ಕಲಿಸುತ್ತ ಕಲಿಯುವವನೇ ಶಿಕ್ಷಕ: ಎ.ಎಂ. ಮದರಿ

ಸ್ನೇಹ/ಸಮ್ಮಿಲನ *25 ವರ್ಷಗಳ ಬಳಿಕ ಸಂಭ್ರಮಿಸಿದ ವಿದ್ಯಾರ್ಥಿಗಳು *ಹಳೆಯ ವಿದ್ಯಾರ್ಥಿಗಳ ಪ್ರೀತಿ-ಗೌರವಕ್ಕೆ ಭಾವುಕರಾದ ಶಿಕ್ಷಕರು

ಕೊಪ್ಪಳ, ಜುಲೈ 27: ಶಿಕ್ಷಕನಾದವ ವಿದ್ಯಾರ್ಥಿಗಳಿಗೆ ಕಲಿಸುವ ಜೊತೆಗೆ ತಾನೂ ಕೂಡ ನಿರಂತರವಾಗಿ ಕಲಿಯುತ್ತಾ ಸಾಗುತ್ತಾನೆ. ಯಾವುದೇ ಮತ್ಸರ ಭಾವಗಳಿಗೆ ಅವಕಾಶವಿಲ್ಲದ ಏಕೈಕ ವೃತ್ತಿ ಶಿಕ್ಷಕರದ್ದಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎ.ಎಂ.ಮದರಿ ಹೇಳಿದರು.

ತಾಲೂಕಿನ ಭಾಗ್ಯನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ 1994-95ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

25 ವರ್ಷಗಳ ನಂತರ ಅಂದಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಿರುವುದು ಭಾವುಕ ಸಂದರ್ಭವಾಗಿದೆ.  ಭಾಗ್ಯನಗರದಲ್ಲಿ ಸುಮಾರು 4 ದಶಕಗಳ ಹಿಂದೆ ಸರಕಾರಿ ಪ್ರೌಢಶಾಲೆ ಆರಂಭವಾದಾಗ ಶಿಕ್ಷಣದ ಗುಣಮಟ್ಟದ ಬಗ್ಗೆ ಉದಾಸೀನ ಭಾವನೆ ಹೊಂದಿದ್ದವರೇ ಹೆಚ್ಚಾಗಿದ್ದರು. ಶಾಲೆಯ ಮೊದಲ ಮುಖ್ಯೋಪಾಧ್ಯಾಯ ಚನ್ನಬಸವಯ್ಯ ಹಾಗೂ ಸಿಬ್ಬಂದಿ ಬಿ.ಜಿ.ಮಡಿವಾಳರ್ ಅಂಥವರ ಶ್ರಮದಿಂದ ಕ್ರಮೇಣ ಈ ಶಾಲೆಗೆ ಉತ್ತಮ ಹೆಸರು ಪ್ರಾಪ್ತಿಯಾಯಿತು. ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಹುಡುಕಿಕೊಂಡು ಈ ಶಾಲೆಯಲ್ಲಿ ಪ್ರವೇಶ ಪಡೆಯಲು ತುದಿಗಾಲಲ್ಲಿ ನಿಲ್ಲುವ ಮಟ್ಟಕ್ಕೆ ಬೆಳೆಯಲು ಇಲ್ಲಿನ ಅಂದಿನ ಶಿಕ್ಷಕರ ಕೊಡುಗೆ ಸ್ಮರಣೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಭಾಗ್ಯನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಪಾಟೀಲ ಮಾತನಾಡಿ, ಜಿಲ್ಲೆಯಾದ್ಯಂತ ಕಳೆದ ಏಳೆಂಟು ವರ್ಷಗಳಿಂದ ಗುರುವಂದನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದನ್ನು ನೋಡಿದಾಗ ನಮ್ಮಲ್ಲಿ ಸಂಸ್ಕಾರ ಮತ್ತೇ ಜಾಗೃತವಾಗುತ್ತಿರುವುದು ಸ್ಪಷ್ಟ. ಶಿಕ್ಷಣ ಎಂದರೆ ಕಲಿಯುವ ಅವಧಿಯ ನಂತರ ನಮ್ಮಲ್ಲಿ ಉಳಿಯುವ ಭಾವನೆಗಳಾಗಿವೆ. ಗಟ್ಟಿಯಾದ ನೆನಪುಗಳು ಬಿಡದೇ ಕಾಡುತ್ತವೆ ಎಂದರು.

ನಿವೃತ್ತ ಉಪನ್ಯಾಸಕ ಡಿ.ಎಂ.ಬಡಿಗೇರ ಮಾತನಾಡಿ, ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧ ಅದ್ಭುತವಾದದ್ದು. ವ್ಯಕ್ತಿ ಇಲ್ಲದ ನಂತರವೂ ಆತನ ಬದುಕು-ಸಾಧನೆಗಳು ಉಳಿಯುವಂತಾಗುವುದೇ ನಿಜವಾದ ಸಾಧನೆ. ನಾವು ಈ ಶಾಲೆಯಲ್ಲಿ ಪಾಠ ಮಾಡುವಾಗ ನಿತ್ಯ ಕೊಪ್ಪಳದಿಂದ ಭಾಗ್ಯನಗರ ಹಾಗೂ ಭಾಗ್ಯನಗರದಿಂದ ಕೊಪ್ಪಳಕ್ಕೆ ಸೈಕಲ್ ರ್ಯಾಲಿ ನಡೆಯುತ್ತಿದ್ದವು ಎಂದು ಅಂದಿನ ವಿದ್ಯಾರ್ಥಿಗಳ ಸೈಕಲ್ ಸವಾರಿಯನ್ನ ನೆನಪಿಸಿಕೊಂಡರು.

 ಭಾಗ್ಯನಗರ ಸರಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯಿನಿ ಭಾರತಿ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಶಾಲೆಯ ಅಂದಿನ ಶಿಕ್ಷಕರಾಗಿದ್ದ ನಿಂಗಪ್ಪ ಬ್ಯಾಳಿಶೆಟ್ಟರ್,  ವೀರಣ್ಣ ಶಿಗೇನಹಳ್ಳಿ, ಶಿವಪ್ಪ ತೊಂಡಿಹಾಳ, ಸೋಮಣ್ಣ ಚಿತ್ರಗಾರ, ಬಿ.ಜೆ.ಮಡಿವಾಳರ್, ಎ.ವಿ.ಉಪಾಧ್ಯಾಯ, ಶರಣಬಸಪ್ಪ ಹಳ್ಳಿಕೇರಿ, ಖಾಜಾಸಾಬ್ ಬೂದಗುಂಪಿ, ಈಶ್ವರಪ್ಪ ನಾಲವಾಡ ಸೇರಿದಂತೆ ಇತರರಿಗೆ ಸನ್ಮಾನಪತ್ರ-ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಅಂದಿನ ವಿದ್ಯಾರ್ಥಿಗಳಾಗಿದ್ದ ರೇಣುಕಾ ಮಣ್ಣೂರ, ಜಗದೀಶ ಹನುಮನಾಳ, ಜ್ಯೋತಿ ತುಂಬಳದ, ಗುರುರಾಜ ಬನ್ನಿಗೋಳ, ಶರಣು ತಿಳಿಗೋಳ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಅಂದಿನ ಶಿಕ್ಷಕರಾಗಿದ್ದ ದಿ.ವಿ.ಎಂ.ರೋಣದ, ಕೆ.ಎಂ.ಮಾಲಶೆಟ್ಟಿ ಸೇರಿದಂತೆ ನಿಧನವಾಗಿರುವ ಎಂಟು ಜನ ಸಹಪಾಠಿಗಳ ಗೌರವಾರ್ಥ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಭಾಕರ ಪಟವಾರಿ, ಮಾರುತಿ ಚಿತ್ರಗಾರ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 1994-95ರ ಸಾಲಿನ ವಿದ್ಯಾರ್ಥಿನಿಯರಾದ ಗಾಯತ್ರಿ ಹಾಗೂ ಸುಮಿತ್ರಾ ಬೆಟಗೇರಿ ಪ್ರಾರ್ಥಿಸಿದರು.  ಪರಶುರಾಮ ನಾಯಕ ಸ್ವಾಗತಿಸಿದರು. ಡಿ.ಗುರುರಾಜ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಡೊಳ್ಳಿನ್  ಆಶಯ ನುಡಿಗಳನ್ನಾಡಿದರು. ರವಿ ಕುರಗೋಡ ವರದಿ ವಾಚಿಸಿದರು. ಬಸವರಾಜ ಕರುಗಲ್ ನಿರೂಪಿಸಿದರು. ಗಿರೀಶ್ ಪಾನಘಂಟಿ ವಂದಿಸಿದರು.

ಬಹ್ರೇನ್ನಿಂದ ಬಂದ ಹಳೆಯ ವಿದ್ಯಾರ್ಥಿ-ಜರ್ಮನಿಯಿಂದ ವಿಡಿಯೋ ಸಂದೇಶ:

ಭಾಗ್ಯನಗರ ಸರಕಾರಿ ಪ್ರೌಢಶಾಲೆಯಲ್ಲಿ 1994-95ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪೂರೈಸಿ ಈಗ ಬಹ್ರೇನ್ ದೇಶದಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿರುವ ಚಂದ್ರಕಾಂತ ಜಾಧವ 25 ವರ್ಷಗಳ ಬಳಿಕ ತಾನು ಕಲಿತ ಶಾಲೆಗೆ ಮರಳಿ ಭೇಟಿ ನೀಡಿದ್ದು ಹಾಗೂ ಜರ್ಮನಿ ದೇಶದಲ್ಲಿ ನೆಲೆಸಿರುವ ಸಾಫ್ಟ್ವೆರ್ ಇಂಜನೀಯರ್ ಪ್ರಶಾಂತ ಮಾದಿನೂರು ವಿಡಿಯೋ ಮೂಲಕ ತಮ್ಮ ಸಂದೇಶ ಕಳಿಸಿ ಅಂದಿನ ನೆನಪುಗಳನ್ನು ಮೆಲುಕು ಹಾಕಿದ್ದು ವಿಶೇಷವಾಗಿತ್ತು. ಬೀದರ್, ಬೆಂಗಳೂರು, ರಾಯಚೂರು, ಧಾರವಾಡ, ಗದಗ, ಬಳ್ಳಾರಿ, ಬೆಳಗಾವಿ ಮತ್ತಿತರ ಜಿಲ್ಲೆಗಳಿಂದ ಹಳೆಯ ವಿದ್ಯಾರ್ಥಿಗಳು ಕುಟುಂಬಸಮೇತರಾಗಿ ಆಗಮಿಸಿ ಸಂಭ್ರಮ ಹಂಚಿಕೊಂಡಿದ್ದು, ನೋಡುಗರನ್ನು ಸಹ ಭಾವುಕರನ್ನಾಗಿಸಿತು.
ಆರ್ಥಿಕ ಸಂಕಷ್ಟ ಎದುರಿಸುವ ಕುಟುಂಬಗಳಿಗೆ ಸಹಾಯ ಹಸ್ತ:

ಭಾಗ್ಯನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಹಳೆಯ ವಿದ್ಯಾರ್ಥಿಗಳ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ 1994-95ನೇ ಸಾಲಿನ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ತೆರೆದಿದ್ದು, ಖಾತೆಗೆ ಹಳೆಯ ವಿದ್ಯಾರ್ಥಿಗಳು ಪ್ರತಿ ತಿಂಗಳು ಸಾಧ್ಯವಾದಷ್ಟು ಹಣ ಹಾಕಿದರೆ ಆ ಖಾತೆಯಲ್ಲಿ ಜಮೆಯಾಗುವ ಹಣದಲ್ಲಿ ಪ್ರತಿ ವರ್ಷ ಸ್ನೇಹಿತರ ಕುಟುಂಬದ ಆರ್ಥಿಕ ಸಂಕಷ್ಟಗಳಿಗೆ ಸಹಾಯ ಹಸ್ತ ಚಾಚುವ ಯೋಜನೆಗೆ ಚಾಲನೆ ನೀಡಲಾಯಿತು. ಗುರುವಂದನೆ ಸಲ್ಲಿಸಿದ ವಿದ್ಯಾರ್ಥಿಗಳು ಕಾರ್ಯಕ್ರಮದ ಸ್ಮರಣಾರ್ಥ ಭಾಗ್ಯನಗರ ಪ್ರೌಢಶಾಲೆಗೆ ಊಟದ ತಟ್ಟೆ-ಲೋಟಗಳನ್ನು ದೇಣಿಗೆ ನೀಡಿದರು.  

Please follow and like us:
error