ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ : ಕೊಪ್ಪಳ ಚುನಾವಣಾಧಿಕಾರಿ


ಕೊಪ್ಪಳ ಮಾ.  ಚುನಾವಣಾ ಸಮಯದಲ್ಲಿ ಯಾವುದೇ ಸಭೆ/ ಸಮಾರಂಭಗಳಿಗೆ ೨೪ ಗಂಟೆಗೂ ಪೂರ್ವದಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಆಹಾರ ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಸೂಚನೆ ನೀಡಿದರು.
ಕೊಪ್ಪಳ ತಹಸಿಲ್ದಾರರ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಸಭೆಯಲ್ಲಿ ಚುನಾವಣಾಧಿಕಾರಿಗಳು ಸೂಚನೆ ನೀಡಿದರು.
ಚುನಾವಣಾ ಸಮಯದಲ್ಲಿ ವಿವಿಧ ಸಭೆ/ಸಮಾರಂಭ ಹಾಗೂ ವಾಹನಗಳ ಅನುಮತಿಯನ್ನು ಪಡೆಯಲು ಸುಗಮ, ಸುವಿಧ ತಂತ್ರಾಂಶದಲ್ಲಿ ಸಭೆಯನ್ನು ನಡೆಸುವ ೨೪ ಗಂಟೆ ಪೂರ್ವದಲ್ಲಿ ಅನುಮತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದ ಅವರು, ಈ ಕುರಿತು, ಭೌತಿಕವಾಗಿ ರಾಜಕೀಯ ಪಕ್ಷದ ಮುಖಂಡರಿಗೆ ತಂತ್ರಾಂಶದ ಬಗ್ಗೆ ಅರಿವು ಮೂಡಿಸಿದರು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣಾ ಕಾರ್ಯಗಳು ನಡೆಸಲು ಸಹಕಾರವನ್ನು ನೀಡಬೇಕು ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳಲ್ಲಿ ಕೋರಿದರು.
ಚುನಾವಣೆ ಸಂಬಂಧ ಕೊಪ್ಪಳ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ದೂರು ನಿರ್ವಹಣಾ ಘಟಕವನ್ನು ಆರಂಭಿಸಲಾಗಿದ್ದು, ದೂರು ನಿರ್ವಹಣಾ ಘಟಕದ ದೂರವಣಿ ಸಂಖ್ಯೆ ೦೮೫೩೯-೨೨೨೨೪೧ ಆಗಿರುತ್ತದೆ. ಈ ದೂರವಾಣಿ ಕೇಂದ್ರವು ೨೪*೭ ವೇಳೆ ಕಾರ್ಯ ನಿರ್ವಹಿಸುತ್ತದೆ ಸಾರ್ವಜನಿಕರು ಚುನಾವಣೆ ಸಂಬಂಧ ಯಾವುದೇ ದೂರುಗಳ ಇದ್ದಲ್ಲಿ ಸಲ್ಲಿಸಬಹುದು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದರು.
ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿರುವ ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.