ಕುರಿಗಳನ್ನ ಹೊತ್ತೊಯ್ದಿದ್ದ ಕಳ್ಳರು ಪೊಲೀಸ್ ಬಲೆಗೆ

ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಕೊಪ್ಪಳ: ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ನಾಲ್ವರು ಕುರಿಕಳ್ಳರನ್ನು ಪತ್ತೆ ಹಚ್ಚಿ, 2.44 ಲಕ್ಷ ರೂಪಾಯಿ ಮೌಲ್ಯದ 36 ಕುರಿ, 2 ಟಗರು ಹಾಗೂ 12 ಆಡುಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಚಿಲವಾಡಗಿಯಲ್ಲಿ ಮಲ್ಲೇಶ‌ ಕಂಬಳಿ ಎಂಬ ಕುರಿಗಾಹಿ ಜೂನ್ 11ರಂದು ಮಧ್ಯಾಹ್ನ ದೇವಲಾಪುರ ಸೀಮಾದಲ್ಲಿ ತನ್ನ ಕುರಿಗಳನ್ನು ಮೇಯಲು ಬಿಟ್ಟು ನಿದ್ರೆಗೆ ಜಾರಿದಾಗ ಕುರಿಹಿಂಡಿನಲ್ಲಿದ್ದ ಸುಮಾರು 1.56 ಲಕ್ಷ ರೂಪಾಯಿ ಮೌಲ್ಯದ 28 ಕುರಿಗಳು ಮತ್ತು 2 ಟಗರುಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಈ ಕುರಿತಂತೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಕಂಬಳಿ ಪ್ರಕರಣ ದಾಖಲಿಸಿದ್ದರು.

ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಎಸ್‌ಪಿ ಸಂಗೀತ, ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ರವಿ ಉಕ್ಕುಂದ ನೇತೃತ್ವದಲ್ಲಿ ಪಿಎಸ್ಐ ಸುರೇಶ್ ಮತ್ತು ತಂಡ ಕುಕನೂರು ಬಳಿಯ ವಿನಾಯಕ ಪೆಟ್ರೋಲ್ ಬಂಕ್ ಹತ್ತಿರ ಧಾರವಾಡ ಜಿಲ್ಲೆಯ ಅಳಗವಾಡಿಯ ಅಣ್ಣಪ್ಪ ಹರಿಣಶಿಕಾರಿ, ತಿರ್ಲಾಪುರದ ರವಿ ಮದನ್ನವರ್ ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪದ ಮನೋಜ ಹರಿಣಶಿಕಾರಿ ಹಾಗೂ ಕಲ್ಲಪ್ಪ ಹರಿಣಶಿಕಾರಿಯವರನ್ನು ವಿಚಾರಣೆಗೆ ಒಳಪಡಿಸಿದಾಗ ಹನಮಸಾಗರ ಸೇರಿದಂತೆ ದೇವಲಾಪುರ ಬಳಿ ಕುರಿ, ಆಡು ಹಾಗೂ ಟಗರುಗಳನ್ನು‌ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಕುರಿ‌ ಕಳ್ಳತನಕ್ಕೆ ಸಂಬಂಧಿಸಿದಂತೆ ಗುರುವಾರ ಹನುಮಸಾಗರ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಾದ 24 ಗಂಟೆಯಲ್ಲೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Please follow and like us:
error