ಕೊಪ್ಪಳದಲ್ಲೊಂದು ಮಿರ್ಚಿ ಜಾತ್ರೆ

ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾ ದಾಸೋಹದಲ್ಲಿ ಇಂದು ಮಾದಲಿ, ರೊಟ್ಟಿ, ಮಡಿಕೆಕಾಳು ಪಲ್ಯ್ಲೆ, ಕುಂಬಳಕಾಯಿ ಭಾಜಿ, ಹಾಲು, ತುಪ್ಪ, ಅನ್ನ, ಸಾಂಬಾರ, ಪುಡಿ ಚಟ್ನಿ, ಭಕ್ತರಿಗಾಗಿ ಮಹಾ ಪ್ರಸಾದ ವಿತರಿಸಲಾಯಿತು. ಇವತ್ತಿನ ವಿಶೇಷ ಉತ್ತರ ಕರ್ನಾಟಕದ ಮಿರ್ಚಿ. ಪ್ರತಿ ವರ್ಷದಂತೆ ದಾಸೋಹದಲ್ಲಿ ಈ ವರ್ಷವೂ ಮಿರ್ಚಿಗಳನ್ನು ವಿತರಿಸಲಾಯಿತು. ಮಿರ್ಚಿಗಳ ತಯಾರಿಗಾಗಿ ಸಿರಗುಪ್ಪ ನಿವಾಸಿಯಾದ ಭಕ್ತ ಆರವಿ ಶಾಂತಮೂರ್ತಿ ೧೫ ಕ್ವಿಂಟಾಲ ಕಡ್ಲಿಬೇಳೆಯನ್ನು ಮಹಾ ದಾಸೋಹಕ್ಕೆ ಕೊಟ್ಟಿದ್ದರು.

ಇದಕ್ಕೆ ಬೇಕಾಗುವ ಎಣ್ಣೆ, ಹಸಿ ಮೆಣಸಿನಕಾಯಿ, ಜೀರಗಿ, ಉಪ್ಪು ಇತರೇ ವಸ್ತುಗಳನ್ನು ಶ್ರೀ ಗವಿಮಠದವತಿಯಿಂದ ಪೊರೈಕೆ ಮಾಡಲಾಗಿರುತ್ತದೆ. ೧೫ ರಿಂದ ೧೬ ಕ್ವಿಂಟಾಲ್ ಕಡ್ಲೆಹಿಟ್ಟು, ೧೨ ಕ್ವಿಂಟಾಲ್ ಹಸಿ ಮೆಣಸಿನಕಾಯಿ, ೭ ಬ್ಯಾರೆಲ್ ಎಣ್ಣೆ, ೬೦ ಬಾಣಸಿಗರ ಒಂದು ತಂಡದಂತೆ ೫ ತಂಡಗಳು ಒಟ್ಟು ೩೦೦ ಕ್ಕಿಂತ ಅಧಿಕ ಬಾಣಸಿಗರು ಮಿರ್ಚಿಯನ್ನು ತಯಾರಿಸಲು ಸೇವೆ ಸಲ್ಲಿಸಿದ್ದಾರೆ. ೨೦ ಜನರ ತಂಡ ಮಿರ್ಚಿಗಳನ್ನ ವಿತರಿಸುವ ಸೇವೆ ಗೈದಿರುತ್ತಾರೆ. ಇಂದು ಬೆಳಿಗ್ಗೆಯಿಂದ ಆರಂಭಗೊಂಡ ಮಹಾದಾಸೋಹದಲ್ಲಿ ರಾತ್ರಿಯವರೆಗೆ ಎರಡು-ಮೂರು ಲಕ್ಷ ಜನರು ಪ್ರಸಾದವನ್ನು ಪಡೆದುಕೊಳ್ಳುತ್ತಾರೆ. ನಾಳೆಯೂ ಸಹ ಜಾತ್ರೆಯ ಸಮಾರೋಪ ಇರುವುದರಿಂದ ಭಕ್ತಾದಿಗಳು ಇಷ್ಟೇ ಸಂಖ್ಯೆಯಲ್ಲಿ ಮಹಾ ದಾಸೋಹದಲ್ಲಿ ಪ್ರಸಾದವನ್ನು ಪಡೆಯುತ್ತಾರೆ. ಪ್ರಸಾದ ಪಡೆದುಕೊಂಡ ಭಕ್ತರು ಮಿರ್ಚಿಯ ಸವಿಯನ್ನು ಸವಿಯುತ್ತ ಪೂಜ್ಯರ ಈ ಸೇವಾ ಕೈಂಕರ್ಯ ಸ್ಮರಿಸಿದರು.

Please follow and like us:
error