ಕೊಪ್ಪಳದಲ್ಲಿ ದ್ರಾಕ್ಷಿ ಹಾಗೂ ದಾಳಿಂಬೆ ಮೇಳಕ್ಕೆ ಭರ್ಜರಿ ಚಾಲನೆ : ಜನರಿಂದ ಉತ್ತಮ ಸ್ಪಂದನೆ

ರೈತರಿಗೆ ಹಾಗೂ ಗ್ರಾಹಕರಿಗೆ ಸಿಹಿಯಾಯ್ತು ದ್ರಾಕ್ಷಿ, ದಾಳಿಂಬೆ ಮೇಳ

: ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳಲ್ಲಿ ಫೆ. ೧೮ ರಿಂದ ೨೨ ರವರೆಗೆ ಐದು ದಿನಗಳ ಕಾಲ ಆಯೋಜಿಸಲಾಗಿರುವ ದ್ರಾಕ್ಷಿ ಹಾಗೂ ದಾಳಿಂಬೆ ಹಣ್ಣುಗಳ ಮಾರಾಟ ಮತ್ತು ಪ್ರದರ್ಶನ ಮೇಳಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಕರಡಿ ಸಂಗಣ್ಣ ಅವರು ಭಾನುವಾರದಂದು ತೋಟಗಾರಿಕೆ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ರೈತರಿಂದ ನೇರವಾಗಿ ಗ್ರಾಹಕರಿಗೆ ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕೈಗೊಳ್ಳುವ ಕಾರ್ಯಕ್ರಮಗಳನ್ನು ತೋಟಗಾರಿಕೆ ಇಲಾಖೆ ಈ ವರ್ಷ ಆಯೋಜಿಸಿದೆ. ಈ ಪೈಕಿ ಕೊಪ್ಪಳದಲ್ಲಿ ಆಯೋಜಿಸಿದ್ದ ಮಾವು ಮೇಳ, ಜೇನು ಮೇಳದಂತಹ ಕಾರ್ಯಕ್ರಮಗಳು ಭರ್ಜರಿ ಯಶಸ್ಸು ಕಂಡಿದ್ದು, ಇದರಿಂದ ಉತ್ತೇಜಿತಗೊಂಡಿರುವ ತೋಟಗಾರಿಕೆ ಇಲಾಖೆ ಈ ಬಾರಿ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣು ಬೆಳೆಗಾರರಿಗೆ ಕಾರ್ಯಗಾರ ಹಾಗೂ ಮಾರಾಟ ಮೇಳವನ್ನು ಕೊಪ್ಪಳದಲ್ಲಿ ಫೆ. ೧೮ ರಿಂದ ೨೨ ರವರೆಗೆ ಐದು ದಿನಗಳ ಕಾಲ ಆಯೋಜಿಸಿದೆ. ಈ ಹಿಂದೆ ಹಮ್ಮಿಕೊಳ್ಳಲಾದ ಮಾವು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು, ತಮ್ಮ ತೋಟಗಳಲ್ಲಿ ಬೆಳೆದ ಬಗೆ ಬಗೆಯ ಮಾವಿನ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸಲು ಸಾಧ್ಯವಾಗಿತ್ತು. ಇದರ ಜೊತೆಗೆ ಹಣ್ಣು ಬೆಳೆಗಾರರಿಗೆ ನೂತನ ತಾಂತ್ರಿಕತೆ ಹಾಗೂ ಮೌಲ್ಯವರ್ಧನೆ ಕುರಿತಮತೆ ತಜ್ಞರಿಂದ ಮಾಹಿತಿ ನೀಡುವಂತಹ ಕಾರ್ಯಗಾರಗಳನ್ನು ಕೂಡ ಆಯೋಜಿಸಲಾಗುತ್ತಿದೆ. ಇಂತಹ ಮೇಳಗಳು ಕೊಪ್ಪಳದಲ್ಲಿ ಯಶಸ್ವಿಯಾಗುತ್ತಿದ್ದು, ಉತ್ತಮ ಗುಣಮಟ್ಟದ ಹಣ್ಣುಗಳನ್ನು ಜನರು ಮುಗಿ ಬಿದ್ದು ಖರೀದಿಸಿ, ಹಣ್ಣುಗಳನ್ನು ಸವಿದು, ಸಂಭ್ರಮಿಸಿದ್ದರು. ಇದೀಗ ಇಂತಹದೇ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ ಕೊಪ್ಪಳದಲ್ಲಿ ಆಯೋಜಿಸದ್ದು, ಈ ಬಾರಿ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣು ಬೆಳೆಗಾರರಿಗೆ ಇಂತಹ ವೇದಿಕೆಯನ್ನು ತೋಟಗಾರಿಕೆ ಇಲಾಖೆ ಕಲ್ಪಿಸಿದ್ದು, ಇದರ ಜೊತೆಗೆ ಈ ಹಣ್ಣುಗಳ ಬೆಳೆಗಾರರಿಗೆ ವಿಶೇಷ ಕಾರ್ಯಗಾರವನ್ನು ಕೂಡ ಫೆ. ೨೦ ರಂದು ಆಯೋಜಿಸಿದೆ. ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಹಾಗೂ ಸಂಸದ ಕರಡಿ ಸಂಗಣ್ಣ ಅವರು, ಉತ್ಸುಕತೆಯಿಂದ ಮೇಳದ ಆಯೋಜನೆ, ಹಣ್ಣುಗಳ ತಳಿಗಳ ಕುರಿತಂತೆ ಮಾಹಿತಿ ಪಡೆದುಕೊಂಡರು, ಅಲ್ಲದೆ, ರೈತರೊಂದಿಗೆ ಮಾತನಾಡಿ, ಅವರ ಅಭಿಪ್ರಾಯ ಆಲಿಸಿದರು.
೩೦ ಬಗೆಯ ದ್ರಾಕ್ಷಿ, ೦೫ ಬಗೆಯ ದಾಳಿಂಬೆ ಹಣ್ಣು : ಕೊಪ್ಪಳದಲ್ಲಿ ಆಯೋಜಿಸಲಾಗಿರುವ ದ್ರಾಕ್ಷಿ ಮತ್ತು ದಾಳಿಂಬೆ ಮೇಳದಲ್ಲಿ ಸುಮಾರು ೩೦ ಬಗೆಯ ತಳಿಗಳ ದ್ರಾಕ್ಷಿ ಹಣ್ಣುಗಳನ್ನು ಹಾಗೂ ೦೫ ಬಗೆಯ ತಳಿಗಳ ದಾಳಿಂಬೆ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ದ್ರಾಕ್ಷಿ ಹಣ್ಣುಗಳಲ್ಲಿ ಕರಿ ದ್ರಾಕ್ಷಿಗಳ ವಿವಿಧ ತಳಿಗಳೂ ಪ್ರದರ್ಶನದಲ್ಲಿವೆ. ಬಿಯಾಂಕ, ಕಿಶ್‌ಮಿಸ್ ರೋಸಾವೀಸ್, ಟೆಂಪ್ರೋನಿಲೊ, ಸಾವಿನಾನ್, ಗ್ರೆನೆಚ್ ಬ್ಲ್ಯಾಂಕ್, ಶೆನಿನ್ ಬ್ಲ್ಯಾಂಕ್, ಸಿರಸ್, ರೆಡ್‌ಗ್ಲೋಬ್, ಸೂಪರ್ ಸೋನಕಾ, ಕಾಜು ಸೊನಾಕ, ಸೋನಾಕ, ಮನುಕಾ, ೨ಎ ಕ್ಲೋನ್, ಥಾಮ್ಸನ್ ಸೀಡ್‌ಲೆಸ್, ಮಾಣಿಚ್ ಚಮನ್ ತಳಿಗಳ ದ್ರಾಕ್ಷಿಗಳು ಇಲ್ಲಿವೆ. ಕರಿ ದ್ರಾಕ್ಷಿಗಳ ಪೈಕಿ ಸಿಮ್‌ಲಾನಸ್ಕಿ ಚರ‍್ನಿ, ಶಿರಾಜ, ಬ್ಲಾಕ್ ಕರೆಂಟ್, ಮೆಡಿಶಾ, ಗ್ರೆನೆಚ್ ನೊಯಾರ್, ಮೂನ್ ಡ್ರಾಪ್ಸ್, ಕೆಬರ್‌ನೆಟ್ ಸಾವಿನಾನ್, ಶರದ್ ಸೀಡ್‌ಲೆಸ್, ಕೃಷ್ಣ ಶರದ್, ಗ್ಲೋಬಲ್ ಕೃಷ್ಣ, ಫ್ಯಾಂಟಸಿ ಸೀಡ್‌ಲೆಸ್, ಫ್ಲೇಮ್ ಸೀಡ್‌ಲೆಸ್ ತಳಿಗಳ ದ್ರಾಕ್ಷಿ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ದಾಳಿಂಬೆ ಹಣ್ಣುಗಳಲ್ಲಿ ಭಗ್ವಾ (ಕೇಸರ್), ಮುಧುಲಾ, ಗಣೇಶ, ರುಬೀ ಹಾಗೂ ಸ್ಪೆಷಲ್ ಭಗ್ವಾ ತಳಿಗಳ ದಾಳಿಂಬೆ ಹಣ್ಣುಗಳನ್ನು ಪ್ರದರ್ಶನಕ್ಕೆ ಇರಿಸಿದೆ.
೧೫ ಸ್ಟಾಲ್‌ಗಳು : ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ನಿಗದಿತ ದರದಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡವಂತಾಗಲು ಮೇಳದಲ್ಲಿ ರೈತರಿಗಾಗಿ ಸುಮಾರು ೧೫ ಸ್ಟಾಲ್‌ಗಳನ್ನು ಹಾಕಿಕೊಡಲಾಗಿದೆ. ಕೊಪ್ಪಳ ತಾಲೂಕಿನ ಹಿರೇಸಿಂದೋಗಿ, ಅಳವಂಡಿ, ಯಲಬುರ್ಗಾದ ತಳಕಲ್, ವಟಪರವಿ, ಸೇರಿದಂತೆ ಕುಷ್ಟಗಿ, ಮಾಟಲದಿನ್ನಿ, ಕೋನಸಾಗರ ಮತ್ತು ಗಂಗಾವತಿ ತಾಲೂಕುಗಳ ರೈತರು ಮೇಳದಲ್ಲಿ ಪಾಲ್ಗೊಳ್ಳಲು ಉತ್ಸುಕತೆಯಿಂದ ಆಗಮಿಸಿದ್ದಾರೆ. ದ್ರಾಕ್ಷಿ ಹಣ್ಣು ಬೆಳೆಗಾರರೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ದಾಳಿಂಬೆ ಬೆಳೆಗಾರರು ನಿರೀಕ್ಷಿತ ಪ್ರಮಾಣದಲ್ಲಿ ಪಾಲ್ಗೊಳ್ಳದಿರುವುದು ಕಂಡುಬಂತು. ದ್ರಾಕ್ಷಿ ಹಣ್ಣುಗಳಿಗೆ ಕೆ.ಜಿ.ಗೆ ೪೫ ರಿಂದ ೫೦ ರೂ. ನಿಗದಿಪಡಿಸಲಾಗಿದೆ. ಕರಿ ದ್ರಾಕ್ಷಿಗೆ ಪ್ರತಿ ಕೆ.ಜಿ.ಗೆ ೫೫ ರಿಂದ ೬೦ ರೂ. ದರ ನಿಗದಿಪಡಿಸಿದೆ. ದಾಳಿಂಬೆ ಹಣ್ಣು ಪ್ರತಿ ಕೆ.ಜಿ.ಗೆ ರೂ. ೮೦ ರಿಂದ ೮೫ ದರ ನಿಗದಿಪಡಿಸಿದೆ. ಗ್ರಾಹಕರಿಗೆ ಮಾರುಕಟ್ಟೆಯ ದರಕ್ಕಿಂಡ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ದಾಳಿಂಬೆ ಹಾಗೂ ದ್ರಾಕ್ಷಿ ಲಭ್ಯವಾಗುತ್ತಿದ್ದು, ರೈತರಿಗೂ ನೇರವಾಗಿ ಗ್ರಾಹಕರಿಗೆ ಹಣ್ಣು ಮಾರಾಟವಾಗುತ್ತಿರುವುದರಿಂದ, ಒಳ್ಳೆಯ ಲಾಭ ಸಿಗುತ್ತಿದೆ. ಹೀಗಾಗಿ ದ್ರಾಕ್ಷಿ ಮತ್ತು ದಾಳಿಂಬೆ ಮೇಳ ರೈತರಿಗೆ ಹಾಗೂ ಗ್ರಾಹಕರಿಗೆ ಇಬ್ಬರಿಗೂ ಸಿಹಿ ಎನಿಸಿದೆ. ಸಾರ್ವಜನಿಕರೂ ಕೂಡ, ಮಾರುಕಟ್ಟೆ ದರಕ್ಕಿಂದ ಕಡಿಮೆ ದರದಲ್ಲಿ ಹಣ್ಣುಗಳು ದೊರೆಯುತ್ತಿರುವುದರಿಂದ, ಮುಗಿ ಬಿದ್ದು ಖರೀದಿಸುತ್ತಿದ್ದುದು ಮೇಳದಲ್ಲಿ ಕಂಡುಬಂದಿತು.
ಮೇಳ ಆಯೋಜನೆ ಕುರಿತಂತೆ ಮಾತನಾಡಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು, ಹಣ್ಣುಗಳ ಸಗಟು ಮಾರಾಟಗಾರರು ತೋಟಗಳಿಗೆ ತೆರಳಿ, ಅಲ್ಲಿಯೇ ರೈತರಿಂದ ಕಡಿಮೆ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಿ, ಹೆಚ್ಚಿನ ದರದಲ್ಲಿ ಜನರಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಾರೆ. ಆದರೆ, ನಿಜವಾಗಿ ಶ್ರಮಪಟ್ಟ ರೈತನಿಗೆ ಕಡಿಮೆ ಲಾಭವಾಗುತ್ತಿದೆ. ಇಂತಹ ಮೇಳಗಳ ಆಯೋಜನೆಯಿಂದ ನಿಜವಾದ ಶ್ರಮಿಕರಿಗೆ ಉತ್ತಮ ಲಾಭ ದೊರೆಯುವುದಲ್ಲದೆ, ರೈತರ ಆರ್ಥಿಕ ಸಬಲತೆಗೂ ನೆರವಾಗಲಿದೆ. ಹಣ್ಣುಗಳ ಪ್ರದರ್ಶನ, ಮಾರಾಟ ಮೇಳದ ಜೊತೆಗೆ ರೈತರಿಗೆ ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಮಾಹಿತಿ ಹಂಚಿಕೆಯಾಗುವಂತಹ ಕಾರ್ಯಗಾರವನ್ನು ಕೂಡ ತೋಟಗಾರಿಕೆ ಇಲಾಖೆ ಆಯೋಜಿಸುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡರೆ, ಇಲಾಖೆಯ ಶ್ರಮ ಸಾರ್ಥಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಯಂಕಣ್ಣ ಯರಾಸಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ತೋಟಗಾರಿಕೆ ವಿಷಯ ತಜ್ಞ ವಾಮನಮೂರ್ತಿ, ಸಹಾಯಕ ತೋಟಗಾರಿಕೆ ನಿರ್ದೇಶಕ ದುರ್ಗಾಪ್ರಸಾದ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error