ಕೊಪ್ಪಳದಲ್ಲಿ ಮಸ್ಟರಿಂಗ್ ಕಾರ್ಯ : ಮತಗಟ್ಟೆಗಳತ್ತ ತೆರಳಿದ ಮತಗಟ್ಟೆ ಸಿಬ್ಬಂದಿ

Koppal news: ನಗರ, ಸ್ಥಳೀಯ ಸಂಸ್ಥೆ ಸಾರ್ವತ್ರಿಕ ಚುನಾವಣೆ ನಿಮಿತ್ಯ ಆ. 31 ರಂದು ಮತದಾನ ಜರುಗಲಿದ್ದು, ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರದಂದು ಅಚ್ಚುಕಟ್ಟಾಗಿ ನೆರವೇರಿತು.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, ಇಲ್ಲಿ 61 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಮತಗಟ್ಟೆ ಸಹಾಯಕರನ್ನು ನೇಮಿಸಲಾಗಿದೆ. ಇದರನ್ವಯ ಒಟ್ಟು 292 ಅಧಿಕಾರಿ, ಸಿಬ್ಬಂದಿಗಳನ್ನು ಮತದಾನ ಪ್ರಕ್ರಿಯೆ ಕೈಗೊಳ್ಳುವ ಕರ್ತವ್ಯಕ್ಕೆ ನೇಮಿಸಲಾಗಿದೆ. ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಮತಗಟ್ಟೆಗಳಿಗೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೇರತೊಡಗಿದರು. ಇದರ ಜೊತೆಗೆ ಚುನಾವಣೆ ಕಾರ್ಯ ಹಾಗೂ ಮತಗಟ್ಟೆಯ ಬಂದೋಬಸ್ತ್‍ಗಾಗಿ ನಿಯೋಜಿತಗೊಂಡಿರುವ ಪೊಲೀಸರು ಕೂಡ ಆಗಮಿಸಿದ್ದರು. ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸರನ್ನು ಕರೆದುಕೊಂಡು ಹೋಗಲು ಕ್ರೂಸರ್ ಹಾಗೂ ಜೀಪ್‍ಗಳು ಸಾರ್ವಜನಿಕ ಮೈದಾನದಲ್ಲ್ಲಿ ಜಮಾವಣೆಗೊಂಡಿದ್ದವು. ಕೊಪ್ಪಳ ನಗರಸಭೆ ವ್ಯಾಪ್ತಿಯ ಚುನಾವಣೆಗಾಗಿ 20 ಕ್ರೂಸರ್‍ಗಳು ಹಾಗೂ 08 ಜೀಪ್‍ಗಳನ್ನು ಬಳಕೆ ಮಾಡಲಾಗಿದೆ. ಇನ್ನೊಂದೆಡೆ, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆಯನ್ನು ವಿತರಿಸಲು ಕೊಠಡಿಗಳನ್ನು ಸ್ಥಾಪಿಸಿ, ಆ ಮೂಲಕ ಸಂಬಂಧಪಟ್ಟ ಮತಗಟ್ಟೆಗಳ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಿಸುವ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಲಾಯಿತು. ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ಗೊಂದಲಕ್ಕೆ ಆಸ್ಪದವಿಲ್ಲದಂತೆ, ಮಸ್ಟರಿಂಗ್ ಕಾರ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು.
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಲಾದ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ, ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ನೆರವೇರಿಸಲು ಪೂರ್ವಭಾವಿಯಾಗಿ ಯೋಜನೆ ರೂಪಿಸಿ, ಅದರಂತೆಯೇ ಕಾರ್ಯಗತಗೊಳಿಸಲಾಯಿತು. ಚುನಾವಣಾ ಸಾಮಗ್ರಿ ವಿತರಣೆ, ಮತಯಂತ್ರಗಳ ವಿತರಣೆ, ಚುನಾವಣೆಗೆ ಮತಗಟ್ಟೆಗಳಿಗೆ ನಿಯೋಜನೆ, ಅನಿವಾರ್ಯ ಕಾರಣಗಳಿಗಾಗಿ ಕರ್ತವ್ಯದಲ್ಲಿ ಬದಲಾವಣೆ ಬಯಸಿದವರಿಗೂ, ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪರ್ಯಾಯವಾಗಿ ಕಾಯ್ದರಿಸಿದ ಸಿಬ್ಬಂದಿಗಳಿಗೆ ಕರ್ತವ್ಯ ನಿಯೋಜಿಸುವ ಕಾರ್ಯವೂ ವ್ಯವಸ್ಥಿತವಾಗಿತ್ತು.
ಕೊಪ್ಪಳ ನಗರಸಭೆ ಕ್ಷೇತ್ರ ವ್ಯಾಪ್ತಿಗೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ಮಸ್ಟರಿಂಗ್ ಕಾರ್ಯದ ಬಗ್ಗೆ ಮೇಲ್ವಿಚಾರಣೆ ಕೈಗೊಂಡರು. ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ್, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಚುನಾವಣಾಧಿಕಾರಿಗಳಾದ ಕೃಷ್ಣಮೂರ್ತಿ, ಮೆಹಮೂದ್, ಕೃಷ್ಣ ಉಕ್ಕುಂದ, ಚಿದಾನಂದ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಮಸ್ಟರಿಂಗ್ ಕಾರ್ಯದ ನೇತೃತ್ವ ವಹಿಸಿದ್ದರು. ಮತದಾನ ಪ್ರಕ್ರಿಯೆ ಆ. 31 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಜರುಗಲಿದೆ.

Please follow and like us:

Related posts