ಏ. ೧೮, ೧೯ ರಂದು ಕೊಪ್ಪಳದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ : ನಿಷೇದಾಜ್ಞೆ ಜಾರಿ

ಕೊಪ್ಪಳದಲ್ಲಿ ಏ. ೧೮ ಮತ್ತು ೧೯ ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೇಗಳು ಕೊಪ್ಪಳ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಲಯನ್ಸ್ ಸ್ವಾಮಿ ವಿವೇಕಾನಂದ ಸಂಯುಕ್ತ ಪ.ಪೂ ಕಾಲೇಜು, ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪ.ಪೂ ಕಾಲೇಜು, ಸರಕಾರಿ ಬಾಲಕರ ಪ.ಪೂ ಕಾಲೇಜು, ಬಸಮ್ಮ ಕಾತರಕಿ ವಿಜ್ಞಾನ, ಕಲಾ, ವಾಣಿಜ್ಯ ಪ.ಪೂ ಕಾಲೇಜು, ನವಚೇತನ ಪಿ.ಯು ಸೈನ್ಸ್ ರೆಸಿಡೆನ್ಶಿಯಲ್ ಕಾಲೇಜ್ ಭಾಗ್ಯನಗರ, ಸೇರಿ ಒಟ್ಟು ೬ ಪರೀಕ್ಷಾ ಕೇಂದ್ರಗಳಲ್ಲಿ ಏ. ೧೮ ಮತ್ತು ೧೯ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೪ ಗಂಟೆಯವರೆಗೆ ಜರುಗಲಿದ್ದು, ಪರೀಕ್ಷೆ ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ೧೯೩೭ರ ಕಲಂ ೧೪೪ ರನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಪೇಜರ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು, ಸಿಬ್ಬಂದಿ, ಜಾಗೃತ ದಳದವರನ್ನು ಹೊರತುಪಡಿಸಿ, ಉಳಿದವರ ಪ್ರವೇಶ ನಿಷೇಧಿಸಿದೆ. ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರ ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.