ಕಿಮ್ಸ್‌ನಲ್ಲಿ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಘಟಕ: ಸಂಗಣ್ಣ ಕರಡಿ

ಕೇಂದ್ರ ತಂಡದಿಂದ ಪರಿಶೀಲನೆ | ಕಿಮ್ಸ್ ಸೂಕ್ತ ಎಂಬ ಅಭಿಪ್ರಾಯ

ಕೊಪ್ಪಳ: ದೇಶಾದ್ಯಂತ ಸರಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಘಟಕಗಳನ್ನು ಪ್ರಾರಂಭಿಸುವ ಪ್ರಸ್ತಾಪ ಇದ್ದು, ಕೊಪ್ಪಳದಲ್ಲಿ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಅದಕ್ಕೆ ಸೂಕ್ತ ಎಂದು ಕೇಂದ್ರ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಸಂಶೋಧನಾ ಸಮಿತಿ ಅಭಿಪ್ರಾಯಪಟ್ಟಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ ಸಂಗಣ್ಣ ಕರಡಿ ಅವರ ಆಹ್ವಾನದ ಮೇರೆಗೆ ಶನಿವಾರ ಕಿಮ್ಸ್‌ಗೆ ಭೇಟಿ ನೀಡಿದ್ದ ಸಮಿತಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಸಮಿತಿ ಸದಸ್ಯ ಹಾಗೂ ಸಂಶೋಧಕ ಡಾ. ವಾದಿರಾಜ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಸಂಶೋಧನಾ ಸಮಿತಿಯು ಕೇಂದ್ರ ಆರೋಗ್ಯ ಸಚಿವಾಲಯದ ಆಯುಷ್ ವಿಭಾಗದ ಅಂಗಸಂಸ್ಥೆಯಾಗಿದೆ. ನೈಸರ್ಗಿಕವಾಗಿ ರೋಗಗಳನ್ನು ಗುಣಪಡಿಸುವ ಚಿಕಿತ್ಸಾ ಪದ್ಧತಿಯನ್ನು ಎಲ್ಲೆಡೆ ಸ್ಥಾಪಿಸುವ ಉದ್ದೇಶವಿದೆ. ಇದಕ್ಕಾಗಿ ದೇಶಾದ್ಯಂತ ಒಟ್ಟು ೧೦ ಇಂತಹ ಚಿಕಿತ್ಸಾಲಯಗಳನ್ನು ತೆರೆಯುವ ಪ್ರಸ್ತಾಪವಿದ್ದು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಸಮಿತಿ ಸದಸ್ಯರು, ಸಂಸದರು ಹಾಗೂ ಕಿಮ್ಸ್ ನಿರ್ದೇಶಕ ಡಾ. ಮಲಪುರೆ ಅವರೊಂದಿಗೆ ಕಿಮ್ಸ್ ಕಟ್ಟಡ ಹಾಗೂ ಪರಿಸರ ಪರಿಶೀಲಿಸಿದ ಡಾ. ವಾದಿರಾಜ, ಕಿಮ್ಸ್ ಆವರಣ ಇಂತಹ ಚಿಕಿತ್ಸಾ ಪದ್ಧತಿಯನ್ನು ಸ್ಥಾಪಿಸಲು ಅತ್ಯಂತ ಸೂಕ್ತವಾಗಿದೆ. ಇಲ್ಲಿ ಪ್ರಶಾಂತ ವಾತಾವರಣವಿದ್ದು, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ನೀಡಲು ಸಮರ್ಥವಾಗಿದ್ದು, ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಯೋಗ ಮತ್ತು ನೈಸರ್ಗಿಕ ವಿಜ್ಞಾನ ಅತ್ಯಂತ ಉಪಯುಕ್ತ ಚಿಕಿತ್ಸಾ ಕ್ರಮವಾಗಿದ್ದು, ಜಗತ್ತಿನಾದ್ಯಂತ ತೀವ್ರ ಬೇಡಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಸಂಶೋಧನಾ ಸಮಿತಿ ಉದ್ದೇಶಿಸಿರುವ ಚಿಕಿತ್ಸಾ ಘಟಕದ ಜೊತೆಗೆ, ಈ ಕುರಿತ ಕೋರ್ಸ್ ಪ್ರಾರಂಭಿಸುವ ಪ್ರಸ್ತಾಪ ಬಂದರೆ, ಅದಕ್ಕೂ ಸಹಕರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಿಮ್ಸ ನಿರ್ದೇಶಕ ಡಾ. ಮಲಪುರೆ, ಡಾ. ವಿಕ್ರಮ ಪೈ, ಜಿ.ಪಂ. ಸದಸ್ಯ ಗವಿಸಿದ್ದಪ್ಪ ಕರಡಿ ಸೇರಿದಂತೆ ಇತರರು ಇದ್ದರು.

Please follow and like us:
error