ಕಷ್ಟಕರ ಪರಿಸ್ಥಿತಿಯಲ್ಲೂ ಯುಎಇಯಿಂದ ಶ್ರೀದೇವಿ ಮೃತದೇಹ ಭಾರತಕ್ಕೆ ತರಲು ನೆರವಾದ ಅಶ್ರಫ್

ಕಷ್ಟಕರ ಪರಿಸ್ಥಿತಿಯಲ್ಲೂ ಯುಎಇಯಿಂದ ಶ್ರೀದೇವಿ ಮೃತದೇಹ ಭಾರತಕ್ಕೆ ತರಲು ನೆರವಾದ ಅಶ್ರಫ್

ದುಬೈ, : ಕ್ಯಾಮೆರಾ ಫ್ಲ್ಯಾಷ್ ಹಾಗೂ ಲಕ್ಷಾಂತರ ಅಭಿಮಾನಿಗಳ ಕಣ್ಣು ತಪ್ಪಿಸಿ ಬಾಲಿವುಡ್ ನಟಿ ಶ್ರೀದೇವಿ ಪಾರ್ಥಿವ ಶರೀರವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನ ಸರಳ ಶವಾಗಾರಕ್ಕೆ ತಂದು, ಅಲ್ಲಿಂದ ಭಾರತಕ್ಕೆ ಸುಗಮವಾಗಿ ಸಾಗಿಸಲು ನೆರವಾದ ಕೇರಳ ಮೂಲದ ಈ ವ್ಯಕ್ತಿ ತೆರೆಮರೆಯ ನಾಯಕ. ಎಲ್ಲಾ ಮಾಧ್ಯಮಗಳಲ್ಲೂ ಇವರದ್ದೇ ಸುದ್ದಿ.

ಅಶ್ರಫ್ ಎಂದಷ್ಟೇ ಅಧಿಕೃತ ದಾಖಲೆಗಳಲ್ಲಿ ನೋಂದಾಯಿಸಿಕೊಂಡಿರುವ ಅಶ್ರಫ್ ಶೆರ್ರಿ ಥಾಮರಸ್ಸೇರಿ (44) ಮೂಲತಃ ಕೇರಳದವರು. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಬೇರೆ ದೇಶದ ಯಾರೇ ನಿಧನರಾದರೂ ಅವರ ಶವವನ್ನು ಸ್ವದೇಶಕ್ಕೆ ಸುಗಮವಾಗಿ ಸಾಗಿಸಲು ನೆರವಾಗುವುದು ಇವರ ವಿಶೇಷತೆ.

ಸಾಲದ ಹೊರೆ ಹೊತ್ತ ಕಾರ್ಮಿಕರಿಂದ ಹಿಡಿದು, ಆಗರ್ಭ ಶ್ರೀಮಂತರವರೆಗೆ ವಿಶ್ವದ 38 ದೇಶಗಳ 4,700ಕ್ಕೂ ಹೆಚ್ಚು ಮಂದಿಯ ಪಾರ್ಥಿವ ಶರೀರವನ್ನು ಸ್ವದೇಶಗಳಿಗೆ ಕಳುಹಿಸಲು ಅಶ್ರಫ್ ನೆರವಾಗಿದ್ದಾರೆ. ದೂರದ ದೇಶಗಳಿಂದ ಆಗಮಿಸಿದ ತನ್ನ ಸಹ ಪ್ರಜೆಗಳಿಗೆ ಈ ನೆರವನ್ನು ಯಾವ ಅಪೇಕ್ಷೆಯೂ ಇಲ್ಲದೇ ನೀಡುತ್ತಾ ಬಂದಿದ್ದಾರೆ.

“ಅವರಿಗೆ ನೀವು ಅಥವಾ ನಾವು ಎಲ್ಲರೂ ಒಂದೇ ಹಾಗೂ ಪ್ರತಿಯೊಬ್ಬರೂ ಸಮಾನರು. ಒಬ್ಬ ವ್ಯಕ್ತಿ ತನ್ನ ಕೊಠಡಿಯಲ್ಲಿ ಅಸುನೀಗಿದರೆ, ಅವರನ್ನು ಆಸ್ಪತ್ರೆಗೆ ಒಯ್ದು ಪೊಲೀಸ್ ಶವಾಗಾರದಲ್ಲಿ ಪರೀಕ್ಷೆಗೆ ಒಳಪಡಿಸುತ್ತಾರೆ. ಈ ಪ್ರಕ್ರಿಯೆ ದುಬೈ ಅಥವಾ ಶಾರ್ಜಾ ಎಲ್ಲೆಡೆಯೂ ಇದೆ. ಇದರಲ್ಲಿ ಶ್ರೀಮಂತ- ಬಡವ ಎಂಬ ಬೇಧ ಭಾವ ಇಲ್ಲ” ಎಂದು ಅಸೋಸಿಯೇಟೆಡ್ ಪ್ರೆಸ್‍ಗೆ ನೀಡಿದ ಸಂದರ್ಶನದಲ್ಲಿ ಅಶ್ರಫ್ ಹೇಳಿದ್ದಾರೆ. ಮಂಗಳವಾರವೇ ಅಶ್ರಫ್ ಅವರು ಶ್ರೀದೇವಿ ಸೇರಿದಂತೆ ಮೃತಪಟ್ಟ ಐವರಿಗೆ ಹೆಗಲು ಕೊಟ್ಟಿದ್ದಾರೆ.

ಶ್ರೀದೇವಿ ನಿಧನದ ಬಳಿಕ ಅವರ ಪಾಸ್‍ಪೋರ್ಟ್ ತಕ್ಷಣ ರದ್ದು ಮಾಡಿದ ಭಾರತೀಯ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿದರು. ಆದರೆ ಪೊಲೀಸ್ ಕ್ಲಿಯರೆನ್ಸ್ ದೊರೆಯುವುದು ತಡವಾದದ್ದು ಪಾರ್ಥಿವ ಶರೀರ ಸಾಗಾಟ ವಿಳಂಬಕ್ಕೆ ಕಾರಣವಾಯಿತು. ಈ ವೇಳೆ ಪತ್ರಕರ್ತರು, ಅಧಿಕಾರಿಗಳು ಸೇರಿದಂತೆ ಹಲವು ಮಂದಿ ತಮಗೆ ಕರೆ ಮಾಡಿದ್ದಾಗಿ ಅಶ್ರಫ್ ಹೇಳಿದ್ದಾರೆ.

ಕ್ಲಿಯರೆನ್ಸ್ ಸಿಕ್ಕಿದ ತಕ್ಷಣ ಅವರು ಜನದಟ್ಟಣೆಯ ಪ್ರದೇಶದಲ್ಲಿರುವ ಸರ್ಕಾರಿ ಶವಾಗಾರಕ್ಕೆ ತೆರಳಿ, ಅಗತ್ಯ ಕಾಗದಪತ್ರಗಳನ್ನು ಅಧಿಕಾರಿಗಳಿಗೆ ನೀಡಿ ಶ್ರೀದೇವಿ ಹಾಗೂ ಇತರ ಮೂವರ ಮೃತದೇಹಗಳನ್ನು ಹಸ್ತಾಂತರಿಸಲು ಅನುಕೂಲ ಮಾಡಿಕೊಟ್ಟರು. ಭಾರತದಿಂದ ಕೋಟ್ಯಧೀಶ ಉದ್ಯಮಿಯೊಬ್ಬರು ಕಳುಹಿಸಿದ್ದ ಖಾಸಗಿ ಜೆಟ್‍ಗೆ ಆ್ಯಂಬುಲೆನ್ಸ್ ಮೂಲಕ ಶವ ಸಾಗಿಸುವಲ್ಲಿ ಥಾಮರಸ್ಸೇರಿ ಪ್ರಮುಖ ಪಾತ್ರ ವಹಿಸಿದರು. ಬಳಿಕ ಮಂಗಳವಾರ ರಾತ್ರಿ ಪತ್ನಿ ಹಾಗೂ ಮಗಳ ಜತೆ ಅಜ್ಮನ್‍ನಲ್ಲಿ ವಾಸವಿರುವ ತಮ್ಮ ಮನೆಗೆ ಆಗಮಿಸಿದರು.ಜೀವನಾಧಾರಕ್ಕೆ ಇಲ್ಲಿ ಮೆಕ್ಯಾನಿಕ್ಸ್ ಅಂಗಡಿ ನಡೆಸುತ್ತಿರುವ ಅಶ್ರಫ್ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಗಮನ ಹರಿಸುತ್ತಾರೆ. ಇವರಿಗೆ ಸಂದ ಪ್ರಶಸ್ತಿ ಗೌರವಗಳು ಸಾಲು ಸಾಲಾಗಿ ಮನೆಯಲ್ಲಿ ಕಂಗೊಳಿಸುತ್ತವೆ. ಪ್ರಧಾನಿ ಮೋದಿಯನ್ನು ಭೇಟಿಯಾದ ಸಂದರ್ಭದಲ್ಲಿ ತೆಗೆಸಿಕೊಂಡ ಫೋಟೊ ಗೋಡೆಯಲ್ಲಿ ನೇತಾಡುತ್ತಿದೆ. “ದೇವರ ಆಶೀರ್ವಾದಕ್ಕಾಗಿ ನಾನು ಇದನ್ನು ಮಾಡುತ್ತಿದ್ದೇನೆ. ಇಲ್ಲಿ ಬೇರೆ ದೇಶದ ಮಂದಿ ಮೃತಪಟ್ಟಾಗ ಮೃತದೇಹ ಸಾಗಿಸುವ ಪ್ರಕ್ರಿಯೆ ಬಗ್ಗೆ ಅವರಿಗೆ ತಿಳಿದಿರುವುದರಿಲ್ಲ. ಆದ್ದರಿಂದ ಈ ನೆರವು ನೀಡುತ್ತಿದ್ದೇನೆ” ಎಂದು ಅವರು ಹೇಳುತ್ತಾರೆ.