ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯ- ಗೂಳಪ್ಪ ಹಲಗೇರಿ

ಕೊಪ್ಪಳ ತಾಲೂಕಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ 

ಕೊಪ್ಪಳ : ನಮ್ಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಮಕ್ಕಳು ಸಾಕಷ್ಟು ಇದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಸ್ಪೂರ್ತಿ ಅಗತ್ಯ. ಅಲ್ಲದೇ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡುವುದರಿಂದ ಅವರ ಪ್ರತಿಭೆ ಹೊರಹೊಮ್ಮುತ್ತದೆ. ಹಾಗಾಗಿ ಪ್ರತಿಭೆಯನ್ನು ಗುರುತಿಸಲು ಸರಕಾರ ಪ್ರತಿಭಾ ಕಾರಂಜಿ ವೇದಿಕೆಗಳನ್ನು ಸೃಷ್ಟಿಸಿದ್ದು ಇಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು ಎಂದು ಜಿಲ್ಲಾ ಪಂಚಾಯತ್ ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಗೂಳಪ್ಪ ಹಗೇರಿ ಹೇಳಿದರು. ಅವರು ಕೊಪ್ಪಳದ ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜರುಗಿದ ಎರಡು ದಿನಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅವರಿಗೆ ಸ್ಪೂರ್ತಿ ನೀಡುವ ಕೆಲಸ ಶಿಕ್ಷಕರಿಂದ ಆಗಬೇಕಿದೆ. ಯಾವುದೇ ತಾರತಮ್ಯ ಮಾಡದೇ ಪ್ರತಿಭೆ ಇರುವಂತಹ ಮಕ್ಕಳಿಗೆ ತಕ್ಕಂತೆ ಪ್ರೋತ್ಸಾಹ ನೀಡಿದರೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯುವುದಕ್ಕೆ ಸಹಾಯವಾಗುತ್ತೆ. ಇದರಿಂದ ಜಿಲ್ಲೆಯ ಕೀರ್ತಿ ಹೆಚ್ಚಾಗುತ್ತದೆ. ನಮ್ಮ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಕೆಳಮಟ್ಟದಲ್ಲಿದೆ. ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಯತ್ನ ಮಾಡಬೇಕು. ನಮ್ಮ ಜಿಲ್ಲೆಯ ಫಲಿತಾಂಶ ಕನಿಷ್ಠ ಪ್ರಥಮ ೫ ಸ್ಥಾನಗಳಲ್ಲಾದರೂ ಗುರುತಿಸಿಕೊಳ್ಳುವಂತಾಗಲಿ. ಅದಕ್ಕೆ ನಮ್ಮ ಸಂಪೂರ್ಣ ಸಹಾಯ ಸಹಕಾರ ಇರುತ್ತದೆ , ಶಿಕ್ಷಕರು ಈ ದಿಸೆಯಲ್ಲಿ ಕಾಳಜಿಪೂರ್ವಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆದ ಕೊಪ್ಪಳ ತಾಲೂಕಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಎಲ್ಲಾ ಕ್ಲಸ್ಟರ್ ನ ಪ್ರತಿಭೆಗಳು ಭಾಗವಹಿಸಿದ್ದವು. ಕ್ಲಸ್ಟರ್ ನ ಶಿಕ್ಷಕ ಬಂಧುಗಳು ಭಾಗಹಿಸಿದ್ದರು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಬಾಗೇವಾಡಿ, ಕೋಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಳೆಪ್ಪ ಪೂಜಾರ್, ಪ್ರಭಾರಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅರವಿಂದ ಎಸ್.ಎಮ. ಹಾಗೂ ಸರಸ್ವತಿ ವಿದ್ಯಾಮಂದಿರ ಶಾಲೆಯ ಮುಖ್ಯಸ್ಥರಾದ ಆರ್.ಎಚ್.ಅತ್ತನೂರ, ಸಿಆರ್ ಪಿ ಚಂದ್ರಶೇಖರ ಹೇಳವರ, ಹನುಮಂತಪ್ಪ ಕುರಿ ಸೇರಿದಂತೆ ಇತರ ಸಿಆರ್‍ಪಿ ಹಾಗೂ ಬಿಆರ್‍ಪಿಗಳು ಉಪಸ್ಥಿತರಿದ್ದರು.

Please follow and like us:
error