ಕುಡಿಯುವ ನೀರಿಗಾಗಿ ಹಟ್ಟಿ ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿದ ಮಹಿಳೆಯರು


ಕೊಪ್ಪಳ : ಕಳೆದ ೧೬ ದಿನಗಳಿಂದ ಕುಡಿಯುವ ನೀರಿನ ಬೋರ್ ವೆಲ್ ಕೆಟ್ಟು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಬೆಳಗಟ್ಟಿ ಗ್ರಾಮದ ಮಹಿಳೆಯರು ಇಂದು ಹಟ್ಟಿ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯತ್ ಗೆ ಆಗಮಿಸಿದ ಮಹಿಳೆಯರು ನೀರು ಬಿಡುವಂತೆ ಒತ್ತಾಯಿಸಿದರು. ಗ್ರಾಮದಲ್ಲಿ ಪದೇ ಪದೇ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕುಡಿಯುವ ನೀರಿಲ್ಲದೇ ಬೇಸತ್ತ ಮಹಿಳೆಯರು ಇಂದು ಬೆಳಗಟ್ಟಿಯಿಂದ ಹಟ್ಟಿ ಗ್ರಾಮ ಪಂಚಾಯತ್‌ವರೆಗೆ ಖಾಲಿ ಕೊಡಗಳನ್ನು ತಂದು ಮುತ್ತಿಗೆ ಹಾಕಿ ನಂತರ ಪಿಡಿಓ ಕಚೇರಿ ಒಳಗಡೆ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಬೆಳಗಟ್ಟಿ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಅಧ್ಯಕ್ಷೆ ಲಕ್ಷ್ಮವ್ವ ಬಡಿಗೇರರ ಮಗ ಮಲ್ಲಿಕಾರ್ಜುನ ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೋದಿನಬಿ,.ರಸೂಲಬಿ, ಅಂದಪ್ಪ, ಅರುಣ, ಕೊಟ್ರೇಶ, ದೇವಪ್ಪ, ಜಂಗ್ಲೀಸಾಬ, ಇಮಾಮಸಾಬ, ಅಬ್ದುಲ್ ಖಾದರ,ಫಕೀರಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.