ಕಾರ್ಮಿಕ ಇಲಾಖೆಯ ಯೋಜನೆಗಳು ಸ್ವಾವಲಂಬನೆ ಬದುಕಿಗೆ ಸಹಕಾರಿ : ಕೆ. ರಾಘವೇಂದ್ರ ಹಿಟ್ನಾಳ


ಕೊಪ್ಪಳ ಅ.03  : ಕಾರ್ಮಿಕ ಇಲಾಖೆಯ ಶ್ರಮ ಸಾಮರ್ಥ್ಯ ವೃತ್ತಿ ತರಬೇತಿಯಂತಹ ಯೋಜನೆಗಳಿಂದ ಸಾವಿರಾರು ಜನರು ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಿವೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ(ಅ.02) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ನಿರ್ಮಿತಿ ಕೇಂದ್ರ, ಕೊಪ್ಪಳ,  ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ, ಬೆಂಗಳೂರು, ವಸತಿ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರಮ ಸಾಮರ್ಥ್ಯ ವೃತ್ತಿ ತರಬೇತುದಾರರಿಗೆ ಸಲಕರಣೆ ಪೆಟ್ಟಿಗೆ, ಸುರಕ್ಷತಾ ಪೆಟ್ಟಿಗೆ ಹಾಗೂ ಪ್ರಮಾಣ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಕಾರ್ಮಿಕನೂ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುತ್ತಾನೆ. ಹಿಂದಿನ ಕಾಲದಲ್ಲಿ ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಇತ್ತು. ಆದರೆ ಇಂದು ಯಾವುದೇ ಜಾತಿಯ ವ್ಯಕ್ತಿ ಯಾವುದೇ ವೃತ್ತಿಯನ್ನಾದರೂ ಮಾಡಬಹುದು. ಕಾಯಕಕ್ಕೆ ಜಾತಿ ಇಲ್ಲ ಎಂಬಂತೆ ತಮ್ಮ ಕುಲಕಸುಬು ಅಲ್ಲದಿದ್ದರೂ ಬಹಳಷ್ಟು ಜನ ಕ್ರಿಯಾಶೀಲ ವೃತ್ತಿಯನ್ನು ಕಲಿತು ತಮ್ಮ ಜೀವನೋಪಾಯದ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಿಂದ ಅಲ್ಪ ಮಟ್ಟಿನ ಆರ್ಥಿಕ ಸ್ವಾವಲಂಬನೆಯನ್ನು ಗ್ರಾಮೀಣ ಜನರು ಪಡೆದಿದ್ದಾರೆ. ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ, ವಿದ್ಯುತ್ ಕಾಮಗಾರಿಗಳು, ನೀರು ಸರಬರಾಜಿಗೆ ಸಂಬಂಧಿಸಿದ ಕೌಶಲಾಧಾರಿತ ಕಾರ್ಯಗಳಲ್ಲಿ ವೃತ್ತಿ ಪರ ತರಬೇತಿಯನ್ನು ಪಡೆದು ಸ್ವತಂತ್ರವಾಗಿ ಕಾರ್ಯ ನಿರ್ವಹಣೆ ಮಾಡಲು ಸಶಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಿಗೆ ನೀಡಲು ಶ್ರಮಿಸಿ ಎಂದು ಅವರು ಹೇಳಿದರು.
ಜಿಲ್ಲೆಯ ಕಾರ್ಮಿಕರು ಮುಖ್ಯವಾಗಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಗುರುತಿನ ಚೀಟಿಯನ್ನು ಪಡೆಯಬೇಕು. ಗುರುತಿನ ಚೀಟಿಯು ಕಾರ್ಮಿಕನಿಗೆ ಮಾತ್ರವಲ್ಲದೇ ಅವರ ಕುಟುಂಬದ ಎಲ್ಲರಿಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ. ರೂ. 2 ಲಕ್ಷದವರೆಗೆ ಆರೋಗ್ಯ ವಿಮೆ, ರೂ. 5 ಲಕ್ಷದವರೆಗೆ ಅಪಘಾತ ವಿಮೆ, ಮನೆ ಕಟ್ಟಲು ಸಹಾಯಧನ, ಮರಣೋತ್ತರ ಪರಿಹಾರ ನಿಧಿಯನ್ನು ಇಲಾಖೆಯಿಂದ ನೀಡಲಾಗುತ್ತದೆ. ಅಲ್ಲದೇ ಕಾರ್ಮಿಕರ ಗುರುತಿನ ಚೀಟಿಯಿಂದ ಯಾವುದೇ ಕಾಮಗಾರಿ ಸ್ಥಳದಲ್ಲಿ ಸುಲಭವಾಗಿ ಕೆಲಸ ಪಡೆಯಬಹುದು. ಆದ್ದರಿಂದ ಕಾರ್ಮಿಕರು ಮೊದಲು ಗುರುತಿನ ಚೀಟಿ ಪಡೆಯುವುದನ್ನು ಮರೆಯಬೇಡಿ. ಎಂದಿಗೂ ಆತ್ಮಸ್ಥೆöÊರ್ಯ ಹಾಗೂ ಸಕಾರಾತ್ಮಕ ಯೋಚನೆಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು.
ಕಾರ್ಮಿಕ ಇಲಾಖೆಯ ನಿರ್ದೇಶಕರಾದ ಶ್ರಿÃನಿವಾಸ ಕುಲಕರ್ಣಿ ಮಾತನಾಡಿ, ಕಾರ್ಮಿಕರೆಲ್ಲರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅದರಲ್ಲಿ ನೀವು ಪಡೆದ ತರಬೇತಿ ವಿವರ ಸೇರಿದಂತೆ ವೈಯಕ್ತಿಕ ವಿವರಗಳೂ ಇರುತ್ತವೆ. ದೇಶದಲ್ಲಿಯೇ ಅತಿ ಹೆಚ್ಚು ಕಾರ್ಮಿಕ ಗುರುತಿನ ಚೀಟಿಯನ್ನು ನೀಡಿದ ರಾಜ್ಯ ನಮ್ಮದಾಗಿದೆ. ಶ್ರಮ ಸಾಮರ್ಥ್ಯ ತರಬೇತಿಯಲ್ಲಿ ಇಷ್ಟು ದಿನ ಕೇವಲ ಪುರುಷರಿಗೆ ಮಾತ್ರ ಸೀಮಿತ ಎಂಬಂತಿದ್ದ ಕಟ್ಟಡ ನಿರ್ಮಾಣ ಕಾರ್ಯಗಳ ತರಬೇತಿಯನ್ನು ಮಹಿಳೆಯರೂ ಪಡೆದಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಎರಡೂ ಸಾವಿರಕ್ಕೂ ಹೆಚ್ಚು ಮಹಿಳೆಯರು ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ತರಬೇತಿಗಳನ್ನು ಪಡೆದಿದ್ದಾರೆ. ತರಬೇತಿ ಪಡೆದ ಮಹಿಳೆಯರು ಇಂದು ಬಹುತೇಕ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಸ್ವತಂತ್ರವಾಗಿ ನಿರ್ವಹಿಸಬಲ್ಲರು. ಅದೇ ರೀತಿಯಾಗಿ ತರಬೇತಿ ಕೇಂದ್ರದಿಂದ ಇತರೆ ವಿಷಯಗಳಲ್ಲೂ ತರಬೇತಿಯನ್ನು ಪಡೆದು ಇಲಾಖೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಮಾತನಾಡಿ, ಶ್ರಮ ಸಾಮರ್ಥ್ಯ ವೃತ್ತಿ ತರಬೇತಿಯು ಕಾರ್ಮಿಕರಿಗೆ ವೃತ್ತಿ ತರಬೇತಿಯನ್ನು ಮಾತ್ರ ನೀಡದೇ ಅಕ್ಷರ ಜ್ಞಾನವನ್ನೂ ನೀಡುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ 27,303 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, 6085 ಕ್ಕೂ ಹೆಚ್ಚು ನೋಂದಾಯಿತ ಕಾರ್ಮಿಕರು ಇಂದು ಇಲಾಖೆಯ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ. ಜಿಲ್ಲೆಯ ತರಬೇತಿ ಕೇಂದ್ರದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ವ್ಯವಸ್ಥಿತ ತರಬೇತಿಗೆ ಯೋಜನೆ ರೂಪಿಸಿದೆ.  ಈ ತರಬೇತಿಯಿಂದ ಕಾರ್ಮಿಕರು ಆರ್ಥಿಕ ಸದೃಢತೆಯನ್ನು ಸಾಧಿಸಬಹುದು.  ಕಾರ್ಮಿಕರ ಗುರುತಿನ ಚೀಟಿ ಪಡೆದವರು ತಮ್ಮ ಮಕ್ಕಳ ಒಂದರಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಗುತ್ತದೆ. ಪಿ.ಎಚ್.ಡಿ, ಎಂ.ಬಿ.ಬಿ.ಎಸ್ ನಂತಹ ಉನ್ನತ ವ್ಯಾಸಂಗಕ್ಕೆ ಅಗತ್ಯ ಹಣಕಾಸಿನ ಸಹಾಯವನ್ನು ಪಡೆಯಬಹುದು. ಕಾರ್ಮಿಕರ ಮಕ್ಕಳಿಗೆ ಜನನದಿಂದ ಮರಣದವರೆಗೆ 14 ಯೋಜನೆಗಳನ್ನು ಪಡೆಯಬಹುದಾಗಿದೆ. ಸ್ಕಾಲರ್‌ಶಿಪ್, ಆರೋಗ್ಯ ವಿಮೆಯಂತಹ ಉತ್ತಮ ಲಾಭಗಳನ್ನು ಪಡೆಯಬಹುದು. ಇಲಾಖೆಯ ವಿವಿಧ ಸೌಲಭ್ಯಗಳನ್ನು ಒದಗಿಸಲು ಕಾರ್ಮಿಕ ಬಂಧುಗಳನ್ನು ನೇಮಕ ಮಾಡಲಾಗಿದೆ. ಮಧ್ಯಮವರ್ತಿಗಳ ಕಾಟವಿಲ್ಲದೆ ಕಾರ್ಮಿಕ ಬಂಧುಗಳೇ ನೇರವಾಗಿ ಕಾರ್ಮಿಕರಿಗೆ ತರಬೇತಿಗೆ ಪ್ರೊÃತ್ಸಾಹಿಸುವುದು, ಇಲಾಖೆಯ ಸೌಲಭ್ಯಗಳನ್ನು ಒದಗಿಸುವ ಕಾರ್ಯ ನಿರ್ವಹಿಸುತ್ತಾರೆ. ಎಲೆಕ್ಟಿçಷಿಯನ್, ಪ್ಲಂಬಿಂಗ್, ಅರ್ಥ್ ವರ್ಕ್, ಡಿಸೈನ್ ಪೇಂಟಿಂಗ್, ಟೈಲ್ಸ್ ವರ್ಕ್ ಸೇರಿದಂತೆ ಒಟ್ಟು 21 ತರಬೇತಿಗಳನ್ನು ಇಲಾಖೆಯಿಂದ ನೀಡಲಾಗುತ್ತದೆ. ಇಲ್ಲಿಯವರೆಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ತರಬೇತಿಗಳನ್ನು ಜಿಲ್ಲೆಯಲ್ಲಿ ನೀಡಲಾಗಿದೆ. ವಿವಿಧ ಕಾರ್ಯಗಳಲ್ಲಿ ಆಸಕ್ತಿ ಇದ್ದವರು 30 ಜನರನ್ನೊಳಗೊಂಡ ತಂಡದೊಂದಿಗೆ ಬಂದರೆ ಅವರ ಆಸಕ್ತಿ ವಿಷಯದನುಸಾರ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಈಗ ತರಬೇತಿ ಪಡೆದವರು ತಮ್ಮ ಗ್ರಾಮದ ಇತರರನ್ನು ಪ್ರೊÃತ್ಸಾಹಿಸಿ ತರಬೇತಿ ಕುರಿತು ಜಾಗೃತಿ ಮೂಡಿಸಿ. ತಾಲ್ಲೂಕುವಾರು ತರಬೇತಿ ನೀಡುವ ಯೋಜನೆ ಇದ್ದು, ಶೀಘ್ರದಲ್ಲೆÃ ತಾಲ್ಲೂಕು ಕೇಂದ್ರದಲ್ಲಿಯೇ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಎಸ್. ತರಬೇತಿ ಹಾಗೂ ಇಲಾಖೆಯ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಜಿಲ್ಲೆಯ ನಿರ್ಮಿತಿ ಕೇಂದ್ರದ ಶಶಿಧರ ಪಾಟೀಲ, ತರಬೇತಿ ಕೇಂದ್ರದ ಮಾಸ್ಟರ್ ಟ್ರೆÃನರ್ ಶಿವಪ್ರಸಾದ ಸೇರಿದಂತೆ ತರಬೇತಿ ಪಡೆದ ಕಾರ್ಮಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭ ತರಬೇತಿ ಪಡೆದ ಕಾರ್ಮಿಕರಿಗೆ ಸಲಕರಣೆ ಪೆಟ್ಟಿಗೆ, ಸುರಕ್ಷತಾ ಪೆಟ್ಟಿಗೆ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.  ತರಬೇತಿ ಪಡೆದ ಕಾರ್ಮಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Please follow and like us:
error