ಕೊಪ್ಪಳದಲ್ಲಿ ಉದ್ಯೋಗಮೇಳ

೫,೦೦೦ ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ | ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ

ಕೊಪ್ಪಳ: ಜಿಲ್ಲೆಯ ಮೊದಲ ಹಾಗೂ ಎರಡು ದಿನಗಳ ಬೃಹತ್ ರಾಜ್ಯಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ನಗರದ ಹೊರವಲಯದಲ್ಲಿ, ಗದಗ ರಸ್ತೆಯಲ್ಲಿರುವ ಸುಮಾರು ೧೦ ಎಕರೆ ವಿಸ್ತೀರ್ಣದ ಮಿಲೇನಿಯಂ ಪಬ್ಲಿಕ್ ಸ್ಕೂಲ್‌ನಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸುಮಾರು ೩,೦೦೦ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. 
ಶುಕ್ರವಾರ ಮೇಳದ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಕೊಪ್ಪಳ ವಿಧಾನಸಭಾ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷ ಅಮರೇಶ ಕರಡಿ ಅವರು, ಒಟ್ಟು ೫,೦೦೦ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ೧೦೦ಕ್ಕೂ ಹೆಚ್ಚು ಬೃಹತ್, ಮಧ್ಯಮ ಹಾಗೂ ಸಣ್ಣ ಕಂಪನಿಗಳು ಪಾಲ್ಗೊಳ್ಳುವ ಆಸಕ್ತಿ ತೋರಿವೆ ಎಂದರು. ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆಗಳೆನಿಸಿದ ಇನ್ಫೋಸಿಸ್, ಡೆಲ್, ಅಕ್ಸೆಂಚರ್; ಬ್ಯಾಂಕಿಂಗ್‌ನಲ್ಲಿ ಐಸಿಐಸಿಐ, ಎಚ್‌ಡಿಎಫ್‌ಸಿ; ಆನ್‌ಲೈನ್ ಮಾರ್ಕೆಟಿಂಗ್ ದೈತ್ಯ ಎನಿಸಿರುವ ಅಮೆಜಾನ್, ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್; ಆನ್‌ಲೈನ್ ಪಾವತಿಯ ದೈತ್ಯ ಪೇಟಿಎಂ; ಹೊಂಡಾ, ಸ್ಯಾಮ್‌ಸಂಗ್, ಕಾಫಿ ಡೇ, ಕಣ್ವ ಗ್ರೂಪ್ ಆಫ್ ಕಂಪನೀಸ್- ಹೀಗೆ ವಿವಿಧ ಕ್ಷೇತ್ರಗಳ ಖ್ಯಾತ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ವಿವರಿಸಿದರು.
ಆಗಮಿಸುವ ಅಭ್ಯರ್ಥಿಗಳು ಮತ್ತು ಸಾರ್ವಜನಿಕರಿಗೆ ಉಚಿತ ಊಟೋಪಹಾರದ ವ್ಯವಸ್ಥೆ ಮಾಡಲಾಗಿದೆ. ಮೇಳದ ಮುಖ್ಯ ಪೆಂಡಾಲ್‌ನಲ್ಲಿ ಸುಮಾರು ೩ ಸಾವಿರ ಜನರಿಗೆ ಕೂಡಲು ಆಸನದ ವ್ಯವಸ್ಥೆ ಮಾಡಲಾಗಿದ್ದು, ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ಹಾಗೂ ನೋಂದಣಿ ಕೌಂಟರ್ ಅನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ಆನ್‌ಲೈನ್ ಮೂಲಕ ನೋಂದಣಿ ಮಾಡಲು ಅವಕಾಶವಿದ್ದು, ೮೭೬೨೧ ೬೪೮೯೮ /೭೯೭೫೮ ೨೧೨೩೧ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಮೇಳಕ್ಕೆ ನೇರವಾಗಿ ಆಗಮಿಸುವ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಜಿ.ಪಂ. ಸದಸ್ಯ ಗವಿಸಿದ್ದಪ್ಪ ಕರಡಿ ಹೇಳಿದರು.
ಅ. ೨೮ರಂದು ಬೆಳಗ್ಗೆ ೧೦ ಗಂಟೆಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸುವರು. ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸುವರು. ಅ. ೨೯ರಂದು ಬೆಳಗ್ಗೆ ೧೦ಕ್ಕೆ ಬಳ್ಳಾರಿ ಸಂಸದ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರು ಉದ್ಯೋಗ ಮೇಳಕ್ಕೆ ಉದ್ಯೋಗ ಮೇಳಕ್ಕೆ ಚಾಲನೆ ನೀಡುವರು. ಸುವರ್ಣ ಕೌಶಲ್ಯ ಅಭಿವೃದ್ಧಿ ಯೋಜನೆಯ ಕೌಶಲ್ಯ ತರಬೇತಿ ಕೇಂದ್ರವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉದ್ಘಾಟಿಸುವರು. ಸಂಸದ ಸಂಗಣ್ಣ ಕರಡಿ ಅಧ್ಯಕ್ಷತೆ ವಹಿಸಲಿದ್ದು, ಸಂಸದರಾದ ಪ್ರಹ್ಲಾದ ಜೋಶಿ, ಶಿವಕುಮಾರ ಉದಾಸಿ ಹಾಗೂ ಪಿ.ಸಿ. ಗದ್ದಿಗೌಡರ್ ಪಾಲ್ಗೊಳ್ಳಲಿದ್ದಾರೆ.
——–
ಮೇಳದ ವಿಶೇಷತೆ

* ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ನರ್ಸಿಂಗ್, ಫಾರ್ಮಾ, ಡಿಗ್ರಿ, ಬಿಬಿಎ, ಎಂಬಿಎ, ಬಿಸಿಎ, ಎಂಸಿಎ, ಮಾಸ್ಟರ್ ಡಿಗ್ರಿ- ಯಾವುದೇ ಪದವಿ
* ಸಂದರ್ಶನ ಎದುರಿಸುವ ಕುರಿತು ಕೌಶಲ್ಯ ತರಬೇತಿ
* ಯಶಸ್ವಿ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆಫರ್ ಲೆಟರ್
* ಫೋನ್ ಮೂಲಕವೂ ನೋಂದಣಿ ೮೭೬೨೧ ೬೪೮೯೮ /೭೯೭೫೮ ೨೧೨೩೧
———
ಪಾಲ್ಗೊಳ್ಳಲಿರುವ ಪ್ರಮುಖ ಕಂಪನಿಗಳು

ಇನ್ಫೋಸಿಸ್, ಅಕ್ಸೆಂಚರ್, ಡೆಲ್, ಶೈನ್ ಗ್ರೂಪ್, ಕಾಫಿ ಡೇ, ಲುಮ್ಯಾಕ್ಸ್ ಆಟೊ, ರೆಡ್ ಬಸ್, ಎಸ್.ಆರ್. ಎಂಟರ್‌ಪ್ರೈಸಸ್, ಫ್ರೆಶ್ ವರ್ಲ್ಡ್, ಕಣ್ವ ಗ್ರೂಪ್ ಆಫ್ ಕಂಪನೀಸ್, ಬ್ರಿಲಿಯೆಂಟ್ ಗ್ರೂಪ್, ಸೂಪರ್ ಮಾರ್ಕೆಟ್, ಯುರೇಕಾ ಫೋರ್ಬ್ಸ್, ಮಿಲಿಯನ್ ಮೈಂಡ್ಸ್, ಫ್ಲಿಪ್ ಕಾರ್ಟ್, ಅಮೆಜಾನ್, ಸ್ನ್ಯಾಪ್‌ಡೀಲ್, ಕಿರ್ಲೋಸ್ಕರ್ ಪ್ರೈವೇಟ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಹೊಂಡಾ, ಸ್ಯಾಮ್‌ಸಂಗ್, ಪೇಟಿಎಂ, ಎಚ್‌ಡಿಎಫ್‌ಸಿ, ಬಿಗ್ ಬಾಸ್ಕೆಟ್ ಸೇರಿದಂತೆ ೧೦೦ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸಲಿವೆ.

 

 

Please follow and like us:
error