ಕೃಷಿಯ ಉತ್ತೇಜನಕ್ಕೆ ರೈತರ ಆದಾಯ ದ್ವಿಗುಣಗೊಳಿಸುವುದು ಅಗತ್ಯ- ಕರಡಿ ಸಂಗಣ್ಣ

ಸತತ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಕೃಷಿ ಚಟುವಟಿಕೆಯನ್ನು ಉತ್ತೇಜಿಸಲು, ರೈತರ ಆದಾಯ ದ್ವಿಗುಣಗೊಳಿಸುವ ಮಾರ್ಗೋಪಾಯ ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.  ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಗಂಗಾವತಿ ತಾಲೂಕು ಹೇಮಗುಡ್ಡದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ’ಸಂಕಲ್ಪದಿಂದ ಸಿದ್ದಿ’- ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  ಹವಾಮಾನ ವೈಪರಿತ್ಯಗಳಿಂದಾಗಿ, ರಾಜ್ಯದಲ್ಲಿ ಪದೇ ಪದೇ ಬರ ಪರಿಸ್ಥಿತಿ ಉಂಟಾಗುತ್ತಿದೆ.  ಸತತ ಬರದಿಂದಾಗಿ ಕೃಷಿ ಕುಂಠಿತಗೊಳ್ಳುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.  ರೈತರ ಆತ್ಮಹತ್ಯೆಯನ್ನು ತಡೆಗಟ್ಟುವುದು ಹಾಗೂ ಕೃಷಿಯನ್ನು ಉತ್ತೇಜಿಸುವ ಸಲುವಾಗಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.  ಇಲ್ಲದಿದ್ದರೆ, ಯುವ ಪೀಳಿಗೆ ಕೃಷಿಯಿಂದ ವಿಮುಖಗೊಳ್ಳುವ ಅಪಾಯವಿದೆ.  ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಪ್ರೋತ್ಸಾಹಿಸುವ, ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.  ಬರುವ ೨೦೨೨ ರ ಒಳಗಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳಿಗೆ ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಚಾಲನೆ ದೊರೆತಿದೆ.  ನೀರಾವರಿ ಸಂಪನ್ಮೂಲ ಅಭಿವೃದ್ಧಿಪಡಿಸಿ ನೀರಾವರಿ ಕ್ಷೇತ್ರವನ್ನು ಹೆಚ್ಚಿಸುವುದು.  ಸುಧಾರಿತ ಬೀಜ, ಸಸಿಗಳ ಬಳಕೆ, ಸಾವಯವ ಕೃಷಿ ಅಳವಡಿಕೆ ಹಾಗೂ ಮಣ್ಣು ಆರೋಗ್ಯ ಕಾಪಾಡುವ ಮುಖಾಂತರ ಉತ್ಪಾದಕತೆ ಹೆಚ್ಚಿಸುವುದು.  ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡಲು ಗೋದಾಮು ಹಾಗೂ ಶೀತಲ ಗೃಹ ಸೌಲಭ್ಯವನ್ನು ಬಲಪಡಿಸುವುದು.  ಆಹಾರ ಸಂಸ್ಕರಣೆಯ ಮುಖಾಂತರ ಕೃಷಿ ಉತ್ಪಾದನೆಯ ಮೌಲ್ಯ ವರ್ಧನೆ ಮಾಡುವುದು.  ವಿದ್ಯುನ್ಮಾನ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಮುಖಾಂತರ ಕೃಷಿ ಮಾರುಕಟ್ಟೆಯ ನೂನ್ಯತೆಗಳನ್ನು ಸರಿಪಡಿಸುವುದು.  ಕೃಷಿ ಕ್ಷೇತ್ರದಲ್ಲಿ ನಷ್ಟವನ್ನು ಕಡಿಮೆ ಮಾಡಲು ಕೃಷಿ ಬೆಳವಣಿಗೆ ಹೆಚ್ಚಿಸಲು ಸಾಂಸ್ಥಿಕ ಸಾಲದ ವ್ಯವಸ್ಥೆ ಬಲಪಡಿಸುವುದು ಹಾಗೂ ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಪೂರಕ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಬೇಕಿದೆ ಎಂದರು.  ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗಾಂಧೀಜಿ ಕಂಡಂತಹ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವತ್ತ ಕೊಪ್ಪಳ ಜಿಲ್ಲೆ ಮುನ್ನಡೆದಿದ್ದು, ಇದರ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ.  ಜನಧನ ಯೋಜನೆ, ಉಜ್ವಲ ಯೋಜನೆ, ಬೇಟಿ ಪಢಾವೋ-ಬೇಟಿ ಬಚಾವೋ ಯೋಜನೆ ಹೀಗೆ ಅನೇಕ ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಇದರ ಸೌಲಭ್ಯ ಜನರಿಗೆ ತಲುಪಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.  ಭಾರತೀಯ ಭೂ ಮತ್ತು ಜಲ ಸಂರಕ್ಷಣಾ ಸಂಸ್ಥೆ ಬಳ್ಳಾರಿಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಲ್. ಪಾಟೀಲ್ ಅವರು ಮಾತನಾಡಿ, ಮಣ್ಣು ಹಾಗೂ ನೀರಿನ ಸಂರಕ್ಷಣೆ ಮಾಡದ ಹೊರತು, ಭವಿಷ್ಯದಲ್ಲಿ ಕೃಷಿ ಉಳಿಗಾಲವಿಲ್ಲ.  ದಕ್ಷಿಣ ಭಾರತದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದಲೂ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ.  ಇದಕ್ಕೆ ಪ್ರಮುಖ ಕಾರಣ ಅರಣ್ಯದ ನಾಶ ಹಾಗೂ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆಯಾಗಿದೆ.  ಒಣ ಭೂಮಿ ರೈತರಷ್ಟೇ ಅಲ್ಲ, ನೀರಾವರಿ ರೈತರೂ ಕೂಡ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.  ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಎಚ್ಚರಿಕೆಯಿಂದ ನಿರ್ವಹಿಸಿದಲ್ಲಿ, ಹನಿ ನೀರಾವರಿ, ಸುಧಾರಿತ ಬಿತ್ತನೆ ಬೀಜ ಬಳಕೆಯಿಂದ ರೈತರು ಉತ್ತಮ ಫಸಲು ಪಡೆಯಲು ಸಾಧ್ಯವಾಗಲಿದೆ.  ರೈತರು ಕೇವಲ ಕೃಷಿಯನ್ನಷ್ಟೇ ಅಲ್ಲದೆ ಹೈನುಗಾರಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬನ್ನು ಅಳವಡಿಸಿಕೊಂಡಾಗ ಮಾತ್ರ ಆರ್ಥಿಕ ಲಾಭ ಕಂಡುಕೊಳ್ಳಲು ಸಾಧ್ಯ ಎಂದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಕೃಷಿ ವಿಶ್ವವಿದ್ಯಾಲಯ ವಿತರಣಾ ನಿರ್ದೇಶಕ ಡಾ. ಎಸ್.ಕೆ. ಮೇಟಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೆವಿಕೆ ಆವರಣ ಮುಖ್ಯಸ್ಥ ಡಾ. ಬಿ.ಜಿ. ಮಸ್ತಾನ ರೆಡ್ಡಿ, ಕೆವಿಕೆ ಹಿರಿಯ ವಿಜ್ಞಾನಿ ಡಾ. ರೂಪಶ್ರೀ, ಜಂಟಿಕೃಷಿ ನಿರ್ದೇಶಕ ವೀರೇಶ್ ಹುನಗುಂದ, ತಾ.ಪಂ. ಸದಸ್ಯೆ ಗೀತಾ ಪೊಲೀಸ್ ಪಾಟೀಲ್, ಗ್ರಾ.ಪಂ. ಅಧ್ಯಕ್ಷ ಅಮರೇಶ, ಸೇರಿದಂತೆ ಚನ್ನಪ್ಪ ಮಾಳಗಿ, ಹೇಮಾವತಿ ಲಂಕೇಶ, ಡಾ. ಎಂ. ಶೇಖರಗೌಡ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.  ೨೦೨೨ ರೊಳಗೆ ನವಭಾರತ ನಿರ್ಮಾಣ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವುದರ ಕುರಿತು ಇದೇ ಸಂದರ್ಭದಲ್ಲಿ ರೈತರು, ಗಣ್ಯರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.  ಹಾಗೂ ಸುಸ್ಥಿರ ಕೃಷಿಗಾಗಿ ರೈತರಲ್ಲಿ ಜಾಗೃತಿ ಮೂಡಿಸುವದರ ಕುರಿತ ಮಡಿಕೆ ಪತ್ರಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

Please follow and like us:
error