ಕೊಪ್ಪಳದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ

ಮಾವು ಮೇಳಕ್ಕೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಂದ ಚಾಲನೆ 
: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕೊಪ್ಪಳದಲ್ಲಿ ಆಯೋಜಿಸಲಾಗಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಮಾವು ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಮಾವು ಮೇಳದಿಂದ ರೈತರು ತಾವು ಬೆಳದಿರುವ ಹಣ್ಣುಗಳನ್ನು ಯಾವುದೇ ಮಧ್ಯವರ್ತಿಗಳ ಸಹಾಯ ಇಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಸಹಕಾರಿಯಾಗಲಿದೆ. ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ಮಾರಾಟ ಮಾಡಲಾಗುತ್ತಿರುವುದರಿಂದ ಆರೋಗ್ಯದ ದೃಷ್ಠಿಯಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ. ಕೊಪ್ಪಳ ಜಿಲ್ಲೆಯ ರೈತರು ಬೆಳದಿರುವ ಹಣ್ಣುಗಳು ಮೇಳದಲ್ಲಿ ಲಭ್ಯವಿದ್ದು ಸಂತೋಷದ ವಿಷಯವಾಗಿದೆ. ಕಳೆದ ವರ್ಷ ಮಾವು ಮೇಳವನ್ನು ಜಿಲ್ಲೆಯಲ್ಲಿ ಮೊದಲನೇ ಬಾರಿಗೆ ಏರ್ಪಡಿಸಲಾಗಿತ್ತು. ಈ ಮೇಳವು ತುಂಭಾ ಯಶಸ್ವಿಯಾಗಿದ್ದು, ಈ ವರ್ಷವೂ ರೈತರಿಗೆ ಹಾಗೂ ಜಿಲ್ಲೆಯ ಸಾರ್ವಜನಿಕರಿಕೆ ಮಾವು ಮೇಳವು ಪ್ರಯೋಜನಕಾರಿಯಾಗಲಿದೆ. ತೋಟಗಾರಿಕೆ ಇಲಾಖೆ ಕಾರ್ಯ ನಿಜಕ್ಕೂ ಶ್ಲ್ಯಾಘನೀಯವಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಅವರು ಮಾತನಾಡಿ, ಮಾವು ಮೇಳವನ್ನು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಮೇಳದಲ್ಲಿ ಕೊಪ್ಪಳ ಜಿಲ್ಲೆಯ ಹಾಗೂ ಸುತ್ತ ಮುತ್ತ ಸೇರಿ ಸುಮಾರು ೫೦ ಕ್ಕೂ ಹೆಚ್ಚಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಬೇನೆಷಾನ್, ಕೇಸರ್, ದಶಹರಿ, ಆಪೂಸ್, ಮಲ್ಲಿಕಾ, ರಸಪೂರಿ, ಸುವರ್ಣರೇಖ, ಇಮಾಮ್ ಪಸಂದ್ ಮುಂತಾದ ತಳಿಗಳು ಲಭ್ಯವಿದ್ದು, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಸವಿಯಲು ಜಿಲ್ಲೆಯ ಸಾರ್ವಜನಿಕರಿಗೆ ಲಭ್ಯವಾಗಿವೆ. ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಹಲವು ತಳಿಯ ಮಾವು ಹಣ್ಣುಗಳ ಲಭ್ಯವಾಗಲಿದ್ದು, ರೈತರಿಗೆ ಯಾವುದೇ ನಷ್ಟ ಇಲ್ಲದೇ ನೇರ ಲಾಭ ದೊರೆಯಲಿದೆ. ಹಾಗೂ ಮಾವಿನ ಹಣ್ಣನ್ನು ಸೇವಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ನೀಡಲಾಗುತ್ತಿದೆ. ಮಾವಿನ ಹಣ್ಣಿನಿಂದ ಸಂಸ್ಕರಿಸಿದ ಉತ್ಪನ್ನಗಳಾದ ಚಟ್ನಿ, ಉಪ್ಪಿನಕಾಯಿ, ಮಾವಿನ ರಸ ಹಾಗೂ ಇತರೆ ಉತ್ಪನ್ನಗಳ ಬಗ್ಗೆ ರೈತರಿಗೂ ಹಾಗೂ ಸಾರ್ವಜನಿಕರಿಗೂ ಮಾಹಿತಿಯನ್ನು ನೀಡಲಾಗುವುದು. ಕೊಪ್ಪಳ ಜಿಲ್ಲೆಯ ಗ್ರಾಹಕರು ಮೇಳದಲ್ಲಿ ಭಾಗವಹಿಸಿ ರೈತರಿಂದ ನೇರವಾಗಿ ಖರೀದಿಸಿ ಜಿಲ್ಲೆಯ ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡಿ, ಹಾಗೂ ಮಾವು ಮೇಳವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಮಾವು ಮೇಳದಲ್ಲಿ ಹಣ್ಣುಗಳು ಎಲ್ಲರ ಮನಸ್ಸನ್ನು ಆಕರ್ಷಿಸುತ್ತಿದ್ದು, ಕೊಪ್ಪಳದ ಸಾರ್ವಜನಿಕರು ಹಣ್ಣು ಖರೀದಿಸಲು ಮಾವು ಮೇಳದತ್ತ ಹೊರಟಿದ್ದಾರೆ. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸ್ವತಹಃ ಹಣ್ಣುಗಳನ್ನು ಖರೀದಿಸುವುದರ ಮೂಲಕ ರೈತರ ಶ್ರಮಕ್ಕೆ ಪ್ರೋತ್ಸಾಹಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನುಪ ಶೆಟ್ಟಿ ಸೇರಿದಂತೆ. ಕೃಷಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.