ಕಾಮನ್ ಸೆನ್ಸ್ ಜೊತೆಗೆ ಜನರಲ್ ನಾಲೇಡ್ಜೂ ಇರಬೇಕು: ಸಿದ್ದರಾಮಯ್ಯಗೆ ಬಿ.ಸಿ.ಪಾಟೀಲ್ ಟಾಂಗ್ 

ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿ.ಸಿ.ಪಾಟೀಲ್ ಟಾಂಗ್

  • ಅವರ ಅಧಿನಾಯಕಿ ಸೋನಿಯಾಗಾಂಧಿಯವರ ದೇಶದಲ್ಲೇ ಕೊರೊನಾ ಕೇಸ್ ಹೆಚ್ಚು
  • ಸಚಿವರ ಕಾರ್ಯಕ್ರಮದಲ್ಲಿ ಪಾಲನೆಯಾಗದ ಸಾಮಾಜಿಕ ಅಂತರ

ಕೊಪ್ಪಳ: ಕೊರೊನಾ ಬಗ್ಗೆ ತಿಳಿದುಕೊಳ್ಳಲು ಬರೀ ಕಾಮನ್ ಸೆನ್ಸ್ ಇದ್ದರೆ ಸಾಲದು, ಜೊತೆಗೆ ಜನರಲ್ ನಾಲೆಡ್ಜೂ ಇರಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಕೊಪ್ಪಳದ ಕಿಮ್ಸ್‌ನಲ್ಲಿ ಶುಕ್ರವಾರ ಕೋವಿಡ್-೧೯ ಲ್ಯಾಬೋರೇಟರಿ ಉದ್ಘಾಟಿಸಿ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಕೊರೊನಾ ಮಾಹಿತಿಗಾಗಿ ಪಿಎಚ್‌ಡಿನೇ ಮಾಡಬೇಕೆಂದಿಲ್ಲ, ಕಾಮನ್ ಸೆನ್ಸ್ ಸಾಕು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಪಾಟೀಲ ಟಾಂಗ್ ನೀಡಿದರು. ಇಡೀ ಜಗತ್ತಿನಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿರುವುದು ಸಿದ್ದರಾಮಯ್ಯ ಅವರ ಅಧಿನಾಯಕಿ  ಸೋನಿಯಾ ಗಾಂಧಿ ಅವರ ಇಟಲಿ ದೇಶದಲ್ಲಿ. ಅತ್ಯಂತ ಕಡಿಮೆ ಕೊರೊನಾ ಕೇಸ್‌ಗಳು ಪತ್ತೆಯಾಗುತ್ತಿರುವ ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ‌ ಅದರಲ್ಲಿ ಕರ್ನಾಟಕದಲ್ಲಿ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದರು. ಪ್ರಾಯೋಗಿಕವಾಗಿ ೫೫ ಸ್ಯಾಂಪಲ್ ಪರೀಕ್ಷೆಯನ್ನು ಮಾಡಲಾಗಿದೆ. ೫೫ ಸ್ಯಾಂಪಲ್ ಟೆಸ್ಟ್ ನೆಗೆಟಿವ್ ಬಂದಿದೆ.ಈಗ ಕೋವಿಡ್ ಟೆಸ್ಟ್ ಇಲ್ಲಿಯೇ ನಡೆಯುತ್ತದೆ. ಬಳ್ಳಾರಿ, ಬೆಂಗಳೂರು ಟೆಸ್ಟ್ ಕಳುಹಿಸಲಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿ ಲ್ಯಾಬ್ ಮಾಡಲಾಗಿದೆ ಎಂದರು.

ಸ್ಥಳೀಯ ಶಾಸಕರಿಗೆ ಇವತ್ತಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿತ್ತು. ಯಾವುದೇ ಕೋಆರ್ಡಿನೇಷನ್ ಕೊರತೆ ಇಲ್ಲ ಅವರೇ ಸಿದ್ದರಾಮಯ್ಯವರ ಕಾರ್ಯಕ್ರಮ ಇದೆ ಎಂದು ಹೇಳಿದ್ದರು ಎಂದು ಸಮರ್ಥನೆ ಮಾಡಿಕೊಂಡರು

Please follow and like us:
error