಾಯಾಚಿತ್ರಗಳ ಪ್ರದರ್ಶನ ನೀಡಿದ ಅವರನ್ನು ಕರ್ನಾಟಕ ರಾಜ್ಯ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು.
ಹಿರಿಯ ವಾಗ್ಮಿಗಳಾದ ವಿದ್ಯಾವಾಚಸ್ಪತಿ ಕವಿತಾ ಕೃಷ್ಣರವರು ಮಾತನಾಡಿ, ಕನ್ನಡ ಭಾಷೆ ರಾಮಾಯಣ ಕಾಲದಲ್ಲಿ ಇತ್ತು ಎಂಬುದಕ್ಕೆ ಇತಿಹಾಸದ ವಿವರಣೆಗಳಲ್ಲಿ ಸಿಗುತ್ತಿದೆ, ರಾಮಾಯಣವನ್ನು ಸರಿಯಾದ ದಿಕ್ಕಿನಲ್ಲಿ ಅಧ್ಯಯನಕ್ಕೆ ಒಳಪಡಿಸಿದರೆ, ಹುಡುಕುತ್ತಾ ಹೋದರೇ ಕನ್ನಡ ಪದಗಳ ಬಳಕೆ ರಾಮಾಯಣ ಕಾವ್ಯದಲ್ಲಿ ಸಿಗುತ್ತವೆ. ಕಥೆಯೊಂದರಲ್ಲಿ ಹೇಳುವಂತೆ ವಾಲ್ಮೀಕಿಗೆ ಋಷಿ ನಾರದರು ಮರಾ ಎಂದು ಹೇಳಲು ಆ ಪದ ಕೇವಲ ಕನ್ನಡದಲ್ಲಿ ಮಾತ್ರವೇ ಇರುವದನ್ನು ಗಮನಿಸಬೇಕು ಎಂದರು.
ಕನ್ನಡ ಹಿರಿಯ ಸಾಹಿತಿಗಳಾದ ಡಿ.ವಿ. ಗುಂಡಪ್ಪ ಈ ಬಗ್ಗೆ ಮಾಡಿದ ಸಂಶೋಧನೆ ನಮಗೆ ಆಧಾರ, ರಾಮಾಯಣದ ಕಿಷ್ಕಿಂದೆ ಕನ್ನಡ ಪ್ರದೇಶದಲ್ಲಿದೆ. ಇಲ್ಲಿಯ ಕಪಿಗಳು ಮಾತನಾಡುತ್ತಿದ್ದ ಭಾಷೆ ಕನ್ನಡ ಎಂದು ಗುರುತಿಸಹಬಹುದು. ಸೀತೆಯನ್ನು ಹುಡುಕಿ ಬಂದ ರಾಮ ಲಕ್ಷ್ಮಣರು ಕಪಿಗಳ ಪರಿಚಯ, ಆಂಜನೇಯನ ಭೇಟಿ, ವಾಲಿ ವಧೆ ಹಾಗೂ ಹನುಮಂತನ ಲಂಕಾದಹನ ಸೇರಿ, ೪ ವರ್ಷ ಈ ಪ್ರದೇಶದಲ್ಲಿ ಸುಗ್ರೀವನ ಅತಿಥಿಯಾಗಿದ್ದರು. ಕಪಿ ಸೈನ್ಯ ಹಾಗೂ ಅವರ ಪ್ರೀತಿ ಸಂಪಾದಿಸಲು ರಾಮ ಲಕ್ಷ್ಮಣರು ಕಪಿಗಳ ಭಾಷೆಯಾದ ಕನ್ನಡವನ್ನು ಮಾತನಾಡಲು ಸಾಧ್ಯವಿದ್ದುದನ್ನು ಗುರುತಿಸಬಹುದು.
ವಾಲ್ಮೀಕಿ ರಾಮಾಯಣದಲ್ಲಿ ಕೆಲ ಕನ್ನಡ ಪದಗಳ ಬಳಕೆ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ರಾಮಾಯಣ, ಮಹಾಭಾರತ ಮಹಾ ಕಾವ್ಯಗಳನ್ನು ವಿಮರ್ಶೆ ಹಾಗೂ ಸಂಶೋಧನೆಗೊಳಪಡಿಸಿದರೆ, ಕನ್ನಡದ ಅಸ್ತಿತ್ವ ೫ ಸಾವಿರ ವರ್ಷಕ್ಕೆ ಹಿಂದಕ್ಕೆ ಹೋಗುತ್ತದೆ ಎಂದರು.
ಸಮಾರಂಭವನ್ನು ಮಾಜಿ ಸಚಿವ ರಾಮಚಂದ್ರಗೌಡರು ಉದ್ಘಾಟಿಸಿ ಮಾತನಾಡಿದರು. ದಿವ್ಯಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿಗಳು ಮತ್ತು ಬೆಳಗಾವಿ ಚಿಪ್ಪಲಕಟ್ಟಿಯ ಶ್ರೀ ಕಲ್ಮೇಶ್ವರ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಪ್ರತಿಷ್ಠಾನದ ಅಧ್ಯಕ್ಷ ರಮೇಶ ಸುರ್ವೆ ಅಧ್ಯಕ್ಷತೆ ವಹಿಸಿದ್ದರು.ಬಿ.ಟಿವಿ ಸುದ್ದಿ ವಾಹಿನಿ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಕುಮಾರ್ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ಚಲನಚಿತ್ರ ಕಲಾವಿದರಾದ ಶಂಕರ್‌ಭಟ್, ಡಾ. ಚಿಕ್ಕಹೆಜ್ಜಾಜಿ ಮಹದೇವ ಮತ್ತು ಮೀನಾ ರಾಜ್, ನೃತ್ಯ ನಿರ್ದೇಶಕಿ ಪ್ರಿಯಾಂಕ ಮುಂತಾದವರು ಇದ್ದರು.

Please follow and like us:
error