ಕಟ್ಟಡ-ವಾಣಿಜ್ಯ ಮಳಿಗೆಗಳಿಗೆ ತೆರಿಗೆ ಕಡಿಮೆ ಮಾಡಲು ಸಚಿವರಿಗೆ ಸಂಸದರಿಂದ ಮನವಿ

ಕೊಪ್ಪಳ ಮೇ : ಕಟ್ಟಡ-ವಾಣಿಜ್ಯ ಮಳಿಗೆಗಳಿಗೆ ತೆರಿಗೆ ಕಡಿಮೆ ಮಾಡಲು ಕರ್ನಾಟಕ ಸರ್ಕಾರದ ಪೌರಾಡಳಿತ ಸಚಿವರಿಗೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಮನವಿ ಸಲ್ಲಿಸಿದ್ದಾರೆ.
ಕೊಪ್ಪಳ ನಗರಸಭೆ ವತಿಯಿಂದ ೨೦೨೦-೨೧ನೇ ಸಾಲಿನ ಕಟ್ಟಡಗಳಿಗೆ ಶೇ.೨೦ ರಷ್ಟು ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ.೩೦ ರಷ್ಟು ತೆರಿಗೆಯನ್ನು ಹೆಚ್ಚು ಮಾಡಿ ಪಾವತಿಸಲು ಆದೇಶ ಮಾಡಿರುತ್ತಾರೆಂದು ಸಂಸದ ಕರಡಿ ಸಂಗಣ್ಣ ಅವರಿಗೆ ಕೊಪ್ಪಳ ನಾಗರಿಕ ಸಮಿತಿ ಅವರಿಂದ ಮನವಿ ಸಲ್ಲಿಸಿರುತ್ತಾರೆ. ಕೊಪ್ಪಳ ಭಾಗದಲ್ಲಿ ಉಂಟಾದ ಬರಗಾಲ ಮತ್ತು ವಿಶ್ವದಾದ್ಯಂತ ಉಲ್ಬಣಿಸಿರುವ ಕೋವಿಡ್-೧೯ ಮಹಾಮಾರಿ ವೈರಸ್ ಸಂಕಷ್ಟಕ್ಕೆ ಸಿಲುಕಿ ರಾಷ್ಟ್ರದಲ್ಲಿ ಅಘೋಷಿತ ಲಾಕ್‌ಡೌನ್‌ನಿಂದ ನಗರದ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತುಂಬಾ ತೊಂದರೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಮನೆಗಳ ಹಾಲಿ ಇರುವ ವಾರ್ಷಿಕ ಆರ್ಥಿಕ ತೆರಿಗೆಯನ್ನು ಕಟ್ಟಲು ಸಹ ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಕೋವಿಡ್-೧೯ ಪ್ರಯುಕ್ತ ನಗರದ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಕಳೆದ ೨ ರಿಂದ ೩ ತಿಂಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಅಲ್ಲದೇ ಪುನರಾಂಭಿಸಲು ಅನಿರ್ದಿಷ್ಟಾವಧಿಯ ಬಂದ್ ಮುಂದುವರೆದಿದೆ. ಈಗಾಗಲೇ ಕೊರೋನಾದಿಂದಾಗಿ ಸಾರ್ವಜನಿಕರಿಗೆ ಆಗಿರುವ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರ ನೆರವಿಗೆ ಧಾವಿಸಿ ಹಲವಾರು ಆರ್ಥಿಕ ಪರಿಹಾರಗಳನ್ನು ಘೋಷಿಸುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರಸಭೆಯವರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ತೆರಿಗೆ ಹೆಚ್ಚಿಗೆ ಮಾಡಿರುವುದು ಸೂಕ್ತವಾಗಿರುವುದಿಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿರುತ್ತದೆ.
ತಾವುಗಳು ಸಾರ್ವಜನಿಕರ, ಬಡವರ, ಮಧ್ಯಮ ವರ್ಗದವರ, ವ್ಯಾಪಾರಸ್ಥರ, ಕಟ್ಟಡಗಳ ಮಾಲೀಕರ, ವಾಣಿಜ್ಯ ಮಳಿಗೆಗಳ ಮತ್ತು ಹೋಟೆಲ್, ವಸತಿ ಗೃಹ, ಚಿತ್ರಮಂದಿರ, ಕಲ್ಯಾಣ ಮಂಟಪ ಮಾಲೀಕರ ಹಿತದೃಷ್ಟಿಯಿಂದ ಕೊಪ್ಪಳ ನಗರಸಭೆಯಿಂದ ಪ್ರಸಕ್ತ ವರ್ಷದಿಂದ ತೆರಿಗೆ ಹೆಚ್ಚಿಗೆ ಮಾಡಿರುವುದನ್ನು ರದ್ದುಗೊಳಿಸಿ ಹಿಂದಿನ ವರ್ಷದ ತೆರಿಗೆಯನ್ನೇ ಪಾವತಿಸಲು ನಗರಸಭೆಗೆ ಆದೇಶಿಸಬೇಕೆಂದು ಸಂಸದ ಕರಡಿ ಸಂಗಣ್ಣ ಅವರು ಮನವಿ ಮಾಡಿಕೊಂಡಿರುವುದಾಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Please follow and like us:
error