ಕುರುಬರ ಮೇಲಿನ ದೌರ್ಜನ್ಯ ನಿಲ್ಲಲಿ-ಜಿಲ್ಲಾ ಹಾಲುಮತ ಮಹಾಸಭಾ ಸಂಘಟನೆ ಆಗ್ರಹ

ಕೊಪ್ಪಳ: ರಾಜ್ಯದಲ್ಲಿ ಕುರುಬ ಸಮುದಾಯದವರ ಮೇಲೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ದೌರ್ಜನ್ಯಗಳು ನಡೆಯುತ್ತಿವೆ. ಇವು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಭಯದ ವಾತಾವರಣದಲ್ಲಿ ಕುರುಬ ಸಮಾಜದ ಬಾಂಧವರು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇಂಥಹ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಕಾನೂನು ಕ್ರಮ ಜರುಗಬೇಕೆಂದು ಜಿಲ್ಲಾ ಹಾಲುಮತ ಮಹಾಸಭಾ ಸಂಘಟನೆ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಅವರ ಮೂಲಕ ಮುಖಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಲುಮತ ಮಹಾಸಭಾ ವತಿಯಿಂದ ಶನಿವಾರ ಮನವಿ ಸಲ್ಲಿಸಲಾಯಿತು.
ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಮಾತನಾಡಿ, ವಾಲ್ಮೀಕಿ ಜನಾಂಗದವರು ಎಂದು ಹೇಳಿಕೊಂಡು ಕೆಲವರು ಕುರುಬ ಸಮುದಾಯದ ಬಗ್ಗೆ ಅತ್ಯಂತ ಅಶ್ಲೀಲ ಹಾಗೂ ಅವಹೇಳನಕಾರಿ ಭಾಷೆ ಬಳಕೆ ಮಾಡಿ ಆಡಿಯೋ ಹಾಗೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಗೊಂದಲ, ಗಲಭೆ, ಸಂಘರ್ಷಗಳು ಹೆಚ್ಚುತ್ತಿವೆ. ಸಮಾಜದಲ್ಲಿ ಎರಡೂ ಜನಾಂಗದವರು ಸಹೋದರರಂತೆ ಬದುಕುತ್ತಿದ್ದು ಕೆಲ ಕಿಡಿಗೇಡಿಗಳ ಕುಚೇಷ್ಟೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಾಗಾಗಿ ಇವುಗಳಿಗೆ ಕಡಿವಾಣ ಹಾಕಬೇಕು ಎಂದರು.
ರಾಯಚೂರಿನ ಲಾಲಪ್ಪನಾಯಕ ಎಂಬ ವ್ಯಕ್ತಿ ‘ಕುರುಬರನ್ನು ಎಲ್ಲಿ ಸಕ್ಕರೆ ಅಲ್ಲಿ ಕೈಕಾಲು ಮುರಿಯಿರಿ, ಕುರುಬರ ಮೇಲೆ ಅಟ್ರಾಸಿಟಿ ಕೇಸ್‌ಗಳನ್ನು ದಾಖಲು ಮಾಡಿರಿ’ ಎಂದು ವೀಡಿಯೋ ಮಾಡಿ ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಇಂಥಹ ಹತ್ತಾರು ಪ್ರಚೋದಾತ್ಮಕ ವೀಡಿಯೋಗಳು ದ್ವೇಷದ ವಾತಾವರಣವನ್ನುಂಟು ಮಾಡುತ್ತಿವೆ. ನ.೧೫ರಂದು ಚಿತ್ರದುರ್ಗಾ ಜಿಲ್ಲೆಯ ಲಕ್ಕಿಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದವರು ಕುರುಬ ಸಮಾಜದ ಮಹಿಳೆಯರು, ಹಿರಿಯರು ಹಾಗೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣವನ್ನು ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕುರುಬ ಸಮುದಾಯದವರ ಮೇಲೆ ಜಾತಿ ನಿಂದನೆಯಂತಹ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ಆ ಮೂಲಕ ವ್ಯವಸ್ಥಿತವಾಗಿ ಹತ್ತಿಕ್ಕುವ ಸಂಚು ನಡೆಯುತ್ತಿದೆ ಎಂದು ಹನುಮಂತಪ್ಪ ಕೌದಿ ಕಳವಳ ವ್ಯಕ್ತಪಡಿಸಿದರು.
ದೇಶದ ಮೂಲ ನಿವಾಸಿಗಳು, ಅಲೆಮಾರಿಗಳೂ ಆಗಿರುವ ಕುರುಬ ಸಮಾಜ ಪರಿಶಿಷ್ಟ ಪಂಗಡ (ಎಸ್.ಟಿ) ಮೀಸಲಾತಿ ಪಡೆಯಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಬೀದರ್ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕುರುಬ ಸಮುದಾಯ ಎಸ್.ಟಿ. ಮೀಸಲಾತಿ ಪಡೆದಿದೆ. ರಾಜ್ಯದ ಉಳಿದ ಜಿಲ್ಲೆಗಳ ಕುರುಬ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸದಿರುವುದು ದುರದೃಷ್ಟಕರ. ಸಾಮಾಜಿಕವಾಗಿ ಶೋಷಣೆಗೆ ಒಳಗಾಗಿರುವ ಕುರುಬ ಸಮುದಾಯದ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸುವ ಮೂಲಕ ಕಾಯಿದೆ ದುರುಪಯೋಗ ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿ ಎಂದು ಹೇಳಿದರು.
ಮುಖ್ಯಮಂತ್ರಿಗಳು ಕುರುಬ ಸಮುದಾಯದ ಮನವಿಗೆ ಸ್ಪಂದಿಸಿ, ಕುರುಬರ ಮೇಲೆ ನಡೆಯುತ್ತಿರುವ ಅಟ್ರಾಸಿಟಿ ದೌರ್ಜನ್ಯಗಳನ್ನು ತಡೆಯಬೇಕು ಹಾಗೂ ದಶಕಗಳಿಂದ ಹೋರಾಟ ಮಾಡುತ್ತಿರುವ ಎಸ್.ಟಿ. ಮೀಸಲಾತಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಶಫಾರಸು ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಉಪಾಧ್ಯಕ್ಷ ವೈ.ಬಿ.ಜೂಡಿ, ಮುಖಂಡರಾದ ಮಂಜುನಾಥ ಬಂಗಾಳಿ, ಗ್ಯಾನಪ್ಪ ತಳಕಲ್, ನಿಂಗಪ್ಪ ಮೂಗಿನ, ಶಿವನಗೌಡ ಪೊಲೀಸ್‌ಪಾಟೀಲ್, ಕುಬೇರ ಮಜ್ಜಿಗಿ, ಡಿ.ಜಿ.ಕರಿಗಾರ, ಬಸವರಾಜ ಗುರಿಕಾರ, ಗವಿಸಿದ್ದಪ್ಪ ಸರ್ದಾರ, ಮುತ್ತುರಾಜ, ಕರಿಯಪ್ಪ, ಪ್ರಕಾಶ, ಯಲ್ಲಪ್ಪ, ಮಹೇಶ, ಅನಿಲಕುಮಾರ ಸೇರಿದಂತೆ ಇತರರು ಇದ್ದರು.

Please follow and like us:
error