ಕಾರ್ಖಾನೆಗಳ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ: ಜಗದೀಶ ಶೆಟ್ಟರ್


ಕೊಪ್ಪಳ, ಜೂ : ಜಿಲ್ಲೆಯಲ್ಲಿ ರೈತರಿಂದ ಜಮೀನು ಪಡೆದ ಕಾರ್ಖಾನೆಗಳು ಭೂಮಿ ಕೊಟ್ಟ ರೈತನ ಕುಟುಂಬದ ಸದಸ್ಯನಿಗೆ ಕಾರ್ಖಾನೆಗಳಲ್ಲಿ ಉದ್ಯೋಗವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಕರ್ನಾಟಕ ಸರ್ಕಾರದ ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಕೈಗಾರಿಕೋದ್ಯಮಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಕೈಗಾರಿಕೋದ್ಯಮಿಗಳ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಕೌಶಲ್ಯಾಧಾರಿತ ಮತ್ತು ಕೌಶಲ್ಯ ರಹಿತ ಉದ್ಯೋಗಗಳಲ್ಲಿ ಸ್ಥಳೀಯರ ನಂತರ ಬೇರೆ ರಾಜ್ಯ, ಜಿಲ್ಲೆಯವರಿಗೆ ಉದ್ಯೋಗ ನೀಡಬೇಕು. ಬಹುತೇಕ ಕಾರ್ಖಾನೆಗಳಲ್ಲಿ ಖಾಯಂ ಗಿಂತ ಗುತ್ತಿಗೆ ಆಧಾರದಲ್ಲಿ ಹೆಚ್ಚಿನ ಉದ್ಯೋಗ ನೀಡಲಾಗುತ್ತಿದೆ. ಈ ಪದ್ಧತಿಯನ್ನು ಬಿಟ್ಟು ಸಾಧ್ಯವಾದಷ್ಟು ಮಟ್ಟಿಗೆ ಖಾಯಂ ಉದ್ಯೋಗ ನೀಡಲು ಕ್ರಮ ವಹಿಸಿ. ಜಿಲ್ಲೆಯ ಎಲ್ಲಾ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ನೀಡಿರುವ ಉದ್ಯೋಗವಕಾಶಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 559 ಕೈಗಾರಿಕಾ ಘಟಕಗಳು ನೋಂದಣಿಯಾಗಿದ್ದು, ಇದುವರೆಗೂ ಒಟ್ಟು 8529 ಕೈಗಾರಿಕೆಗಳು ನೋಂದಣಿಯಾಗಿವೆ. ಅದರಲ್ಲಿ 19 ಭಾರೀ ಕೈಗಾರಿಕೆಗಳು, 08 ಮಧ್ಯಮ ಕೈಗಾರಿಕೆಗಳು ಸ್ಥಾಪಿತವಾಗಿವೆ. ಇಲ್ಲಿಯವರಗೆ ಒಟ್ಟು 10 ಮಧ್ಯಮ ಮತ್ತು ಭಾರೀ ಕೈಗಾರಿಕೆಗಳು ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಸ್ಥಗಿತಗೊಂಡ ಕಾರ್ಖಾನೆಗಳು ಚಟುವಟಿಕೆ ನಿಲ್ಲಿಸಲು ಕಾರಣಗಳು, ಬಳಸಿಕೊಂಡ ಸ್ಥಳ, ಬಳಕೆಯಾಗದೆ ಬಾಕಿ ಉಳಿದ ಸ್ಥಳ ಮತ್ತು ಪ್ರಸ್ತುತ ಆ ಕಾರ್ಖಾನೆಗಳ ವಸ್ತುಸ್ಥಿತಿಯನ್ನು ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ 104.10 ಎಕರೆ ಭುಮಿಯನ್ನು ಕೈಗಾರಿಕಾ ವಸಾಹತುವಾಗಿ ಅಭಿವೃದ್ಧಿಪಡಿಸಲಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸಲಾಗಿದೆ. ಈ ಪ್ರದೇಶದಲ್ಲಿ 479 ನಿವೇಶನಗಳಿದ್ದು, ಇದುವರೆಗೂ 74 ಅರ್ಜಿಗಳು ಮಾತ್ರ ಬಂದಿವೆ. ಆದ್ದರಿಂದ ನಿವೇಶನ ದರ ಮತ್ತು ಸರ್ಕಾರದ ನಿಯಮಾವಳಿಗಳ ಕುರಿತು ಪತ್ರಿಕೆಗಳಲ್ಲಿ ಪ್ರಕಟಣೆ ಮೂಲಕ ಸೂಕ್ತ ಪ್ರಚಾರ ಕೈಗೊಂಡು ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಿ. ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪ ಗ್ರಾಮದ 272 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೆಶಕ್ಕಾಗಿ ಭೂಸ್ವಾದೀನ ಪ್ರಕ್ರಿಯೆ ಆರಂಭವಾಗಿ 3 ವರ್ಷಗಳಾಗುತ್ತಾ ಬಂದಿದ್ದು, ವಿಳಂಬ ಮಾಡದೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ. ಯಾವುದೇ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿ ಮಾಡಬೇಕಾದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಕೈಗಾರಿಕೆಗಳ ಅಗತ್ಯ, ಬೇಡಿಕೆ, ಸೌಲಭ್ಯಗಳನ್ನು ಪರಿಶೀಲಿಸಿ ನಂತರ ಭೂ ಖರೀದಿಗೆ ಮುಂದಾಗಿ. ಭೂಸ್ವಾಧೀನ ಪ್ರಕ್ರಿಯೆಯು ವಿಳಂಬವಾಗುವುದರಿAದ ಇತರೆ ಅಭಿವೃದ್ಧಿ ಕಾರ್ಯಗಳೂ ವಿಳಂಬವಾಗುತ್ತವೆ ಎಂದು ಅವರು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರಿಗೆ ತಿಳಿಸಿದ ಅವರು ಉಪಸ್ಥಿತರಿದ್ದ ಕೈಗಾರಿಕೊದ್ಯಮಿಗಳ ಸಮಸ್ಯೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ, ಕೆ.ಎಸ್.ಎಸ್.ಐ.ಡಿ.ಸಿ. ಮುಖ್ಯ ಇಂಜಿನಿಯರ್ ಜಗದೀಶ ಸೇರಿದಂತೆ ಜಿಲ್ಲೆಯ ಉದ್ದಿಮೆದಾರರು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error