ಕೃಷ್ಣಾ-ಬಿ ಸ್ಕೀಂ ಯೋಜನೆಗೆ ೨೨೬೫ ಕೋಟಿ ರೂ. ಅನುದಾನ- ಮುಖ್ಯಮಂತ್ರಿ ಸಿದ್ದರಾಮಯ್ಯ

ಕೃಷ್ಣಾ-ಬಿ ಸ್ಕೀಂ ಯೋಜನೆಯಡಿ ಕೊಪ್ಪಳ ಏತನೀರಾವರಿ ಯೋಜನೆಯ ಮೂರನೆ ಹಂತದ ಕಾಮಗಾರಿಗಳಿಗೆ ೨೨೬೫ ಕೋಟಿ ರೂ. ಅನುದಾನವನ್ನು ಶೀಘ್ರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.  ಕೊಪ್ಪಳ ನಗರದ ಹೊರ ವಲಯದಲ್ಲಿ, ಶುಕ್ರವಾರದಂದು ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಜನಪರ ಯೋಜನೆ ಫಲಾನುಭವಿಗಳ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  ಕೊಪ್ಪಳ ಜಿಲ್ಲೆಯಲ್ಲಿ ಇಂದು ಆಯೋಜಿಸಲಾಗಿರುವ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶವು ಜಿಲ್ಲೆಯ ಪಾಲಿಗೆ ಐತಿಹಾಸಿಕ ಸಮಾವೇಶವಾಗಿದೆ.  ಸರ್ಕಾರದ ಜನಪರ ಯೋಜನೆಗಳನ್ನು ಬೆಂಬಲಿಸಿ, ಬಂದಿರುವ ಜನ ಸಾಗರವನ್ನು ನೋಡಿ ಸಂತಸವಾಗುತ್ತಿದೆ.  ನಾವು ಅಧಿಕಾರಕ್ಕೆ ಬರುವ ಮುನ್ನ ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿದಾಗ, ನಮ್ಮ ಸರ್ಕಾರ ಬಂದರೆ ಪ್ರತಿ ವರ್ಷ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂ. ವೆಚ್ವ ಮಾಡುವುದಾಗಿ ಹೇಳಿದ್ದೆವು.   ಐದು ವರ್ಷದಲ್ಲಿ ೬೦ ಸಾವಿರ ಕೋಟಿ ಖರ್ಚು ಮಾಡುತ್ತೇವೆ. ನುಡಿದಂತೆ ನಡೆಯುತ್ತೇವೆ.  ರಾಜ್ಯದಲ್ಲಿ ನೀರಾವರಿ, ವಿದ್ಯುತ್, ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಆದ್ಯತಾ ವಲಯವನ್ನಾಗಿಸಿ, ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ.  ರಾಜ್ಯದಲ್ಲಿ ಎಲ್ಲೆಲ್ಲಿ ಕೆರೆಗಳನ್ನು ತುಂಬಿಸಲು ಸಾಧ್ಯವೋ, ಅಂತಹ ಯೋಜನೆಗಳನ್ನು ಗುರುತಿಸಿ, ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ.  ರಾಜ್ಯದಲ್ಲಿ ೭ ಸಾವಿರ ಕೋಟಿ ರೂ. ಖರ್ಚು ಮಾಡಿ, ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ರೂಪಿಸಲಾಗಿದೆ.  ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕುಗಳು ಮಳೆ ಆಶ್ರಿತ ಕ್ಷೇತ್ರಗಳಾಗಿದ್ದು, ಈ ಎರಡೂ ತಾಲೂಕುಗಳ ಆಯ್ದ ಕೆರೆಗಳಿಗೆ ೨೯೦ ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.  ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಏತ ನೀರಾವರಿ ಯೋಜನೆಗೂ ಇದೇ ವರ್ಷ ಚಾಲನೆ ನೀಡಲಾಗುವುದು.  ಸತತ ಬರದಿಂದ ಕಂಗೆಟ್ಟಿದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ನಮ್ಮ ಸರ್ಕಾರ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲವನ್ನು ೫೦ ಸಾವಿರ ರೂ. ಗಳವರೆಗೆ ಮನ್ನಾ ಮಾಡಿದೆ.  ರಾಜ್ಯದ ೨೨೨೭೫೦೬ ರೈತರ ೮೧೬೫ ಕೋಟಿ ರೂ. ಸಾಲ ಮನ್ನಾ ಮಾಡಿದೆ.  ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲದ ಪ್ರಮಾಣ ಸುಮಾರು ೪೨ ಸಾವಿರ ಕೋಟಿ ರೂ. ಗಳಿದ್ದು, ಕೇಂದ್ರ ಸರ್ಕಾರ ಈ ಸಾಲವನ್ನು ಮನ್ನಾ ಮಾಡುತ್ತಿಲ್ಲ.  ಆದರೆ ಉದ್ಯಮಿಗಳು, ಬಂಡವಾಳ ಶಾಹಿಗಳ ಸಾಲವನ್ನು ಮನ್ನಾ ಮಾಡಿದೆ ಎಂದರು.  ಮಳೆ ಆಶ್ರಿತ ರೈತರ ಹಿತ ಕಾಯಲು ನಮ್ಮ ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿಗೊಳಿಸಿದ್ದು, ರಾಜ್ಯದಲ್ಲಿ ಸುಮಾರು ೧. ೬೭ ಲಕ್ಷ ಕೃಷಿ ಹೊಂಡಗಳ ನಿರ್ಮಾಣವಾಗಿದೆ.  ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಹೊಂಡಗಳು ತುಂಬಿರುವುದು, ರೈತರಲ್ಲಿ ಭರವಸೆಯನ್ನು ಮೂಡಿಸಿದೆ..  ರೈತರಿಗೆ ೦೩ ಲಕ್ಷ ರೂ. ಗಳವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದ್ದು,  ಪದವಿ ವ್ಯಾಸಂಗ ಹಾಗೂ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಜಾತಿ ಬೇಧವಿಲ್ಲದೆ ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.೧೫೦೦ ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮ:  ಕೊಪ್ಪಳದಲ್ಲಿ ಇಂದು ಒಟ್ಟು ೧೫೦೦ ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ.  ರಾಜ್ಯದಲ್ಲಿಯೇ ಇಷ್ಟೊಂದು ಬೃಹತ್ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿರುವುದು ಬಹುಶಃ ಇದೇ ಮೊದಲು ಎನಿಸುತ್ತಿದೆ.  ನಿಜವಾಗಿಯೂ ಕೊಪ್ಪಳದಲ್ಲಿ ನಡೆಯುತ್ತಿರುವುದು ಐತಿಹಾಸಿಕ ಸಮಾವೇಶವಾಗಿದೆ.  ಕುಷ್ಟಗಿ ಮತ್ತು ಯಲಬುಗಾ ತಾಲೂಕಿನ ಗ್ರಾಮಗಳಿಗೆ ೭೬೩ ಕೋಟಿ ರೂ. ವೆಚ್ಚದಲ್ಲಿ ಎಲ್ಲ ೩೩೧ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಈ ಹಿಂದೆ ಜಿಲ್ಲೆಯಲ್ಲಿ ಇಂತಹ ಯಾವುದೇ ಯೋಜನೆ ಜಾರಿಗೊಂಡಿಲ್ಲ.  ನಮ್ಮ ಸರ್ಕಾರ ಇಂತಹ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದರು.ಹಳ್ಳಿ ಮಕ್ಕಳೂ ವೈದ್ಯರಾಗಬೇಕು: ಕೇವಲ ಆರ್ಥಿಕವಾಗಿ ಸಬಲರಾಗಿರುವವರು ಮಾತ್ರ ವೈದ್ಯರಾಗುವ ಕಾಲವಿತ್ತು.  ಆದರೆ ನಮ್ಮ ಸರ್ಕಾರ ಹಳ್ಳಿ ಮಕ್ಕಳೂ, ಬಡವರ ಮಕ್ಕಳೂ ವೈದ್ಯರಾಗಬೇಕೆಂಬ ಜನಪರ ನೀತಿಯೊಂದಿಗೆ ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕು ಎನ್ನುವ ನಿಲುವಿನೊಂದಿಗೆ ಹೆಜ್ಜೆ ಇರಿಸಿದೆ.  ಹೀಗಾಗಿಯೇ ಕೊಪ್ಪಳಕ್ಕೆ ಮೆಡಿಕಲ್ ಕಾಲೇಜನ್ನು ನಮ್ಮ ಸರ್ಕಾರವೇ ಮಂಜೂರು ಮಾಡಿ, ಕಟ್ಟಡವನ್ನು ನಿರ್ಮಿಸಿ, ಉದ್ಘಾಟನೆಯನ್ನೂ ನಮ್ಮ ಸರ್ಕಾರದ ವತಿಯಿಂದಲೇ ನೆರವೇರಿಸುತ್ತಿದ್ದೇವೆ.  ಹೊಸದಾಗಿ ರಾಜ್ಯಾದ್ಯಂತ ೧೩ ಮೆಡಿಕಲ್ ಕಾಲೇಜುಗಳನ್ನು ಹೊಸದಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಆರಂಭವಾಗಿರುವುದೂ ಸೇರಿದಂತೆ ಒಟ್ಟು ೨೩ ಮೆಡಿಕಲ್ ಕಾಲೇಜುಗಳು ಸಿಗಲಿವೆ ಎಂದರು.೦೪ ಕೋಟಿ ಜನರಿಗೆ ಅನ್ನಭಾಗ್ಯ : ರಾಜ್ಯದಲ್ಲಿ ಬಡವರು, ತುತ್ತು ಅನ್ನಕ್ಕಾಗಿ ಯಾರ ಬಳಿಯೂ ಕೈ ಚಾಚಬಾರದು.  ಸ್ವಾಭಿಮಾನಿಗಳಾಗಿ ಬದುಕಬೇಕು ಎಂಬ ಆಶಯದೊಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದೇವೆ.  ರಾಜ್ಯದಲ್ಲಿ ಸುಮಾರು ೧. ೧೦ ಕೋಟಿ ಕುಟುಂಬಗಳಿಗೆ ಪ್ರತಿ ಸದಸ್ಯರಿಗೆ ೦೭ ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೇವೆ.  ಇಂತಹ ಬಡವರ ಪರವಾದ ಯೋಜನೆ ದೇಶದ ಯಾವುದೇ ರಾಜ್ಯದಲ್ಲಿ ಜಾರಿಗೊಂಡಿಲ್ಲ.  ಅಕ್ಟೋಬರ್ ಒಳಗಾಗಿ ಇನ್ನೂ ೧೫ ಲಕ್ಷ ಬಿಪಿಎಲ್ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಲಭ್ಯವಾಗಲಿದ್ದು, ರಾಜ್ಯದ ೦೪ ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಲ್ಲಿ ಉಚಿತವಾಗಿ ಅಕ್ಕಿ ದೊರೆಯಲಿದೆ.  ರಾಜ್ಯವನ್ನು ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ಆಶಯದೊಂದಿಗೆ ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.೧.೫ ಕೋಟಿ ಮಕ್ಕಳಿಗೆ ಹಾಲು : ರಾಜ್ಯದಲ್ಲಿನ ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟಲು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದೇವೆ.  ರಾಜ್ಯದ ೧. ೫ ಕೋಟಿ ಮಕ್ಕಳಿಗೆ ಶಾಲೆಯಲ್ಲಿ ವಾರದಲ್ಲಿ ಐದು ದಿನ ಹಾಲು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ : ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ ೭೬೩ ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕಿನ ಆಯ್ದ ಕೆರೆಗಳಿಗೆ ೨೯೦ ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ಯೋಜನೆ,  ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ೧೦೩ ಕೋಟಿ ರೂ. ವೆಚ್ಚದಲ್ಲಿ ಬನ್ನಿಕೊಪ್ಪ ಏತ ನೀರಾವರಿ ಯೋಜನೆ, ಯಲಬುರ್ಗಾ ತಾಲೂಕು ತಳಕಲ್ ಬಳಿ ೧೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ, ಕುಕನೂರು ಪಟ್ಟಣದಲ್ಲಿ ೦೯ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ೬೦ ಹಾಸಿಗೆಗಳ ಮಹಿಳಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿಗಳಿಗೆ ಶಂಕುಸ್ಥಾಪನೆ.   ೩೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಆನೆಗೊಂದಿ ಸೇತುವೆಯ ಉದ್ಘಾಟನೆ.  ಗಂಗಾವತಿಯಲ್ಲಿ ೨೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ, ಗಂಗಾವತಿ ತಾಲೂಕು ಚಿಕ್ಕಬೆಣಕಲ್‌ನಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಕಟ್ಟಡ,  ಗಂಗಾವತಿ ಮತಕ್ಷೇತ್ರ ಕೊಪ್ಪಳ ತಾಲೂಕಿನ ಹಿರೇಹಳ್ಳ ಯೋಜನೆಯ ಮುದ್ಲಾಪುರ ಗ್ರಾಮ ಬಳಿ ೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಉದ್ಘಾಟನೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಿದರು.  ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಶಿವರಾಜ ಎಸ್ ತಂಗಡಗಿ, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ, ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error