ಕನಕಾಂಬರ ಬೆಳೆದು ಆರ್ಥಿಕ ಸಬಲತೆ ಪಡೆದ ರೈತ ಮರಿಯಪ್ಪ ತಳವಾರ


ಕೊಪ್ಪಳ ಅ.   ಕೊಪ್ಪಳ ತೋಟಗಾರಿಕೆ ಇಲಾಖೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸೌಲಭ್ಯ ಪಡೆದು ಕನಕಾಂಬರ ಬೆಳೆದು ಆರ್ಥಿಕ ಸಬಲತೆ ಪಡೆದ ರೈತ ಮರಿಯಪ್ಪ ಬಿ. ತಳವಾರ.
ರೈತ ಮರಿಯಪ್ಪ ತಂ/ ಬೀರಪ್ಪ ತಳವಾರ, ವಿಸ್ತೀರ್ಣ-೨೨ ಎಕರೆ, ಬೆಳೆ-ಕನಕಾಂಬರ, ವಿಸ್ತೀರ್ಣ-೧ ಹೆ, ಯೋಜನೆ- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ೨೦೧೬-೧೭ ನೇ ಸಾಲಿನಲ್ಲಿ.
ಮರಿಯಪ್ಪ ಬಿ. ತಳವಾರ ಅವರದು ಅವಿಭಕ್ತ ಕುಟುಂಬ. ಒಟ್ಟು ೪೦ ಸದಸ್ಯಸರಿರುವ ಪರಿಶಿಷ್ಟ ಜಾತಿಗೆ ಸೇರಿದ ಇವರು ವ್ಯವಸಾಯವನ್ನೆ ನಂಬಿದ ಅವಿಭಕ್ತ ಕುಟುಂಬ. ಎಲ್ಲಾ ಸದಸ್ಯರು ಕೃಷಿಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದೊಡ್ಡವರಾದ ರಾಮಣ್ಣ ಹಾಗೂ ಕಿರಿಯ ಸಹೋದರ ಹನುಮಂತ ಇಬ್ಬರೂ ಹೊಲದಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತಾರೆ. ಕೃಷಿ ಬೆಳೆಗಳಾದ ಮೆಕ್ಕೆಜೋಳ, ಸಜ್ಜೆ, ಶಂಗಾ ಮುಂತಾದವುಗಳ ಜೊತೆಗೆ ದೈನಂದಿನ ಖರ್ಚಿಗೆ ತರಕಾರಿಗಳನ್ನು ಬೆಳಯುತ್ತಾರೆ. ೨ ಕೊಳವೆ ಬಾವಿಗಳಿಂದ ಇವರಿಗೆ ನೀರಿನ ಅನುಕೂಲತೆ ಇದೆ. ಆದರೂ ಯಾವುದೇ ಲಾಭಾದಾಯಕ ಬೆಳೆ ಇವರು ಬೆಳೆದಿರುವುದಿಲ್ಲ. ಅಲ್ಲದೇ ಯಾವುದೇ ಸರಕಾರಿ ಯೋಜನೆಯ ಸದ್ಬಳಕೆಯನ್ನು ಮಾಡಿಕೊಂಡಿರಲಿಲ್ಲ.
ರಾಮಣ್ಣ ತಳವಾರರವರು ಒಮ್ಮೆ ಸಹಾಯಕ ತೋಟಗಾರಿಕೆ ಅಧಿಕಾರಿ ಓಬಣ್ಣ ಅವರ ಸಂಪರ್ಕದಲ್ಲಿ ಬಂದಾಗ ಪರಿಶಿಷ್ಟ ಜಾತಿಯವರಿಗೆ ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು. ಆಗ ಇವರು ಮಧ್ಯಮಾವದಿಯ ಕನಕಾಂಬರ ಬೆಳೆಯಲು ಮುಂದಾದರು. ಇದಕ್ಕೆ ಕಾರಣ ಕನಕಾಂಬರ ಪುಷ್ಪ-ಮಧ್ಯಮಾವದಿ ಕಡಿಮೆ ನಿರ್ವಹಣೆ ಇರುವ ಬೆಳೆ. ಇರಕಲ್ಲಗಡ, ಕೊಪ್ಪಳ ಮಾರುಕಟ್ಟೆಯಲ್ಲಿ ಒಳ್ಳೆ ಬೇಡಿಕೆ ಎಂದರಿತು ಕನಕಾಂಬರ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಓಬಣ್ಣನವರು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ೧ ಹೆ. ಕನಕಾಂಬರ ಬೆಳೆಯಲು ದೊರೆಯುವ ಎಲ್ಲಾ ಸಹಾಯಧನದ ಹಾಗೂ ಹನಿ ನೀರಾವರಿ ಅಳವಡಿಸಿಕೊಳ್ಳಲು ಇರುವ ಶೇ.೯೦ ರ ಸಹಾಯಧನದ ಬಗ್ಗೆ ವಿವರಿಸಿ ಹೇಳಿದ್ದಾರೆ. ಆಗ ರಾಮಣ್ಣ ತಮ್ಮ ತಂದೆ ಮರಿಯಪ್ಪ ರವರೊಂದಿಗೆ ಚರ್ಚಿಸಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪುಷ್ಬ ಬೆಳೆಗೆ ದೊರೆಯುವ ಸಹಾಯಧನ ಬಗ್ಗೆ ತಿಳಿದುಕೊಂಡು ಕನಕಾಂಬರ ಬೆಳೆಯಲು ನಿರ್ಧರಿಸಿದ್ದಾರೆ.
ಕನಕಾಂಬರ ಬೆಳೆಯ ನಿರ್ವಹಣೆ : ಸ್ಥಳೀಯ ತಳಿ (ಅರ್ಕಾ ಅಂಬರ) ಆರಿಸಿಕೊಂಡು ಇವರು ೨ ಎಕರೆ ೨೦ ಗುಂಟೆ (೧ ಹೆ) ಪ್ರದೇಶದಲ್ಲಿ ಸಾಲಿನಿಂದ ಸಾಲಿಗೆ ೨.೫೦ ಅಡಿ ಮತ್ತು ಗಿಡದಿಂದ ಗಿಡಕ್ಕೆ ೧.೫೦ ಅಡಿ ಅಂತರದಲ್ಲಿ ಒಟ್ಟು ೩೦೦೦೦ ಸಾವಿರ ಸಸಿಗಳನ್ನು ನಾಟಿ ಮಾಡಿರುತ್ತಾರೆ.
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ತಜ್ಞರ ಮಾರ್ಗದರ್ಶನದಂತೆ ಗೊಬ್ಬರ, ನೀರಿನ ನಿರ್ವಹಣೆ ಮಾಡಿರುತ್ತಾರೆ. ಸೊರಗು ರೋಗ ಕಂಡಾಗ ಕಾರ್ಬೆಂಡಾಜಿಮ್, ಥಯೋಫಿನೈಟ್ ಮೀಥೈಲ್ ನಂತಹ ಶಿಲೀಂದ್ರ ನಾಶಕಗಳನ್ನು ಸಿಂಪಡಿಸಿದ್ದಾರೆ. ನೀರಿನಲ್ಲಿ ಕರಗುವ ಗೊಬ್ಬರಗಳಾದ ೧೯:೧೯:೧೯, ಸತು ಮತ್ತು ಬೋರಾನ ಸಿಂಪಡಿಸಿದ್ದಾರೆ. ೮ನೇ ತಿಂಗಳಿನಿಂದ ಉತ್ತಮ ಇಳುವರಿ ಕೊಡುತ್ತಿರುವ ಕನಕಾಂಬರ ಬೆಳೆ ಸರಾಸರಿ ಐದು ಕೆ.ಜಿ. ದಿನಾಲೂ ಇಳುವರಿ ಕೊಡುತ್ತಲಿದೆ. ಸರಾಸರಿ ಪ್ರತಿ ತಿಂಗಳಿಗೆ ೧ ಕ್ವಿಂಟಾಲಗೂ ಹೆಚ್ಚಿನ ಇಳುವರಿ ಪಡೆದು ಸ್ಥಳಿಯ ಮಾರುಕಟ್ಟೆಯಲ್ಲಿ ರೂ.೧೭೦ ರಂತೆ ಒಡಂಬಡಿಕೆ ಮಾಡಿಕೊಂಡು (ಪಿ-೩) ರೂ. ೨.೦೦ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಕನಕಾಂಬರ ಪುಷ್ಪ ಕೃಷಿಯಿಂದ ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ. ತಿಂಗಳಿಗೆ ಲಕ್ಷಾನುಗಟ್ಟಲೆ ಆದಾಯ ತಂದು ಕೊಡುವ ಈ ಪುಷ್ಬ ನಮ್ಮ ಬಾಳಿಗೆ ಬೆಳಕಾಗಿದೆ ಎನ್ನುತ್ತಾರೆ ರೈತ ಮರಿಯಪ್ಪರವರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಸಹಾಯಧನ ಪಡೆದು ಕನಕಾಂಬರ ಬೆಳೆದು ಯಶಸ್ವಿಯಾಗಿ ರೈತ ಮರಿಯಪ್ಪರವರು ಈ ಭಾಗದ ಮಾದರಿ ರೈತರಾಗಿದ್ದಾರೆ. ಅವರ ಈ ಸಾಧನೆ ಮತ್ತೋಬ್ಬರಿಗೆ ಸ್ಪೂರ್ತಿ, ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ್ ಅಹ್ಮದ್ ಸೋಂಪೂರ.
ಇದೇ ಸಂದಂರ್ಭದಲ್ಲಿ ಅನೂಸೂಚಿತ ಜಾತಿ ಮತ್ತು ಪಂಗಡದವರಿಗೆ ಅರ್ಧ ಎಕರೆಯಿಂದ ೫ ಎಕರೆ ವರೆಗೂ ಪುಷ್ಪ ಬೆಳೆ ಅಲ್ಲದೇ ಇತರೆ ಬೆಳೆ ಬೆಳೆಯಲು ಅವಕಾಶವಿದ್ದು, ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ರಾಮಣ್ಣ ತಳವಾರ ಮೊ.ಸಂ. ೯೦೦೮೮೨೯೧೬೩, ಓಬಣ್ಣ (ಸತೋಅ) ಮೊ.ಸಂ. ೯೭೪೧೦೫೭೦೪೭, ಇವರನ್ನು ಸಂಪರ್ಕಿಸಬಹುದಾಗಿದೆ .

Please follow and like us:
error