ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಕೊಪ್ಪಳ ಜಿಲ್ಲೆಯಲ್ಲಿ ಜೂ. ೨೧ ರಿಂದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ಜೂ. ೨೧ ರಿಂದ ೨೮ ರವರೆಗೆ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಜಿಲ್ಲೆಯ ೧೩ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ೧೯೩೭ರ ಕಲಂ ೧೪೪ ರನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಪೇಜರ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು, ಸಿಬ್ಬಂದಿ, ಜಾಗೃತ ದಳದವರನ್ನು ಹೊರತುಪಡಿಸಿ, ಉಳಿದವರ ಪ್ರವೇಶ ನಿಷೇಧಿಸಿದೆ. ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರ ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ವಿವರ : ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ಜೂ. ೨೧ ರಿಂದ ೨೮ ರವರೆಗೆ ಕೊಪ್ಪಳ ಜಿಲ್ಲೆಯ ೧೩ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷಾ ಕೇಂದ್ರಗಳ ವಿವರ ಇಂತಿದೆ. ಗಂಗಾವತಿ ತಾಲೂಕಿನ ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜು, ಎಂ.ಎನ್.ಎಮ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬೆಥಲ್ ಆಂಗ್ಲ ಪ್ರೌಢ ಶಾಲೆ ಹಾಗೂ ಲಯನ್ಸ ಮಾದರಿಯ ಪ್ರೌಢ ಶಾಲೆಯಲ್ಲಿ. ಕೊಪ್ಪಳ ತಾಲೂಕಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಎಸ್.ಎಫ್.ಎಸ್ ಪ್ರೌಢ ಶಾಲೆ, ಕಾಳಿದಾಸ ಪ್ರೌಢ ಶಾಲೆ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಸಕಾರಿ ಪದವಿ ಪೂರ್ವ ಕಾಲೇಜು ಭಾಗ್ಯನಗರ. ಕುಷ್ಟಗಿ ತಾಲೂಕಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಯಲಬುರ್ಗಾ ತಾಲೂಕಿನ ಸಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮಂಜುನಾಥ ಪ್ರೌಢ ಶಾಲೆಯ ಈ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ಜರುಗಲಿವೆ .