ಕಿಡ್ನಿ ವೈಫಲ್ಯದಿಂದ ರೈತ ಸಾವು : ಅಸಹಾಯಕ ಕುಟುಂಬಕ್ಕೆ ಅಮರೇಶ ನೆರವು

ಕಿಡ್ನಿ ವೈಫಲ್ಯದಿಂದ ರೈತ ಸಾವು | ತಾಯಿಯ ಕಿಡ್ನಿದಾನವೂ ವಿಫಲ | ಕಂಗಾಲಾದ ಕುಟುಂಬ
ಅಸಹಾಯಕ ಕುಟುಂಬಕ್ಕೆ ಅಮರೇಶ ನೆರವು

ಕೊಪ್ಪಳ: ಕೂಲಿನಾಲಿ ಜೀವನ ನಡೆಸುತ್ತಿದ್ದ ಆ ರೈತ  ಇದ್ದಕ್ಕಿದ್ದಂತೆ ಎರಡೂ ಮೂತ್ರಪಿಂಡ (ಕಿಡ್ನಿ) ವೈಫಲ್ಯಕ್ಕೆ ಒಳಗಾಗಿ ನೆಲ ಹಿಡಿದ. ತಾಯಿ ತನ್ನದೊಂದು ಕಿಡ್ನಿ ನೀಡಿದಳು. ಆದರೆ, ಕಸಿ ಚಿಕಿತ್ಸೆ ಫಲಕಾರಿಯಾಗದೇ ಮೂರು ತಿಂಗಳ ನಂತರ ಮೃತಪಟ್ಟ. ಪತಿಯ ಚಿಕಿತ್ಸೆಗೆ ಲಕ್ಷಾಂತರ ಖರ್ಚು ಮಾಡಿ ದಿವಾಳಿಯಾಗಿದ್ದ ಆತನ ಹೆಂಡತಿ ಕಂಗೆಟ್ಟು ಹಾಸಿಗೆ ಹಿಡಿದಳು. ಇದರಿಂದ ಇಡೀ ಕುಟುಂಬ ಅನಾಥವಾಗಿ ಬೀದಿಗೆ ಬರುವಂತಾಯಿತು. ಇಂತಹ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಬಿಜೆಪಿ ಯುವ ಮುಖಂಡ ಅಮರೇಶ ಕರಡಿ ಮಾನವೀಯತೆ ಮೆರೆದಿದ್ದಾರೆ.
ಇದು ಹಾಲವರ್ತಿ ಗ್ರಾಮದ ರೈತ ಮಲ್ಲಪ್ಪ ಸಿರಿಗೇರಿ (೪೦) ಅವರ ದುರಂತದ ಕತೆ. ಅಲ್ಪ ಪ್ರಮಾಣದ ಒಣಭೂಮಿ ಹೊಂದಿದ್ದ ಮಲ್ಲಪ್ಪ, ಮಳೆ ಬಂದಾಗ ಹೊಲ ಇಲ್ಲದಿದ್ದರೆ ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಾ ಅದ್ಹೇಗೋ ಕುಟುಂಬ ಸಾಕುತ್ತಿದ್ದ. ಹೆಂಡತಿ, ತಾಯಿ ಹಾಗೂ ಹೈಸ್ಕೂಲ್ ಓದುತ್ತಿದ್ದ ಇಬ್ಬರು ಮಕ್ಕಳ ಖರ್ಚನ್ನು ನಿಭಾಯಿಸಲಾಗದೇ ಕಷ್ಟಪಡುತ್ತಿದ್ದ.

ಕಷ್ಟದ ಮೇಲೆ ಕಷ್ಟ
ಇಂತಹ ಕಷ್ಟದ ಪರಿಸ್ಥಿತಿಯಲ್ಲಿ, ಆತನ ಆರೋಗ್ಯ ಕೆಡುತ್ತ ಹೋಯಿತು. ಪರೀಕ್ಷೆ ಮಾಡಿದ ವೈದ್ಯರು, ಆತನ ಮೂತ್ರಪಿಂಡಗಳೆರಡೂ ಹಾಳಾಗಿವೆ ಎಂದರು. ಡಯಾಲಿಸೀಸ್ ಮಾಡಿಸುವುದು ಅನಿವಾರ್ಯವಾಯಿತು. ಅಲ್ಲಿಂದ ಶುರುವಾದ ಕಷ್ಟದ ಸಂಕೋಲೆ ಇವತ್ತಿಗೂ ಹಾಗೇ ಮುಂದುವರಿಯುವ ಮೂಲಕ ಇಡೀ ಕುಟುಂಬ ತಬ್ಬಲಿಯಾಗುವ ಹಂತಕ್ಕೆ ಬಂದಿದೆ.
ಮೂತ್ರಪಿಂಡಗಳು ವಿಫಲವಾದ್ದರಿಂದ ಮಲ್ಲಪ್ಪನ ದುಡಿಮೆ ಬಂದಾಯಿತು. ಡಯಾಲಿಸೀಸ್ ಮಾಡಿಸುವುದು ಅನಿವಾರ್ಯವಾಯಿತು. ಕೊಪ್ಪಳದಲ್ಲಿ ಈ ಸೌಲಭ್ಯ ಇಲ್ಲದ್ದರಿಂದ ಹುಬ್ಬಳ್ಳಿ ಅಥವಾ ಬಳ್ಳಾರಿಗೆ ಹೋಗಿ ಡಯಾಲಿಸೀಸ್ ಮಾಡಿಸುವ ವೆಚ್ಚವೂ ಹೆಗಲೇರಿತು. ಸಾಲದ ಮೇಲೆ ಸಾಲ ಮಾಡುತ್ತ ಹೋದರೂ ಆರೋಗ್ಯ ಸುಧಾರಿಸುವ ಯಾವ ಸಾಧ್ಯತೆಗಳೂ ಕಾಣಿಸದೇ ಕುಟುಂಬ ಕಂಗಾಲಾಯಿತು.

ಕಿಡ್ನಿ ನೀಡಿದ ತಾಯಿ
ಮಗನ ಕಷ್ಟ ನೋಡಲಾರದೇ ತಾಯಿ ಹುಲಿಗೆವ್ವ ತನ್ನದೊಂದು ಕಿಡ್ನಿಯನ್ನು ಮಗನಿಗೆ ದಾನ ನೀಡಿದಳು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ ಕಿಡ್ನಿ ಕಸಿ ಮಾಡಲಾಯಿತು. ಚಿಕಿತ್ಸೆ ನಂತರ ಮಲ್ಲಪ್ಪನ ಆರೋಗ್ಯ ಕೊಂಚ ಸುಧಾರಿಸಿತಾದರೂ, ಶಸ್ತ್ರಚಿಕಿತ್ಸೆ ನಂತರದ ಪ್ರತಿಕೂಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದೇ ತಿಂಗಳು ೫ರಂದು ಆಸ್ಪತ್ರೆಯಲ್ಲೇ ಆತ ಮೃತಪಟ್ಟ.

ಕಂಗಾಲಾದ ಕುಟುಂಬ
ಮಲ್ಲಪ್ಪನ ಚಿಕಿತ್ಸೆಗೆ ಇದುವರೆಗೆ ಆತನ ಕುಟುಂಬ ರೂ.೧೦ ಲಕ್ಷಕ್ಕೂ ಹೆಚ್ಚು ಸಾಲ ಮಾಡಿದೆ. ಮನೆಯಲ್ಲಿದ್ದ ಬೆಲೆಬಾಳುವ ಎಲ್ಲಾ ವಸ್ತುಗಳನ್ನು ಕಳೆದುಕೊಂಡಿದೆ. ಇದ್ದ ಚೂರುಪಾರು ಭೂಮಿ ಸಾಲಕ್ಕೆ ಅಡವಾಗಿದೆ. ಮಕ್ಕಳಾದ ರವಿ ಮತ್ತು ಸಂಪ್ರೀತಾ ೯ನೇ ತರಗತಿ ಓದುತ್ತಿದ್ದು, ಮಕ್ಕಳ ಕನಿಷ್ಟ ಶಾಲಾ ವೆಚ್ಚವನ್ನೂ ಭರಿಸುವುದು ಮೃತನ ಹೆಂಡತಿ ರೇಣಕವ್ವನಿಗೆ ಕಷ್ಟವಾಗಿದೆ.

ಬೆಳಕಾಗಲಿ ದೀಪಾವಳಿ
ಈ ಕುಟುಂಬದ ಕಷ್ಟದ ವಿವರಗಳನ್ನು ಅದೇ ಗ್ರಾಮದ ಗವಿಸಿದ್ದಪ್ಪ ಎಂಬುವವರಿಂದ ಪಡೆದ ಬಿಜೆಪಿ ಯುವಮುಖಂಡ ಅಮರೇಶ ಕರಡಿ, ಬುಧವಾರ ಗ್ರಾಮಕ್ಕೆ ತೆರಳಿ, ವೈಯಕ್ತಿಕವಾಗಿ ಧನಸಹಾಯ ಮಾಡಿದ್ದಾರೆ. ಸರ್ಕಾರದಿಂದ ಲಭ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜೊತೆಗೆ, ಈ ಬಡ ಕುಟುಂಬಕ್ಕೆ ಸಹೃದಯರು ಉದಾರ ಮನಸ್ಸಿನಿಂದ ನೆರವಾಗುವ ಮೂಲಕ ಈ ದೀಪಾವಳಿ ಅವರ ಮನೆಗೆ ಬೆಳಕು ತರುವಂತಾಗಲಿ ಎಂದು ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೃತ ಮಲ್ಲಪ್ಪನ ಸೋದರರಾದ ದೇವಪ್ಪ ಸಿರಿಗೇರಿ, ದುರುಗಪ್ಪ ಸಿರಿಗೇರಿ, ಊರಿನ ಹಿರಿಯರಾದ ಜಡಿಸ್ವಾಮಿ ಈಳಿಗೇರ, ತಾಪಂ ಸದಸ್ಯ ಚಂದ್ರಕಾಂತ ನಾಯಕ, ಗ್ರಾಪಂ ಸದಸ್ಯ ಗಿಡ್ಡಪ್ಪ ಸಿರಿಗೇರಿ, ಆರ್‌ಎಸ್‌ಎಸ್ ಕಾರ್ಯಕರ್ತ ಗವಿಸಿದ್ದಪ್ಪ ಎಂ. ಗೊರವರ ಮತ್ತು ಗುರುರಾಜ ನಾಯಕ ಮುಂತಾದವರು ಇದ್ದರು.

Please follow and like us:
error