ಕೆನಡಾದ ಮ್ಯಾಥ್ಯೂ ಪೌರ್ಟಿಯರ್ ಅವರಿಂದ ೨೦೧೯ ರ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ಚಾಲನೆ

ಕನ್ನಡದ ಮಕ್ಕಳಿಗಾಗಿ ದುಡಿಯುವ ಕೆನಡಾದ ಮ್ಯಾಥ್ಯೂ ಪೌರ್ಟಿಯರ್ ಅವರಿಂದ ೨೦೧೯ ರ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ಚಾಲನೆ.
ಕೊಪ್ಪಳ – ಕರ್ನಾಟಕದಲ್ಲಿ ಸಂಗೀತ ಶಾಲೆಯೊಂದನ್ನು ಕಟ್ಟಿ ೩೦೦ ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ, ಸಾಮಾನ್ಯ ಶಿಕ್ಷಣ, ಊಟ ವಸತಿಯ ವ್ಯವಸ್ಥೆ ಮಾಡುತ್ತಿರುವ ಕೆನೆಡಾದ ಮ್ಯಾಥ್ಯೂ ಪೌರ್ಟಿಯರ್ ಅವರು ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಉದ್ಘಾಟಿಸುತ್ತಿರುವದು ಈ ವರ್ಷದ ಜಾತ್ರಾ ವಿಶೇಷ.
ಭಾರತವನ್ನು ನೋಡಲು ಲಕ್ಷಾಂತರ ವಿದೇಶಿಗರು ಇಲ್ಲಿಗೆ ಬರುತ್ತಾರೆ. ಕೆಲವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತವನ್ನು ನೋಡುತ್ತಾರೆ. ಆದರೆ ಕೆಲವರು ಭಾರತವನ್ನು ಅನುಭವಿಸುತ್ತಾರೆ. ಹಾಗೆಯೇ ತಾವು ಭಾರತವೇ ಆಗುತ್ತಾರೆ. ಭಾರತವಿರುವದು ಹಿಮಾಲಯ, ತಾಜಮಹಲ್, ಹಂಪಿ, ಹಳೇಬಿಡಿನಲ್ಲಿ ಅಲ್ಲ. ಅದು ಕೇವಲ ಭೌತಿಕ ಭಾರತ. ಭಾರತದ ಆತ್ಮ ಈ ದೇಶದ ಸಂಸ್ಕೃತಿ. ಈ ದೇಶದ ಸಂಸ್ಕೃತಿಯ ಸೆಳೆತಕ್ಕೆ ಒಳಾಗದವರು ಮ್ಯಾಥ್ಯೂ ಪೌರ್ಟಿಯರ್ ದಂಪತಿಗಳು. ವಿಶ್ವದ ಹಲವಾರು ದೇಶಗಳನ್ನು ನೋಡಿಬಂದ ಮ್ಯಾಥ್ಯೂ ಪೌರ್ಟಿಯರ್ ಅವರಿಗೆ ಮತ್ತೆ ಮತ್ತೆ ಹೋಗಬೇಕು, ನೋಡಬೇಕು ಎನಿಸಿದ್ದು ಭಾರತವನ್ನು. ಹಾಗಾಗಿ ಭಾರತಕ್ಕೆ ಬಂದು ರಾಮಕೃಷ್ಣ ಮಿಷನ್‌ನಲ್ಲಿ ಕೆಲವು ದಿನಗಳ ಕಾಲ ಭಾರತದ ಆಧ್ಯಾತ್ಮ ಮತ್ತು ಯೋಗ ಕಲಿತರು. ನಂತರ ಎರಡು ವರ್ಷಗಳ ಕಾಲ ಪಶ್ಚಿಮ ಬಂಗಾಳದ ರವೀಂದ್ರನಾಥ ಠ್ಯಾಗೋರ ಅವರ ಶಾಂತಿನೀಕೆತನದಲ್ಲಿ ಪತ್ನಿ ಹಾಗೂ ತಾವೂ ವಿದ್ಯಾರ್ಥಿಗಳಾಗಿ ಪ್ರವೇಶ ಪಡೆದರು.
ನಂತರ ಕಾಶಿಯಲ್ಲಿ ಕೆಲವು ದಿನ ಸಂಗೀತ ಅಭ್ಯಾಸ ಮಾಡಿದರು. ಅಲ್ಲಿರುವಾಗಲೇ ಅವರು, ಕೇಳಿದ್ದು ಕರ್ನಾಟಕದ ಧಾರವಾಡದ ಬಗ್ಗೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಲ್ಲಿಕಾರ್ಜುನ ಮನ್ಸೂರ ಅವರ ಪುತ್ರ ರಾಜಶೇಖರ ಮನ್ಸೂರ ಅವರಲ್ಲಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದರು. ಧಾರವಾಡದಲ್ಲಿರುವಾಗ ಅವರ ಪತ್ನಿ ಆಗ್ಯಾಥ್ ಮೇಹ್ಸ ಹಾಗೂ ಖ್ಯಾತ ಸಂಗೀತಗಾರರಾದ ಹಮೀದ್‌ಖಾನ್‌ರ ಸಹಾಯದಿಂದ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಆಸೆ ಮೊಳಕೆಯೊಡೆಯಿತು. ತಮ್ಮ ಸಹೋದರನ ಸಹಾಯದಿಂದ ಮ್ಯಾಥ್ಯೂ ಪೌರ್ಟಿಯರ್ ಅವರು ಧಾರವಾಡದ ಹತ್ತಿರ ಕಲಕೇರಿ ಗ್ರಾಮದ ೫ ಎಕರೆ ಸ್ಥಳದಲ್ಲಿ ೨೦೦೩ ಇಸ್ವಿಯಲ್ಲಿ ಒಂದು ಸಂಗೀತ ವಿದ್ಯಾಲಯವನ್ನು ಪ್ರಾರಂಭಿಸಿದರು. ಅಲ್ಲಿ ಶಾಸ್ತ್ರೀಯ ಸಂಗೀತ, ತಬಲಾ, ಹಾರ್ಮೋನಿಯಂ, ಬಾನ್ಸೂರಿ, ಸಿತರಾ ಜೊತೆಗೆ ಕನ್ನಡ ಶಾಲೆ ಪ್ರಾರಂಭಿಸಿದರು. ಈಗ ಅಲ್ಲಿ ಸುಮಾರು ೩೦೦ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ವಸತಿ ಸೇರಿದಂತೆ ಎಲ್ಲವನ್ನು ಕಲ್ಪಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿವರ್ಷ ಲಕ್ಷಾಂತರ ರೂಪಾಯಿ ವಿನಿಯೋಗಿಸುತ್ತಿದ್ದಾರೆ.
ಇದಕ್ಕಾಗಿ ಹುಟ್ಟು ಹಾಕಿರುವ ಸಂಸ್ಥೆ ಮೂಲಕ ತಮ್ಮ ದೇಶದಲ್ಲಿಯೆ ದೇಣಿಗೆಯನ್ನು ಸಂಗ್ರಹಿಸಿಕೊಂಡು ಬಂದು ಇಲ್ಲಿಯ ಶಾಲೆಯನ್ನು ನಡೆಸುತ್ತಿರುವದು ವಿಶೇಷ. ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಇರಬೇಕು ಎನ್ನುವ ಕಾರಣಕ್ಕೆ ಕೆರೆಯ ದಡದಲ್ಲಿ ಕಲಕೇರಿ ಗ್ರಾಮದವರ ಸಹಯೋಗದಲ್ಲಿ ಕಟ್ಟಡ ನಿರ್ಮಾಣ ಮಾಡಿಸಿದ್ದಾರೆ. ಹಂತ ಹಂತವಾಗಿ ಬೆಳೆದ ಸಂಸ್ಥೆ ಈಗ ಹೆಮ್ಮರವಾಗಿದೆ. ಅಷ್ಟು ವಿದ್ಯಾರ್ಥಿಗಳಿಗೂ ಸುಸಜ್ಜಿತವಾದ ವಾಸ್ತವ್ಯ ಮತ್ತು ಶಿಕ್ಷಣ ಕೊಡಲಾಗುತ್ತದೆ.
ತಾವು ಕೆನಡಾದವರು ಆಗಿದ್ದರೂ ಸಹ ಎಲ್ಲಿಯೂ ಭಾರತೀಯ ಸಂಸ್ಕೃತಿ ಮೇಲೆ ಅವರ ತಮ್ಮ ಸಂಸ್ಕೃತಿ ಹೇರುವ ಕೆಲಸ ಮಾಡಿಲ್ಲ. ಬದಲಾಗಿ ಭಾರತೀಯ ಸಂಗೀತ ಹಾಗೂ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುತ್ತಿದ್ದಾರೆ. ಹತ್ತಾರು ಶಿಕ್ಷಕರನ್ನು ಸ್ಥಳಿಯವಾಗಿಯೇ ನೇಮಿಸಿಕೊಂಡಿದ್ದಾರೆ. ಕೆನಡಾ ಸೇರಿದಂತೆ ನಾನಾ ದೇಶಗಳ ೧೫ ಜನ ಸ್ವಯಂಸೇವಕರು ಇಲ್ಲಿ ಇರುತ್ತಾರೆ. ಇವರು ಸಹ ಇಲ್ಲಿಯ ಉಸ್ತುವಾರಿ ಮತ್ತು ಮಕ್ಕಳ ಪಾಲನೆ, ಪೋಷಣೆ ಮಾಡುತ್ತಾರೆ.
ಎಜುಕೇಶನ್ ಹಬ್- ಕಲಕೇರಿಯ ಭಾರತೀಯ ಸಂಗೀತ ಶಾಲೆಯ ಆವರಣದಲ್ಲಿ ಎಜುಕೇಶನ್ ಹಬ್ ನಿರ್ಮಾಣ ಮಾಡಿದ್ದಾರೆ. ಅತ್ಯಾಧುನಿಕವಾಗಿರುವ ಈ ಎಜುಕೇಶನ್ ಹಬ್‌ನಲ್ಲಿ ಜಗತ್ತಿನಲ್ಲಿ ದೊರೆಯಬಹುದಾದ ಅತ್ಯತ್ತಮ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳನ್ನು ಆಧುನಿಕ ಶಿಕ್ಷಣಕ್ಕೂ ಅಣಿಗೊಳಿಸುತ್ತಾರೆ. ಇಲ್ಲಿ ಓದಿದ ಮತ್ತು ಸಂಗೀತವನ್ನು ಕಲಿತ ಅದೆಷ್ಟೋ ಮಕ್ಕಳು ಈಗ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲೂ ದನ ಕಾಯ್ದು ಬದುಕು ಕಟ್ಟಿಕೊಳ್ಳಬೇಕಾದವರನ್ನು ಉನ್ನತ ಶಿಕ್ಷಣ ಪಡೆಯುವಂತೆ ಮಾಡಿದ್ದಾರೆ.
ಖರ್ಚು ವೆಚ್ಚ : – ಕೇವಲ ಹತ್ತನೇ ತರಗತಿಯವರೆಗೆ ಮಾತ್ರ ಶಿಕ್ಷಣ ನೀಡುವದಿಲ್ಲ. ಬದಲಾಗಿ ನಂತರವೂ ಅಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪಿಯುಸಿ, ಪದವಿ ಶಿಕ್ಷಣವನ್ನು ಧಾರವಾಡದಲ್ಲಿ ಕೊಡಿಸಲಾಗುತ್ತದೆ. ಅನೇಕ ವಿದ್ಯಾರ್ಥಿಗಳು ಮ್ಯಾಥ್ಯೂ ಪೌರ್ಟಿಯರ್ ಅವರ ಆಶ್ರಯದಲ್ಲಿಯೇ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ.
ನಮ್ಮ ದೇಶದಲ್ಲಿಯೇ ಜನಿಸಿ, ಇಲ್ಲಿಯ ಸಂಪತ್ತನ್ನು ಅನುಭವಿಸಿದರೂ ದೇಶಕ್ಕಾಗಿ ಸೇವೆ ಮಾಡುವವರು ವಿರಳ. ಹೀಗಿರುವಾಗ ತನ್ನ ದೇಶದಲ್ಲಿ ದುಡಿದು ತಂದ ಸಂಪತ್ತನ್ನು ನಮ್ಮ ದೇಶದ, ವಿಶೇಷವಾಗಿ ಕನ್ನಡದ ಮಕ್ಕಳಿಗಾಗಿ ಉಪಯೋಗಿಸುತ್ತಿದ್ದಾರೆ. ಅವರ ಭಾರತ ಪ್ರೀತಿಗೆ ನಮ್ಮ ಗೌರವ, ವಿದೇಶಿಗನೊಬ್ಬ ನಮ್ಮ ದೇಶಕ್ಕೆ ಇಷ್ಟೂ ಕೊಡುಗೆ ನೀಡಿದರೇ, ನನ್ನ ದೇಶಕ್ಕೆ ನನ್ನ ಕೊಡುಗೆ ಏನು..? ಎನ್ನುವದು ಆತ್ಮ ಚಿಂತನೆಯ ಕಾಲ.

Please follow and like us:
error