ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ನೆರವು ಸಂಗ್ರಹ : ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್‌ರಿಂದ ಚಾಲನೆ

ಕೊಡಗು ಜಿಲ್ಲೆ ನೆರೆ ಸಂತ್ರಸ್ತರಿಗೆ ಪರಿಹಾರ ನೆರವು ಸಂಗ್ರಹಕ್ಕಾಗಿ ಕೊಪ್ಪಳದಲ್ಲಿ ಆಯೋಜಿಸಲಾದ ಬೃಹತ್ ರ‍್ಯಾಲಿಯಲ್ಲಿ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಸಾರ್ವಜನಿಕರಿಂದ ದೇಣಿಗೆ ಹಾಗೂ ಸಾಮಾಗ್ರಿಗಳನ್ನು ಸ್ವೀಕರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಯುವ ರೆಡ್‌ಕ್ರಾಸ್ ಘಟಕ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ, ಜಿಲ್ಲಾ ವಕೀಲರ ಸಂಘ, ಭಾರತ ಸೇವಾದಳ ಕೊಪ್ಪಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ “ಕೊಡಗು ಜಿಲ್ಲೆ ನೆರೆ ಸಂತ್ರಸ್ತರಿಗೆ ಪರಿಹಾರ ನೆರವು ಸಂಗ್ರಹ” ಕಾರ್ಯಕ್ರಮವನ್ನು ನಗರದ ಬನ್ನಿ ಕಟ್ಟಿ ಏರಿಯಾದ ಗೌರಿ ಶಂಕರ ದೇವಸ್ಥಾನದಿಂದ ನಗರಾದ್ಯಂತ ಸೋಮವಾರದಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಅತೀವೃಷ್ಠಿಯಿಂದಾಗಿ ಜನ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ನೆರೆ ಹಾವಳಿಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ನೆರವು ನೀಡುವುದು ಅಗತ್ಯವಾಗಿದೆ. ಕಾರ್ಮಿಕರು, ವ್ಯಾಪಾರಸ್ಥರು ಹಾಗೂ ಸರಕಾರಿ ಮತ್ತು ಖಾಸಗಿ ನೌಕರರು ಮಾನವೀಯತೆಯ ದೃಷ್ಠಿಯಿಂದ ಪರಿಹಾರ ಕಾರ್ಯಕ್ಕೆ ಮುಂದಾಗುವುದು ಅತ್ಯಂತ ಪ್ರಸ್ತುತವಾಗಿದ್ದು, ತನು-ಮನ ಧನದಿಂದ ಸಂತ್ರಸ್ಥರಿಗೆ ಸಹಾಯ ಹಸ್ತ ನೀಡಿ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರಿಂದ ಅಗತ್ಯ ಸಾಮಾಗ್ರಿ ಹಾಗೂ ಇನ್ನಿತರೆ ನೆರವನ್ನು ಸ್ವೀಕರಿಸಿ ಕೊಡಗು ನೆರೆ ಸಂತ್ರಸ್ತರಿಗೆ ಒದಗಿಸಲಾಗುವುದು. ಈ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಸೋಮವಾರದಂದು ಮತ್ತು ಮಂಗಳವಾರ ಎರಡು ದಿನಗಳ ಕಾಲ ನಡೆಯಲಿದೆ. ಅಲ್ಲದೇ ಸಾಮಗ್ರಿಗಳನ್ನು ಸ್ವೀಕರಿಸಲು ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಸರಕಾರಿ ನೌಕರರ ಭವನದಲ್ಲಿ, ಕುಷ್ಟಗಿ, ಗಂಗಾವತಿ, ಕನಕಗಿರಿ, ಕಾರಟಗಿ, ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳ ತಹಶೀಲ್ ಕಾರ್ಯಾಲಯದಲ್ಲಿ “ಸಾಮಗ್ರಿಗಳ ಸ್ವೀಕರಣಾ ಕೇಂದ್ರ”ಗಳನ್ನು ಸ್ಥಾಪಿಸಲಾಗಿದ್ದು, ಹೊಸ ಬಟ್ಟೆ, ಪಾತ್ರೆ, ದವಸಧಾನ್ಯ, ಆಹಾರ ಔಷಧಿಗಳನ್ನು ಪರಿಹಾರ ರೂಪದಲ್ಲಿ ಇಲ್ಲಿಗೆ ನೀಡಬಹುದಾಗಿದೆ.
ಸಾಮಗ್ರಿಗಳ ವಿವರ : ಕೊಡಗು ಜಿಲ್ಲೆ ನೆರೆ ಸಂತ್ರಸ್ತರ ಪರಿಹಾರ ನೆರವಿಗಾಗಿ ಸಾರ್ವಜನಿಕರು ನೀಡಬೇಕಾದ ಸಾಮಗ್ರಿಗಳ ವಿವರ ಇಂತಿದೆ. ಅಡುಗೆ ಸಾಮಗ್ರಿಗಳಾದ ಊಟದ ತಟ್ಟೆ, ನೀರಿನ ಗ್ಲಾಸ್, ಅಡುಗೆ ಪಾತ್ರೆ, ಚಮಚೆಗಳು, ಸೀಮೆ ಎಣ್ಣೆ ಸ್ಟವ್. ಬಟ್ಟೆ ಬರೆಗಳಾದ ಸೀರೆ, ಟೀಶರ್ಟ್ಸ್, ಮಕ್ಕಳ ಬಟ್ಟೆಗಳು, ಹಾಸಿಗೆ ಅಥವಾ ಹೊದಿಕೆಗಳು, ರೇನ್ ಕೋಟ್, ಟವಲ್, ಲುಂಗಿ ಹಾಗೂ ಇತ್ಯಾದಿ ದೈನಂದಿನ ಉಡುಪುಗಳು. ಆಹಾರ ಸಾಮಗ್ರಿಗಳಾದ ಬಿಸ್ಕತ್ತು, ಬೇಳೆ ಕಾಳು, ಎಣ್ಣೆ ಪ್ಯಾಕೆಟ್ಸ್, ನೀರಿನ ಬಾಟಲ್‌ಗಳು, ದವಸ ಧಾನ್ಯ, ಮಕ್ಕಳ ಅವಶ್ಯಕ ಆಹಾರ ಪದಾರ್ಥಗಳು. ದಿನ ನಿತ್ಯ ಉಪಯೋಗಿ ವಸ್ತುಗಳಾದ ಸೋಪು, ಪೇಸ್ಟ್, ಕೊಬ್ಬರಿ ಎಣ್ಣೆ, ಟೂತ್ ಬ್ರಶ್. ಇತರೆ ಸಾಮಗ್ರಿಗಳಾದ ಮೇಣದ ಬತ್ತಿ, ಸ್ಯಾನಿಟರಿ ಪ್ಯಾಡ್‌ಗಳು, ಚಾಪೆ, ಬೆಡ್ ಶೀಟ್, ಬ್ಯಾಟರಿಗಳು ಹಾಗೂ ಇತ್ಯಾದಿ ಅಗತ್ಯ ಸಾಮಾಗ್ರಿಗಳನ್ನು ಸಾರ್ವಜನಿಕರು ನೀಡಬಹುದಾಗಿದೆ. ಹಳೆಯ ಮತ್ತು ಉಪಯೋಗಿಸಿದ ವಸ್ತುಗಳನ್ನು ದಯವಿಟ್ಟು ಯಾವುದೇ ಕಾರಣಕ್ಕೂ ದೇಣಿಗೆ ನೀಡಬೇಡಿ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ್ ಅವರು ಮಾತನಾಡಿ, ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಪರಿಹಾರ ನೆರವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ನೀಡಲು ನಿರ್ಧರಿಸಿದೆ. ಸಂತ್ರಸ್ತರ ನೆರವಿಗೆ ಎಲ್ಲರೂ ಕೈಜೋಡಿಸಿ ಎಂದರು.
ಪ್ರೋಬೆಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ಸೇರಿದಂತೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕೊಪ್ಪಳ ನಗರದ ಸಾರ್ವಜನಿಕರು ವಿವಿಧ ಸಾಮಾಗ್ರಿಗಳನ್ನು ಹಾಗೂ ದೇಣಿಗೆಯನ್ನು ರ‍್ಯಾಲಿಯಲ್ಲಿ ನೀಡಿದರು.

Please follow and like us: