ಕಾನ್ಸ್‌ಟೇಬಲ್ ಹುದ್ದೆಗಳ ಪರೀಕ್ಷೆ : ಅಭ್ಯರ್ಥಿಗಳಿಗೆ ಎಚ್ಚರಿಕೆ

: ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ ಡಿಎಆರ್) ಹುದ್ದೆಗಳ ನೇಮಕಾತಿಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಆ. ೦೫ ರಂದು ನಡೆಯಲಿರುವ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಭರವಸೆಗಳಿಗೆ ಮಾರುಹೋಗದಂತೆ ಜಿಲ್ಲಾ ಪೊಲೀಸ್ ನೇಮಕಾತಿ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅನೂಪಶೆಟ್ಟಿ ಅವರು ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ನಡೆಯಲಿರುವ ಈ ಪೊಲೀಸ್ ನೇಮಕಾತಿಯು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠ, ಅರ್ಹತೆ ಮತ್ತು ಮೀಸಲಾತಿಯ ಆಧಾರದ ಮೇಲೆ ನಡೆಯುತ್ತದೆ. ಈ ಹಿನ್ನೆಯಲ್ಲಿ ಯಾವುದೇ ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ಅಥವಾ ಯಾವುದೇ ವಿಧವಾದ ಪಾರಿತೋಷಕ ನೀಡುವುದನ್ನು ಮಾಡಬಾರದು. ಅಲ್ಲದೇ ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ. ಈ ದಿಸೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಮಾರು ಹೋಗಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭ್ಯರ್ಥಿಗಳಿಗೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.