ಕೇಂದ್ರದ ಯೋಜನೆ ಎನ್ಕ್ಯಾಶ್ ಮಾಡಲು ಯತ್ನ – ಸಂಸದ ಸಂಗಣ್ಣ ಕರಡಿ ಆರೋಪ

ಹೆದ್ದಾರಿ ಸಿಮೆಂಟ್ ಕಾಮಗಾರಿಗೆ ಚಾಲನೆ

ಕೊಪ್ಪಳ: ರಸ್ತೆ ಕಾಮಗಾರಿಯ ಟೆಂಡರ್ ಆಗಿ ಎರಡು ತಿಂಗಳಾಗಿದೆ. ಅಂದಿನಿಂದ ಇಂದಿನವರೆಗೂ ಭೂಮಿಪೂಜೆಗೆ ಸರಿಯಾದ ಸಮಯ ನೀಡದೇ ಮತ್ತೆ ಮತ್ತೆ ಮುಂದಾಕಲು ಯೋಚನೆ ಮಾಡಿದ್ದರು, ಇಂದಿನ ದಿನ ಭೂಮಿಪೂಜೆಗೆ ಅವರೆ ದಿನಾಂಕ ನಿಗದಿಮಾಡಿದ್ದರೂ ಕಾರ್ಯಕ್ರಮಕ್ಕೆ ಬಂದಿಲ್ಲ. ಕಾರಣ ಡಿ.೫ರಂದು ಕಂದಾಯ ಸಚಿವರಿಂದ ಚಾಲನೆ ಮಾಡಿಸಲು ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಸಿಎಂ ಕರೆಸುವ ಬಗ್ಗೆ ಯೋಚಿಸುತ್ತಿದ್ದಾರೆ. ಇದರ ಹಿಂದೆ ಯಾವ ಚಿಂತನೆ ಇದೆ ಎಂದು ಗೊತ್ತಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೬೩ರ ೫ ಕಿಮೀ ಉದ್ದದ ರಸ್ತೆ ಕಾಂಕ್ರಿಟಿಕರಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 
ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ಇಡೀ ದೇಶವೇ ಸ್ವಾಗತಿಸಿ ಗೆಲ್ಲಿಸಿತು. ಲೋಕಸಭಾ ಚುನಾವಣೆ ವೇಳೆ ನಮ್ಮ ಪಕ್ಷ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ ನಾಯಕ ಮೋದಿ. ವಿದೇಶ ಪ್ರವಾಸ ಮಾಡಿದಾಗ ವಿಪಕ್ಷಗಳು ಗೇಲಿ ಮಾಡಿದರು. ಆದರೆ ಪಕ್ಕದ ದೇಶಗಳ ಸ್ನೇಹ ಸಂಪಾದಿಸಿ, ವಿದೇಶಿ ಬಂಡವಾಳ ತಂದಿದ್ದಾರೆ ಇದು ವಿಪಕ್ಷಗಳಿಗೆ ತಿಳಿಯಬೇಕು ಎಂದರು.
ಸರ್ಜಿಕಲ್ ಸ್ಟ್ರೈಕ್ ಮೂಲಕ ದೇಶದ ಕೀರ್ತಿ ವಿಶ್ವಕ್ಕೆ ತಿಳಿಯಿತು. ಅದಕ್ಕೂ ಕಾಂಗ್ರೆಸ್ ಸಾಕ್ಷಿ ಕೇಳಿತು. ಇದು ನಾಚಿಕೆಗೇಡಿ ಸಂಗತಿ. ಸ್ವಚ್ಚ ಭಾರತ ಅಭಿಯಾನ ಮಾಡಿದ್ದು ಶ್ಲಾಘನೀಯ ಕಾರ್ಯ. ಚೀನಾ ದೇಶಕ್ಕೆ ಇದರ ಕಲ್ಪನೆ ಇರಲಿಲ್ಲ. ಈ ಅಭಿಯಾನ ಹಿಂದೆ ಹಲವು ಯೋಚನೆಗಳಿವೆ. ಶೌಚಾಲಯ ನಿರ್ಮಾಣ ಮಾಡಲು ಸಾಕಷ್ಟು ಅನುದಾನ ನೀಡಿ ತಾಯಂದಿರ ಗೌರವ ಕಾಪಾಡಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಎಂದೂ ಮಾಡಲಿಲ್ಲ ಎಂದು ಅರೋಪಿಸಿದರು.
ಸರ್ಕಾರದ ಯೋಜನೆಗಳ ಪ್ರೋತ್ಸಾಹಧನ ಜನ್ ಧನ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ರೈಲ್ವೆ, ರಸ್ತೆ ಅಭಿವೃದ್ಧಿ ಮಾಡಿದರೆ ಮಾತ್ರ ದೇಶ ಅಭಿವೃದ್ಧಿ ಆಗುತ್ತದೆ. ಅದರಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು ೨೮ ರಾಷ್ಟ್ರೀಯ ಹೆದ್ದಾರಿಗಳನ್ನು ಮಂಜೂರು ಮಾಡಿದೆ. ಈ ಪೈಕಿ ನನ್ನ ಕ್ಷೇತ್ರದಲ್ಲೆ ನಾಲ್ಕು ಹೆದ್ದಾರಿಗಳಿವೆ. ಭಾರತ್ ಮಾಲ ಯೋಜನೆಯಡಿ ಬೈಪಾಸ್ ಮಂಜೂರು ಆಗಿವೆ. ಇವೆಲ್ಲವನ್ನೂ ಕೇಂದ್ರ ಸರ್ಕಾರ ನೀಡಿದೆ ಎಂದು ವಿವರಿಸಿದರು.
ಭಾನಾಪುರ ಕ್ರಾಸ್ ಬಳಿ ಫ್ಲೈ ಓವರ್ ಗೆ ೫೬ ಕೋಟಿ ಮಂಜೂರಾಗಿದ್ದು, ತಿಂಗಳಲ್ಲಿ ಭೂಮಿಪೂಜೆ ಮಾಡುತ್ತೇವೆ. ಕುಷ್ಟಗಿಯಲ್ಲಿ ೬೬ ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದೆ. ಸಿಂಧನೂರು ಪಟ್ಟಣದಲ್ಲಿ ೭೦ ಕೋಟಿ ವೆಚ್ಚದಲ್ಲಿ, ಸಿರುಗುಪ್ಪದಲ್ಲಿ ೮೬ ಕೋಟಿಯಲ್ಲಿ ರಸ್ತೆ, ಸೇತುವೆ ನಿರ್ಮಾಣವಾಗುತ್ತಿದೆ. ರಾಜ್ಯಕ್ಕೆ ಮತ್ತೆ ಮೂರು ಕೇಂದ್ರೀಯ ವಿದ್ಯಾಲಯಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಕಾಂಗ್ರೆಸನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಮಾತೆತ್ತಿದರೆ ಮೋದಿಯನ್ನು ಟೀಕಿಸುವ ರಾಯರಡ್ಡಿಗೆ ಕೇಂದ್ರ ಸರ್ಕಾರ ನೀಡಿದ ಎಲ್ಲ ಯೋಜನೆಗಳು ಕಾಣಿಸುವುದಿಲ್ಲ. ಬರೀ ಕೇಂದ್ರದ ಯೋಜನೆಗಳನ್ನು ಮುಚ್ಚಿಟ್ಟು ಮಾತನಾಡಿ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ದೇಶದಲ್ಲಿ ಇಂದು ರಸಗೊಬ್ಬರದ ಕೊರತೆ ಇಲ್ಲದಂತೆ ಮೋದಿ ಕ್ರಮ ಕೈಗೊಂಡರು. ಜನೌಷಧಿ ಯೋಜನೆ ತಂದು ೬೦ ಸಾವಿರ ಖರ್ಚಿನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಬಹುದು, ಸ್ಟ್ಯಾಂಡಪ್, ಸ್ಟಾರ್ಟ್ಪ್, ಮಹಿಳೆಯರಿಗೆ ಅನೇಕ ಯೋಜನೆ ತಂದಿದ್ದಾರೆ ಮೋದಿ ಎಂದು ಹೇಳಿದರು.
ಕೇಂದ್ರದಿಂದ ಬಂದ ಅಕ್ಕಿಯನ್ನು ರಾಜ್ಯ ಸರ್ಕಾರ ತನ್ನದೆಂದು ಹೇಳಿದೆ. ಲೋಕಾಯುಕ್ತ ಸಂಸ್ಥೆ ಮುಚ್ಚಿ ಎಸಿಬಿ ರಚಿಸಿ ಕೈಗೊಂಬೆ ಮಾಡಿಕೊಂಡಿದ್ದಾರೆ. ಜಾರ್ಜ್ ಒಂದನೇ ಆರೋಪಿಯಾದರೂ ರಾಜಿನಾಮೆ ಪಡೆದಿಲ್ಲ. ವಿನಯ ಕುಲಕರ್ಣಿ ಕೊಲೆ ಕೇಸಿನಲ್ಲಿ ಆರೋಪ ಹೊತ್ತಿದ್ದರೂ ರಾಜಿನಾಮೆ ಪಡೆಯದೇ ರಕ್ಷಿಸುವ ಮೂಲಕ ಸಿಎಂ ಲಜ್ಜಗೇಡಿತನ ಪ್ರದರ್ಶನ ಮಾಡುತ್ತಿದ್ದಾರೆ. ಗೋವಿಂದರಾಜು ಡೈರಿಯಲ್ಲಿ ಕಪ್ಪ ಕೊಟ್ಟಬಗ್ಗೆ ದಾಖಲೆ ಇದೆ. ಅಂತಹ ಭ್ರಷ್ಠ ಸರ್ಕಾರ ಇದು. ಶಾಸಕರು ಮರಳು ಅಕ್ರಮ ಮಾಡುವಲ್ಲಿ ನಿರತರಾಗಿದ್ದಾರೆ. ಸಿಂಗಟಾಲೂರು ಮತ್ತು ಕೊಪ್ಪಳ ಏತನೀರಾವರಿ ಯೋಜನೆಗೆ ಕೇಂದ್ರದಿಂದ ಹಣ ಕೊಡಿಸುತ್ತೇವೆ. ರಾಯರಡ್ಡಿ ತಾನು ಸತ್ಯಹರೀಶ್ಚಂದ್ರನಂತೆ ಫೋಸ್ ಕೊಡುತ್ತಾರೆ. ಲ್ಯಾಪ್ ಟಾಪ್ ಹಗರಣದಲ್ಲಿ ಸಚಿವರು ಭಾಗಿಯಾದ ಬಗ್ಗೆ ಆರೋಪ ಇದೆ. ಎಲ್ಲ ಯೋಜನೆಗಳನ್ನು ತಾನೆ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಯಲಬುರ್ಗಾದಲ್ಲಿ ಕೋಣ ಗರ್ಭ ಧರಿಸಿದರೂ ಅದಕ್ಕೆ ತಾನೇ ಕಾರಣ ಎಂದು ರಾಯರಡ್ಡಿ ಹೇಳುತ್ತಾರಂತೆ ಎಂದು ರಾಯರಡ್ಡಿಯನ್ನು ಗೇಲಿ ಮಾಡಿದರು.
ಮಾಜಿ ಶಾಸಕ ಕೆ. ಶರಣಪ್ಪ ಮಾತನಾಡಿ, ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಕಾಳಜಿ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಆಗಮಿಸಬೇಕು. ಈ ರೀತಿ ಗೈರು ಹಾಜರಿಯಾಗಿ ರಾಜಕಾರಣ ಮಾಡಬಾರದು. ಬರುವ ದಿನಗಳಲ್ಲಿ ರಾಜಕಾರಣ ಮಾಡದಿರಲಿ. ಇಂದು ಕೇಂದ್ರ ಸರ್ಕಾರ ಅನೇಕ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ನೀಡಿದೆ. ಇನ್ನು ಹೆಚ್ಚು ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ, ಹಿಂದುಳಿದ ಜಿಲ್ಲೆಯನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮಾಡಲಿ. ಗ್ರಾಮೀಣ ಭಾಗವನ್ನೂ ಸಂಸದರು ಅಭಿವೃದ್ಧಿ ಮಾಡಲಿ ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್, ಕೇಂದ್ರ ಸರ್ಕಾರ ತಾನು ನೀಡಿದ ಭರವಸೆಯಂತೆ ಇಂದು ಸಿಮೆಂಟ್ ರಸ್ತೆ ಮಾಡಲು ಹಣ ನೀಡಿದೆ. ಶಾಸಕರು ಅಧಿಕಾರ ಪಡೆದ ನಂತರ ತಮ್ಮ ಕುಟುಂಬ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಸಿಎಂ ಕಡೆಯಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಬಹುದಿತ್ತು ಆದರೆ ಅದನ್ನು ಮಾಡಲಿಲ್ಲ. ಇಂತ ಶಾಸಕನಿಗೆ ಬರುವ ದಿನಗಳಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆ. ಈ ಕಾಮಗಾರಿಯನ್ನು ಗುಣಮಟ್ಟ, ಬೇಗನೇ ಮುಗಿಸಲು ಗುತ್ತಿಗೆದಾರರು, ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೀರಪ್ಪ ಕೇಸರಟ್ಟಿ, ಕೆ. ಶರಣಪ್ಪ, ಬಸವರಾಜ ದಡೆಸೂಗೂರು, ಸಿ.ವಿ. ಚಂದ್ರಶೆಖರ್, ಸಂಗಪ್ಪ ವಕ್ಕಳದ, ಅಮರೇಶ ಕರಡಿ, ಅಪ್ಪಣ್ಣ ಪದಕಿ, ಪೀರಾಹುಸೇನ್, ಚಂದ್ರಶೇಖರ್ ಪಾಟೀಲ ಹಲಗೇರಿ, ರಾಘವೇಂದ್ರ ಪಾನಗಂಟಿ, ಚಂದ್ರಶೆಖರ್ ಕವಲೂರು, ಜಿಪಂ ಸದಸ್ಯ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಕರಡಿ, ಅಂದಣ್ಣ ಅಗಡಿ, ಗವಿಸಿದ್ದಪ್ಪ ಕಂದಾರಿ ವಾಣಿಶ್ರೀ, ಮಧುರಾ ಕರಣಂ, ಹೇಮಲತಾ ನಾಯಕ, ತೋಟಪ್ಪ ಕಾಮನೂರ, ಶಿವಕುಮಾರ ಹಕ್ಕಾಪಿಕ್ಕಿ, ಪ್ರವೀಣ ಇಟಗಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಕಾಂಗ್ರೆಸ್ ಸರ್ಕಾರ ತರಾಟೆಗೆ…
ಇಡೀ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಬಿಜೆಪಿಯ ನಾಯಕರು ಸ್ಥಳೀಯ ಶಾಸಕ, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಭಿವೃದ್ಧಿ ಕಾರ್ಯದಲ್ಲಿ ರಾಜ್ಯ ಸರ್ಕಾರ, ಶಾಸಕರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಧೂಳುಮುಕ್ತ ಹೋರಾಟ ಮಾಡಿದರೆ ಮಹಿಳೆಯರು ಎನ್ನದೆ ಎಲ್ಲರ ವಿರುದ್ಧ ಕೇಸ್ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಉಸ್ತುವಾರಿ ಸಚಿವ, ಶಾಸಕ ರಾಘವೇಂದ್ರ ಹಿಟ್ನಾಳ ಮಾಡಿದ್ದಾರೆ ಎಂದು ದೂರಿದರು.

Please follow and like us:
error